95ದುಷ್ಟರು ನನ್ನನ್ನು ಸಂಹರಿಸಬೇಕೆಂದು ಹೊಂಚಿ ನೋಡುತ್ತಾರೆ, ನಾನು ನಿನ್ನ ಕಟ್ಟಳೆಗಳನ್ನೇ ಲಕ್ಷಿಸಿಕೊಂಡಿರುವೆನು.
96ಎಲ್ಲಾ ಸಂಪೂರ್ಣತೆಗೂ ಮೇರೆಯುಂಟೆಂದು ಬಲ್ಲೆನು, ಆದರೆ ನಿನ್ನ ಆಜ್ಞಾಶಾಸನವು ಅಪರಿಮಿತವಾದದ್ದು.
97ಮೆಮ್. ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ, ದಿನವೆಲ್ಲಾ ಅದೇ ನನ್ನ ಧ್ಯಾನ.
98ನಿನ್ನ ಆಜ್ಞೆಗಳ ಮೂಲಕ ನನ್ನ ವೈರಿಗಳಿಗಿಂತ ಬುದ್ಧಿವಂತನಾಗಿದ್ದೇನೆ, ಸದಾಕಾಲವೂ ಅವೇ ನನಗಿವೆ.
99ನಿನ್ನ ಕಟ್ಟಳೆಗಳು ನನ್ನ ಧ್ಯಾನವಾಗಿರುವುದರಿಂದ, ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ.
100ನಿನ್ನ ನಿಯಮಗಳನ್ನು ಕೈಗೊಂಡಿರುವುದರಿಂದ, ಹಿರಿಯರಿಗಿಂತ ವಿವೇಕಿಯಾಗಿದ್ದೇನೆ.
101ನಿನ್ನ ವಾಕ್ಯವನ್ನೇ ಅನುಸರಿಸಬೇಕೆಂದು, ನನ್ನ ಕಾಲುಗಳನ್ನು ಯಾವ ಕೆಟ್ಟ ದಾರಿಗೂ ಹೋಗದಂತೆ ಕಾದಿದ್ದೇನೆ.
102ನಾನು ನಿನ್ನ ವಿಧಿಗಳಿಂದ ಸ್ವಲ್ಪವೂ ತಪ್ಪಿಹೋಗಲಿಲ್ಲ, ಏಕೆಂದರೆ ನೀನು ನನಗೆ ಬೋಧಿಸಿದ್ದೀ.
103ನಿನ್ನ ನುಡಿಗಳು ನನ್ನ ನಾಲಿಗೆಗೆ ಎಷ್ಟೋ ರುಚಿಯಾಗಿವೆ, ಅವು ನನ್ನ ಬಾಯಿಗೆ ಜೇನು ತುಪ್ಪಕ್ಕಿಂತಲೂ ಸಿಹಿಯಾಗಿವೆ.
104ನಿನ್ನ ನಿಯಮಗಳ ಮೂಲಕ ವಿವೇಕಿಯಾದೆನು, ಸುಳ್ಳು ಮಾರ್ಗವನ್ನೆಲ್ಲಾ ನಾನು ದ್ವೇಷಿಸುತ್ತೇನೆ.
105ನೂನ್. ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ, ನನ್ನ ದಾರಿಗೆ ಬೆಳಕೂ ಆಗಿದೆ.
106ನಿನ್ನ ನೀತಿವಿಧಿಗಳನ್ನು ಅನುಸರಿಸುವೆನೆಂದು ಪ್ರಮಾಣಮಾಡಿದ್ದೇನೆ, ಅದನ್ನು ನೆರವೇರಿಸುವೆನು.
107ನಾನು ಬಹಳವಾಗಿ ಕುಗ್ಗಿಹೋಗಿದ್ದೇನೆ, ಯೆಹೋವನೇ, ನಿನ್ನ ವಾಕ್ಯಾನುಸಾರವಾಗಿ ನನ್ನನ್ನು ಚೈತನ್ಯಗೊಳಿಸು.
108ಯೆಹೋವನೇ, ನನ್ನ ಮನಃಪೂರ್ವಕವಾದ ಸ್ತುತಿ ಸಮರ್ಪಣೆಗಳನ್ನು, ದಯವಿಟ್ಟು ಅಂಗೀಕರಿಸು, ನಿನ್ನ ವಿಧಿಗಳನ್ನು ನನಗೆ ಕಲಿಸು.
109ನನ್ನ ಜೀವವು ಅಪಾಯದಲ್ಲಿದ್ದೆ, ಆದರೂ ನಿನ್ನ ಧರ್ಮಶಾಸ್ತ್ರವನ್ನು ಮರೆಯುವುದಿಲ್ಲ.
110ದುಷ್ಟರು ಬಲೆಯೊಡ್ಡಿದ್ದಾರೆ, ನಾನು ನಿನ್ನ ನಿಯಮಗಳಿಂದ ತಪ್ಪಿಹೋಗುವುದಿಲ್ಲ.
111ನಿನ್ನ ಕಟ್ಟಳೆಗಳನ್ನು ನನ್ನ ನಿತ್ಯಸ್ವತ್ತಾಗಿ ಆರಿಸಿಕೊಂಡಿದ್ದೇನೆ, ಅವು ನನ್ನ ಹೃದಯಕ್ಕೆ ಉಲ್ಲಾಸಕರವಾಗಿವೆ.
112ಕಡೆಯವರೆಗು ಯಾವಾಗಲೂ ನಿನ್ನ ನಿಬಂಧನೆಗಳನ್ನು ಕೈಗೊಳ್ಳುವುದಕ್ಕೆ ಮನಸ್ಸುಮಾಡಿದ್ದೇನೆ.
113ಸಾಮೆಕ್. ಚಂಚಲ ಮನಸ್ಸುಳ್ಳವರನ್ನು ದ್ವೇಷಿಸುತ್ತೇನೆ, ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುತ್ತೇನೆ.
114ನನ್ನ ಆಶ್ರಯವೂ, ಗುರಾಣಿಯೂ ನೀನೇ, ನಿನ್ನ ವಾಕ್ಯವನ್ನೇ ನಿರೀಕ್ಷಿಸಿಕೊಂಡಿದ್ದೇನೆ.
115ದುಷ್ಟರೇ, ತೊಲಗಿರಿ, ನನ್ನ ದೇವರ ಆಜ್ಞೆಗಳನ್ನು ಕೈಗೊಳ್ಳುವೆನು.
116ನಿನ್ನ ನುಡಿಯ ಪ್ರಕಾರ ನನ್ನನ್ನು ಉದ್ಧಾರಮಾಡು, ಆಗ ಬದುಕುವೆನು. ನಾನು ನಿರೀಕ್ಷೆಯುಳ್ಳವನಾಗಿದ್ದೇನೆ, ನನ್ನನ್ನು ನಿರಾಶೆಪಡಿಸಬೇಡ.
117ನೀನು ನನಗೆ ಆಧಾರವಾಗಿರು, ಆಗ ನಾನು ಸುರಕ್ಷಿತನಾಗಿ ಸದಾ ನಿನ್ನ ನಿಬಂಧನೆಗಳನ್ನು ಲಕ್ಷಿಸುವೆನು.
118ನಿನ್ನ ನಿಬಂಧನೆಗಳಿಗೆ ತಪ್ಪಿದವರೆಲ್ಲರನ್ನು ನೀನು ತಳ್ಳಿಬಿಡುತ್ತೀ, ಅವರ ಕುಯುಕ್ತಿಯು ವ್ಯರ್ಥವಾದದ್ದೇ.
119ಭೂಲೋಕದ ದುಷ್ಟರೆಲ್ಲರನ್ನು ಕಸದಂತೆ ತೆಗೆದುಬಿಡುತ್ತೀ, ಆದುದರಿಂದ ನಾನು ನಿನ್ನ ಕಟ್ಟಳೆಗಳನ್ನು ಪ್ರೀತಿಸುತ್ತೇನೆ.
120ನಿನ್ನ ಭಯದಿಂದ ನನ್ನ ದೇಹದ ಮಾಂಸವು ಕಂಪಿಸುತ್ತದೆ, ನಿನ್ನ ನ್ಯಾಯವಿಧಿಗಳಿಗೆ ಹೆದರುತ್ತೇನೆ.
121ಆಯಿನ್. ನಾನು ನಿನ್ನ ನೀತಿವಿಧಿಗಳನ್ನು ಅನುಸರಿಸಿದ್ದೇನೆ, ಬಲಾತ್ಕಾರಿಗಳಿಗೆ ನನ್ನನ್ನು ಒಪ್ಪಿಸಬೇಡ.
122ನಿನ್ನ ಸೇವಕನ ಮೇಲಿಗಾಗಿ ನೀನು ಹೊಣೆಗಾರನಾಗು, ಗರ್ವಿಷ್ಠರು ನನ್ನನ್ನು ಬಾಧಿಸದಿರಲಿ.
123ನಿನ್ನ ರಕ್ಷಣೆಯನ್ನೂ, ನಿನ್ನ ನೀತಿಯುಳ್ಳ ನುಡಿಯು ನೆರವೇರುವುದನ್ನೂ ನಿರೀಕ್ಷಿಸುತ್ತಾ, ನನ್ನ ದೃಷ್ಟಿ ಮೊಬ್ಬಾಯಿತು.
124ನಿನ್ನ ಸೇವಕನನ್ನು ಕೃಪೆಯಿಂದ ನಡೆಸು, ನಿನ್ನ ನಿಬಂಧನೆಗಳನ್ನು ನನಗೆ ಕಲಿಸು.
125ನಾನು ನಿನ್ನ ಸೇವಕನು, ನಿನ್ನ ಕಟ್ಟಳೆಗಳನ್ನು ತಿಳಿದುಕೊಳ್ಳುವಂತೆ ವಿವೇಕವನ್ನು ದಯಪಾಲಿಸು.
126ಯೆಹೋವನೇ, ನೀನು ಕಾರ್ಯ ನಡೆಸುವುದಕ್ಕೆ ಸಮಯ ಬಂದಿದೆ, ನಿನ್ನ ಧರ್ಮಶಾಸ್ತ್ರವನ್ನು ಉಲ್ಲಂಘಿಸಿದ್ದಾರೆ.
127ನಿಜವಾಗಿ ನಿನ್ನ ಆಜ್ಞೆಗಳು ಬಂಗಾರಕ್ಕಿಂತಲೂ, ಅಪರಂಜಿಗಿಂತಲೂ ನನಗೆ ಬಹುಪ್ರಿಯವಾಗಿವೆ.
128ನಿಜವಾಗಿ ನಿನ್ನ ಎಲ್ಲಾ ನಿಯಮಗಳು ನ್ಯಾಯವಾಗಿವೆ ಎಂದು ಒಪ್ಪಿಕೊಂಡಿದ್ದೇನೆ, ಎಲ್ಲಾ ಸುಳ್ಳು ಮಾರ್ಗಗಳನ್ನು ದ್ವೇಷಿಸುತ್ತೇನೆ.
129ಪೆ. ನಿನ್ನ ಕಟ್ಟಳೆಗಳು ಮಹತ್ವವುಳ್ಳವುಗಳೇ, ಪೂರ್ಣಹೃದಯದಿಂದ ಅವುಗಳನ್ನು ಕೈಗೊಳ್ಳುತ್ತೇನೆ.
130ನಿನ್ನ ವಾಕ್ಯವಿವರಣೆ ಬೆಳಕನ್ನು ಕೊಡುತ್ತದೆ, ಸರಳ ಹೃದಯರಿಗೆ ವಿವೇಚನೆಯನ್ನು ನೀಡುತ್ತದೆ.
131ನಾನು ಬಾಯಾರಿ ನಿನ್ನನ್ನೇ ಎದುರುನೋಡುತ್ತಿದ್ದೇನೆ, ನಿನ್ನ ಆಜ್ಞೆಗಳನ್ನು ಲವಲವಿಕೆಯಿಂದ ಬಯಸಿದ್ದೇನೆ.
132ನನಗೆ ಅಭಿಮುಖನಾಗಿ ಕರುಣಿಸು, ನಿನ್ನ ಹೆಸರನ್ನು ಪ್ರೀತಿಸುವವರಿಗೆ ಹೀಗೆ ಮಾಡುವುದು ನಿನ್ನ ನಿಯಮವಲ್ಲವೇ?
133ನಿನ್ನ ನುಡಿಗನುಸಾರವಾಗಿ ನನ್ನ ಹೆಜ್ಜೆಯನ್ನು ದೃಢಪಡಿಸು, ಯಾವ ಅನ್ಯಾಯವಾದರೂ ನನ್ನನ್ನು ಆಳದಂತೆ ಮಾಡು.
134ನರ ಮನುಷ್ಯರ ಬಲಾತ್ಕಾರದಿಂದ ನನ್ನನ್ನು ಬಿಡಿಸು, ಆಗ ನಿನ್ನ ನಿಯಮಗಳನ್ನು ಕೈಗೊಳ್ಳುವೆನು.
135ನಿನ್ನ ದಾಸನ ಮೇಲೆ ನಿನ್ನ ಮುಖಪ್ರಸನ್ನತೆಯಿರಲಿ, ನಿನ್ನ ನಿಬಂಧನೆಗಳನ್ನು ನನಗೆ ಕಲಿಸು.
136ನಿನ್ನ ಧರ್ಮಶಾಸ್ತ್ರವನ್ನು ಅನುಸರಿಸದವರ ನಿಮಿತ್ತ, ನನ್ನ ಕಣ್ಣೀರು ಪ್ರವಾಹವಾಗಿ ಹರಿಯುತ್ತದೆ.
137ಸಾದ್ದಿ. ಯೆಹೋವನೇ, ನೀನು ನೀತಿಸ್ವರೂಪನು, ನಿನ್ನ ವಿಧಿಗಳು ನ್ಯಾಯವಾಗಿವೆ.
138ನೀತಿ, ಸತ್ಯತೆಗಳಿಂದಲೇ ನಿನ್ನ ಕಟ್ಟಳೆಗಳನ್ನು ಸ್ಥಾಪಿಸಿದ್ದಿ,
139ವೈರಿಗಳು ನಿನ್ನ ವಾಕ್ಯಗಳನ್ನು ಮರೆತುಬಿಟ್ಟಿದ್ದರಿಂದ ನಿನ್ನ ಮೇಲಿನ ಅಭಿಮಾನ ನನ್ನನ್ನು ದಹಿಸಿಬಿಟ್ಟಿತು,
140ನಿನ್ನ ನುಡಿಯು ಪರಿಶುದ್ಧವಾದದ್ದು, ನಿನ್ನ ಸೇವಕನು ಅದನ್ನೇ ಪ್ರೀತಿಸುತ್ತಾನೆ.
141ನಾನು ಅಲ್ಪನೂ, ತಿರಸ್ಕಾರ ಹೊಂದಿದವನೂ ಆಗಿದ್ದೇನೆ, ಆದರೂ ನಿನ್ನ ನಿಯಮಗಳನ್ನು ಮರೆಯುವುದಿಲ್ಲ.
142ನಿನ್ನ ನೀತಿಯು ನಿತ್ಯವಾಗಿದೆ, ನಿನ್ನ ಧರ್ಮಶಾಸ್ತ್ರವು ಸತ್ಯವಾಗಿದೆ.
143ಕಷ್ಟ, ಸಂಕಟಗಳು ನನ್ನನ್ನು ಮುತ್ತಿಕೊಂಡಿವೆ, ಆದರೂ ನಿನ್ನ ಆಜ್ಞೆಗಳು ನನಗೆ ಸಂತೋಷಕರವಾಗಿವೆ.
144ನಿನ್ನ ಕಟ್ಟಳೆಗಳು ಸದಾಕಾಲವೂ ನೀತಿಯುಳ್ಳವುಗಳು, ನನಗೆ ವಿವೇಕವನ್ನು ದಯಪಾಲಿಸು, ಆಗ ಬದುಕುವೆನು.
145ಖೋಫ್. ಯೆಹೋವನೇ, ಸಂಪೂರ್ಣಮನಸ್ಸಿನಿಂದ ಮೊರೆಯಿಟ್ಟಿದ್ದೇನೆ, ಸದುತ್ತರವನ್ನು ದಯಪಾಲಿಸು, ನಿನ್ನ ನಿಬಂಧನೆಗಳನ್ನು ಅನುಸರಿಸುವೆನು.
146ನಿನಗೇ ಮೊರೆಯಿಟ್ಟಿದ್ದೇನೆ ರಕ್ಷಿಸು. ನಿನ್ನ ಕಟ್ಟಳೆಗಳನ್ನು ಕೈಗೊಳ್ಳುವೆನು.
147ಅರುಣೋದಯದಲ್ಲಿ ಎದ್ದು ಮೊರೆಯಿಟ್ಟೆನು, ನಿನ್ನ ವಾಕ್ಯವನ್ನು ನಿರೀಕ್ಷಿಸಿಕೊಂಡಿದ್ದೇನೆ.
148ನಿನ್ನ ನುಡಿಯನ್ನು ಧ್ಯಾನಿಸಲು, ನನ್ನ ಕಣ್ಣುಗಳು ಇರುಳಿನ ಒಂದೊಂದು ಜಾವದಲ್ಲೂ ತೆರೆದಿರುತ್ತವೆ.
149ಯೆಹೋವನೇ, ನಿನ್ನ ಕೃಪೆಗೆ ತಕ್ಕಂತೆ ನನ್ನ ಮೊರೆಯನ್ನು ಕೇಳು, ನಿನ್ನ ವಿಧಿಗನುಸಾರವಾಗಿ ನನ್ನನ್ನು ಚೈತನ್ಯಗೊಳಿಸು.
150ನಿನ್ನ ಧರ್ಮಶಾಸ್ತ್ರವನ್ನು ಬಿಟ್ಟು ಕೆಟ್ಟದ್ದನ್ನು ಅನುಸರಿಸುವವರು, ನನ್ನ ಸಮೀಪಕ್ಕೆ ಬಂದಿದ್ದಾರೆ.
151ಯೆಹೋವನೇ, ನೀನು ನನ್ನ ಹತ್ತಿರವೇ ಇರುವೆ, ನಿನ್ನ ಆಜ್ಞೆಗಳೆಲ್ಲಾ ಯಥಾರ್ಥವಾಗಿವೆ.
152ನೀನು ನಿನ್ನ ಕಟ್ಟಳೆಗಳನ್ನು ಯುಗಯುಗಾಂತರಕ್ಕೂ ಸ್ಥಾಪಿಸಿದ್ದಿ ಎಂದು, ನಾನು ಮೊದಲಿನಿಂದಲೇ ಅವುಗಳ ಮೂಲಕ ತಿಳಿದುಕೊಂಡಿದ್ದೇನೆ.
153ರೇಷ್. ನನ್ನ ಕಷ್ಟವನ್ನು ನೋಡಿ ನನ್ನನ್ನು ರಕ್ಷಿಸು, ನಾನು ನಿನ್ನ ಧರ್ಮಶಾಸ್ತ್ರವನ್ನು ಮರೆತವನಲ್ಲ.
154ನನ್ನ ವ್ಯಾಜ್ಯವನ್ನು ನಡೆಸಿ ನನ್ನನ್ನು ಬಿಡಿಸು, ನಿನ್ನ ನುಡಿಗನುಸಾರವಾಗಿ ನನ್ನನ್ನು ಚೈತನ್ಯಗೊಳಿಸು.
155ನಿನ್ನ ನಿಬಂಧನೆಗಳನ್ನು ಅಲಕ್ಷ್ಯಮಾಡುವ ದುಷ್ಟರಿಗೆ ರಕ್ಷಣೆಯೇ ಇಲ್ಲ.
156ಯೆಹೋವನೇ, ನಿನ್ನ ಕೃಪಾಕಾರ್ಯಗಳು ಬಹಳವಾಗಿವೆ, ನಿನ್ನ ವಿಧಿಗಳಿಗೆ ತಕ್ಕಂತೆ ನನ್ನನ್ನು ಚೈತನ್ಯಗೊಳಿಸು.
157ನನ್ನನ್ನು ಹಿಂಸಿಸುವ ವೈರಿಗಳು ಅನೇಕರಿದ್ದರೂ, ನಾನು ನಿನ್ನ ಕಟ್ಟಳೆಗಳನ್ನು ಬಿಟ್ಟು ನಡೆಯಲಿಲ್ಲ.
158ನಿನ್ನ ನುಡಿಯನ್ನು ಕೈಗೊಳ್ಳದ ಧರ್ಮಭ್ರಷ್ಟರನ್ನು ನೋಡಿ ಅಸಹ್ಯಪಟ್ಟಿದ್ದೇನೆ.
159ಯೆಹೋವನೇ, ನೋಡು, ನಿನ್ನ ನಿಯಮಗಳು ನನಗೆ ಎಷ್ಟೋ ಪ್ರಿಯವಾಗಿವೆ, ನಿನ್ನ ಕೃಪಾನುಸಾರವಾಗಿ ನನ್ನನ್ನು ಚೈತನ್ಯಗೊಳಿಸು.