84ನಿನ್ನ ಸೇವಕನ ದಿನಗಳು ಬಹುಸ್ವಲ್ಪವಲ್ಲಾ! ನನ್ನನ್ನು ಬಾಧಿಸುವವರಿಗೆ ಶಿಕ್ಷೆ ವಿಧಿಸುವುದು ಯಾವಾಗ?
85ನಿನ್ನ ಧರ್ಮಶಾಸ್ತ್ರವನ್ನು ಅನುಸರಿಸದ ಗರ್ವಿಷ್ಠರು ನನಗಾಗಿ ಗುಂಡಿಗಳನ್ನು ತೋಡಿದ್ದಾರೆ.
86ನಿನ್ನ ಆಜ್ಞೆಗಳೆಲ್ಲಾ ಸ್ಥಿರವಾಗಿವೆ, ಅವರು ಮೋಸದಿಂದ ಹಿಂಸಿಸುತ್ತಾರೆ, ನನಗೆ ಸಹಾಯಮಾಡು.
87ನನ್ನನ್ನು ಭೂಮಿಯಿಂದ ತೆಗೆದೇಬಿಟ್ಟಿದ್ದರು, ಆದರೆ ನಾನು ನಿನ್ನ ನಿಯಮಗಳನ್ನು ಬಿಡಲೇ ಇಲ್ಲ.
88ನಿನ್ನ ಕೃಪೆಗೆ ಅನುಸಾರವಾಗಿ ನನ್ನನ್ನು ಕಾಪಾಡು, ಆಗ ನೀನು ಆಜ್ಞಾಪಿಸಿದ ಕಟ್ಟಳೆಯನ್ನು ಕೈಕೊಳ್ಳುವೆನು.
89ಲಾಮೆದ್. ಯೆಹೋವನೇ, ನಿನ್ನ ವಾಕ್ಯವು ಪರಲೋಕದಲ್ಲಿ ಶಾಶ್ವತವಾಗಿ ಸ್ಥಾಪಿಸಲ್ಪಟ್ಟಿದೆ.
90ನಿನ್ನ ಸತ್ಯವು ತಲತಲಾಂತರಕ್ಕೂ ಇರುವುದು. ನೀನು ಭೂಮಿಯನ್ನು ಸ್ಥಾಪಿಸಿರುತ್ತಿ, ಅದು ಕದಲುವುದಿಲ್ಲ.
91ನಿನ್ನ ವಿಧಿಗಳಿಗನುಸಾರವಾಗಿ ಅವು ಇಂದಿನವರೆಗೂ, ಸ್ಥಿರವಾಗಿ ನಿಂತಿರುತ್ತವೆ. ಏಕೆಂದರೆ ಸರ್ವವಸ್ತುಗಳೂ ನಿನ್ನ ಸೇವೆ ಮಾಡುತ್ತವೆ.
92ನಿನ್ನ ಧರ್ಮಶಾಸ್ತ್ರವು ನನಗೆ ಆನಂದಕರವಾಗದಿದ್ದರೆ, ನನಗೊದಗಿದ ಆಪತ್ತಿನಲ್ಲಿ ಹಾಳಾಗಿ ಹೋಗುತ್ತಿದ್ದೆನು.
93ನಾನು ನಿನ್ನ ನಿಯಮಗಳನ್ನು ಎಂದಿಗೂ ಮರೆಯುವುದಿಲ್ಲ, ಅವುಗಳಿಂದಲೇ ನನ್ನನ್ನು ಬದುಕಿಸಿದ್ದಿ.
94ನಾನು ನಿನ್ನವನು, ರಕ್ಷಿಸು, ನಿನ್ನ ನಿಯಮಗಳಲ್ಲಿ ಆಸಕ್ತನಾಗಿದ್ದೇನಲ್ಲಾ.
95ದುಷ್ಟರು ನನ್ನನ್ನು ಸಂಹರಿಸಬೇಕೆಂದು ಹೊಂಚಿ ನೋಡುತ್ತಾರೆ, ನಾನು ನಿನ್ನ ಕಟ್ಟಳೆಗಳನ್ನೇ ಲಕ್ಷಿಸಿಕೊಂಡಿರುವೆನು.
96ಎಲ್ಲಾ ಸಂಪೂರ್ಣತೆಗೂ ಮೇರೆಯುಂಟೆಂದು ಬಲ್ಲೆನು, ಆದರೆ ನಿನ್ನ ಆಜ್ಞಾಶಾಸನವು ಅಪರಿಮಿತವಾದದ್ದು.
97ಮೆಮ್. ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ, ದಿನವೆಲ್ಲಾ ಅದೇ ನನ್ನ ಧ್ಯಾನ.
98ನಿನ್ನ ಆಜ್ಞೆಗಳ ಮೂಲಕ ನನ್ನ ವೈರಿಗಳಿಗಿಂತ ಬುದ್ಧಿವಂತನಾಗಿದ್ದೇನೆ, ಸದಾಕಾಲವೂ ಅವೇ ನನಗಿವೆ.
99ನಿನ್ನ ಕಟ್ಟಳೆಗಳು ನನ್ನ ಧ್ಯಾನವಾಗಿರುವುದರಿಂದ, ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ.
100ನಿನ್ನ ನಿಯಮಗಳನ್ನು ಕೈಗೊಂಡಿರುವುದರಿಂದ, ಹಿರಿಯರಿಗಿಂತ ವಿವೇಕಿಯಾಗಿದ್ದೇನೆ.
101ನಿನ್ನ ವಾಕ್ಯವನ್ನೇ ಅನುಸರಿಸಬೇಕೆಂದು, ನನ್ನ ಕಾಲುಗಳನ್ನು ಯಾವ ಕೆಟ್ಟ ದಾರಿಗೂ ಹೋಗದಂತೆ ಕಾದಿದ್ದೇನೆ.
102ನಾನು ನಿನ್ನ ವಿಧಿಗಳಿಂದ ಸ್ವಲ್ಪವೂ ತಪ್ಪಿಹೋಗಲಿಲ್ಲ, ಏಕೆಂದರೆ ನೀನು ನನಗೆ ಬೋಧಿಸಿದ್ದೀ.
103ನಿನ್ನ ನುಡಿಗಳು ನನ್ನ ನಾಲಿಗೆಗೆ ಎಷ್ಟೋ ರುಚಿಯಾಗಿವೆ, ಅವು ನನ್ನ ಬಾಯಿಗೆ ಜೇನು ತುಪ್ಪಕ್ಕಿಂತಲೂ ಸಿಹಿಯಾಗಿವೆ.
104ನಿನ್ನ ನಿಯಮಗಳ ಮೂಲಕ ವಿವೇಕಿಯಾದೆನು, ಸುಳ್ಳು ಮಾರ್ಗವನ್ನೆಲ್ಲಾ ನಾನು ದ್ವೇಷಿಸುತ್ತೇನೆ.
105ನೂನ್. ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ, ನನ್ನ ದಾರಿಗೆ ಬೆಳಕೂ ಆಗಿದೆ.
106ನಿನ್ನ ನೀತಿವಿಧಿಗಳನ್ನು ಅನುಸರಿಸುವೆನೆಂದು ಪ್ರಮಾಣಮಾಡಿದ್ದೇನೆ, ಅದನ್ನು ನೆರವೇರಿಸುವೆನು.
107ನಾನು ಬಹಳವಾಗಿ ಕುಗ್ಗಿಹೋಗಿದ್ದೇನೆ, ಯೆಹೋವನೇ, ನಿನ್ನ ವಾಕ್ಯಾನುಸಾರವಾಗಿ ನನ್ನನ್ನು ಚೈತನ್ಯಗೊಳಿಸು.
108ಯೆಹೋವನೇ, ನನ್ನ ಮನಃಪೂರ್ವಕವಾದ ಸ್ತುತಿ ಸಮರ್ಪಣೆಗಳನ್ನು, ದಯವಿಟ್ಟು ಅಂಗೀಕರಿಸು, ನಿನ್ನ ವಿಧಿಗಳನ್ನು ನನಗೆ ಕಲಿಸು.
109ನನ್ನ ಜೀವವು ಅಪಾಯದಲ್ಲಿದ್ದೆ, ಆದರೂ ನಿನ್ನ ಧರ್ಮಶಾಸ್ತ್ರವನ್ನು ಮರೆಯುವುದಿಲ್ಲ.