27ದೀನರನ್ನು ಉದ್ಧರಿಸುವವನೂ, ಗರ್ವದ ಕಣ್ಣುಳ್ಳವರನ್ನು ತಗ್ಗಿಸಿಬಿಡುವವನೂ ನೀನಲ್ಲವೋ?
28ನೀನೇ ನನ್ನ ದೀಪವನ್ನು ಹೊತ್ತಿಸುವವನಲ್ಲವೇ; ನನ್ನ ದೇವರಾದ ಯೆಹೋವನು ನನಗೆ ಬೆಳಕನ್ನು ಕೊಟ್ಟು ಕತ್ತಲನ್ನು ಪರಿಹರಿಸುವವನು.
29ನಿನ್ನ ಬಲದಿಂದ ದಂಡಿನ ಮೇಲೆ ಬೀಳುವೆನು; ನನ್ನ ದೇವರ ಸಹಾಯದಿಂದ ಗೋಡೆಯನ್ನು ಹಾರುವೆನು.
30ದೇವರ ಮಾರ್ಗವು ಯಾವ ದೋಷವೂ ಇಲ್ಲದ್ದು; ಯೆಹೋವನ ವಚನವು ಶುದ್ಧವಾದದ್ದು. ಆತನು ಆಶ್ರಿತರೆಲ್ಲರಿಗೆ ಗುರಾಣಿಯಾಗಿದ್ದಾನೆ.
31ಯೆಹೋವನಲ್ಲದೆ ದೇವರು ಯಾರು? ನಮ್ಮ ದೇವರ ಹೊರತು ಶರಣನು ಎಲ್ಲಿ?
32ನನಗೆ ಶೌರ್ಯವೆಂಬ ನಡುಕಟ್ಟನ್ನು ಬಿಗಿಯುವವನೂ, ನನ್ನ ಮಾರ್ಗವನ್ನು ಸರಾಗ ಮಾಡುವವನೂ ದೇವರೇ.
33ನನ್ನ ಕಾಲನ್ನು ಜಿಂಕೆಯ ಕಾಲಿನಂತೆ ಚುರುಕು ಮಾಡುತ್ತಾನೆ; ನನ್ನನ್ನು ಉನ್ನತಪ್ರದೇಶಗಳಲ್ಲಿ ನಿಲ್ಲಿಸುತ್ತಾನೆ.
34ಆತನೇ ನನಗೆ ಯುದ್ಧವಿದ್ಯೆಯನ್ನು ಕಲಿಸಿದ್ದರಿಂದ ನಾನು ತಾಮ್ರದ ಬಿಲ್ಲನ್ನಾದರೂ ಉಪಯೋಗಿಸಬಲ್ಲೆನು.
35ನೀನೇ ನನಗೋಸ್ಕರ ಗುರಾಣಿಯನ್ನು ಹಿಡಿದು ರಕ್ಷಿಸಿದ್ದೀ. ನಿನ್ನ ಬಲಗೈ ನನಗೆ ಆಧಾರ; ನಿನ್ನ ಕೃಪಾಕಟಾಕ್ಷವು ನನಗೆ ದೊಡ್ಡಸ್ತಿಕೆಯನ್ನು ಉಂಟುಮಾಡಿದೆ.