60ನಿನ್ನ ಆಜ್ಞೆಗಳನ್ನು ಅನುಸರಿಸುವುದರಲ್ಲಿ ಆಸಕ್ತನಾದೆನು, ಆಲಸ್ಯಮಾಡಲಿಲ್ಲ.
61ದುಷ್ಟರ ಪಾಶಗಳು ನನ್ನನ್ನು ಸುತ್ತಿಕೊಂಡವು, ಆದರೂ ನಾನು ನಿನ್ನ ಧರ್ಮಶಾಸ್ತ್ರವನ್ನು ಮರೆಯಲಿಲ್ಲ.
62ನಿನ್ನ ನೀತಿವಿಧಿಗಳಿಗೋಸ್ಕರ ನಿನ್ನನ್ನು ಕೊಂಡಾಡಲು, ಮಧ್ಯರಾತ್ರಿಯಲ್ಲಿ ಏಳುವೆನು.
63ನಿನ್ನ ನಿಯಮಗಳನ್ನು ಕೈಕೊಂಡು ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ನಾನು ಸಂಗಡಿಗನು.
64ಯೆಹೋವನೇ, ಭೂಲೋಕವು ನಿನ್ನ ಶಾಶ್ವತ ಪ್ರೀತಿಯಿಂದ ತುಂಬಿದೆ, ನಿನ್ನ ಕಟ್ಟಳೆಗಳನ್ನು ನನಗೆ ಬೋಧಿಸು.
65ಟೇತ್. ಯೆಹೋವನೇ, ನೀನು ನಿನ್ನ ವಾಗ್ದಾನಕ್ಕೆ ತಕ್ಕಂತೆ, ನಿನ್ನ ಸೇವಕನಿಗೆ ಮಹೋಪಕಾರ ಮಾಡಿದ್ದಿ.
66ಸುಜ್ಞಾನವನ್ನು, ವಿವೇಕಗಳನ್ನು ನನಗೆ ಕಲಿಸಿಕೊಡು, ನಿನ್ನ ಆಜ್ಞೆಗಳನ್ನು ನಂಬಿಕೊಂಡಿದ್ದೇನಲ್ಲಾ.
67ಕಷ್ಟಾನುಭವಕ್ಕಿಂತ ಮೊದಲೇ ತಪ್ಪಿಹೋಗುತ್ತಿದ್ದೆನು, ಈಗಲಾದರೋ ನಿನ್ನ ನುಡಿಗಳನ್ನು ಕೈಗೊಳ್ಳುತ್ತೇನೆ.
68ನೀನು ಒಳ್ಳೆಯವನು, ಒಳ್ಳೆಯದನ್ನು ಮಾಡುವವನೂ ಆಗಿದ್ದಿ, ನಿನ್ನ ನಿಬಂಧನೆಗಳನ್ನು ನನಗೆ ಬೋಧಿಸು.
69ಗರ್ವಿಷ್ಠರು ನನ್ನ ವಿರುದ್ಧವಾಗಿ ಸುಳ್ಳುಕಲ್ಪಿಸಿದ್ದಾರೆ, ನಾನಾದರೋ ಪೂರ್ಣಮನಸ್ಸಿನಿಂದ ನಿನ್ನ ನಿಯಮಗಳನ್ನು ಕೈಕೊಳ್ಳುವೆನು.
70ಅವರ ಹೃದಯದಲ್ಲಿ ಸತ್ಯವಿಲ್ಲ, ನಾನಾದರೋ ನಿನ್ನ ಧರ್ಮಶಾಸ್ತ್ರದಲ್ಲಿ ಉಲ್ಲಾಸಪಡುತ್ತೇನೆ.
71ಕಷ್ಟಾನುಭವವು ಹಿತಕರವಾಯಿತು, ಅದುದರಿಂದಲೇ ನಿನ್ನ ನಿಬಂಧನೆಗಳನ್ನು ಕಲಿತೆನು.
72ನೀನು ಕೊಟ್ಟ ಧರ್ಮಶಾಸ್ತ್ರವು, ಸಾವಿರಾರು ಚಿನ್ನ, ಬೆಳ್ಳಿಯ ನಾಣ್ಯಗಳಿಗಿಂತಲೂ ನನಗೆ ಅತಿಪ್ರಿಯವಾಗಿದೆ.
73ಯೋದ್. ನಿನ್ನ ಕೈಗಳು ನನ್ನನ್ನು ರೂಪಿಸಿ ನಿಲ್ಲಿಸಿದವು, ನಿನ್ನ ಆಜ್ಞೆಗಳನ್ನು ಕಲಿಯುವುದಕ್ಕೆ ನನಗೆ ಬುದ್ಧಿಯನ್ನು ಕೊಡು.
74ನಿನ್ನಲ್ಲಿ ಭಯಭಕ್ತಿಯುಳ್ಳವರು ನನ್ನನ್ನು ನೋಡಿ ಸಂತೋಷಿಸಲಿ, ನಾನು ನಿನ್ನ ವಾಕ್ಯವನ್ನೇ ನಿರೀಕ್ಷಿಸಿಕೊಂಡಿದ್ದೇನಲ್ಲಾ.
75ಯೆಹೋವನೇ, ನಿನ್ನ ವಿಧಿಗಳು ನೀತಿಯುಳ್ಳವುಗಳಾಗಿವೆ ಎಂದೂ, ನೀನು ನಂಬಿಗಸ್ತಿಕೆಯಿಂದಲೇ ನನ್ನನ್ನು ಕುಗ್ಗಿಸಿದ್ದೀ ಎಂದೂ ತಿಳಿದುಕೊಂಡಿದ್ದೇನೆ.
76ನಿನ್ನ ಸೇವಕನಿಗೆ ನುಡಿದ ಪ್ರಕಾರ, ನನ್ನ ಸಮಾಧಾನಕ್ಕೋಸ್ಕರ ಕೃಪೆಯನ್ನು ದಯಪಾಲಿಸು.
77ನಾನು ಬದುಕುವಂತೆ ನಿನ್ನ ಕರುಣೆಯು ನನಗೆ ದೊರೆಯಲಿ, ನಿನ್ನ ಧರ್ಮಶಾಸ್ತ್ರವೇ ನನ್ನ ಆನಂದವಾಗಿದೆ.
78ಗರ್ವಿಷ್ಠರು ಮಾನಭಂಗ ಹೊಂದಲಿ, ಅವರು ಮೋಸದಿಂದ ನನಗೆ ಕೇಡು ಮಾಡಿದ್ದಾರೆ. ನಾನಾದರೋ ನಿನ್ನ ನಿಯಮಗಳನ್ನು ಧ್ಯಾನಿಸುತ್ತಿರುವೆನು.
79ನಿನ್ನಲ್ಲಿ ಭಯಭಕ್ತಿಯುಳ್ಳವರು ನನ್ನ ಕಡೆಗೆ ತಿರುಗಿಕೊಂಡು, ನಿನ್ನ ಕಟ್ಟಳೆಗಳನ್ನು ಗ್ರಹಿಸಿಕೊಳ್ಳಲಿ.
80ನನ್ನ ಮನಸ್ಸು ನಿನ್ನ ಕಟ್ಟಳೆಗಳಲ್ಲಿ ಆಸಕ್ತವಾಗಲಿ, ಆಗ ನನ್ನ ಆಶಾಭಂಗಕ್ಕೆ ಕಾರಣವಿರುವುದಿಲ್ಲ.
81ಕಾಫ್. ನಿನ್ನ ರಕ್ಷಣೆಯ ಬಯಕೆಯಿಂದಲೇ ನನ್ನ ಮನವು ಬಲಗುಂದಿತು, ನಾನು ನಿನ್ನ ವಾಕ್ಯದಲ್ಲೇ ನಿರೀಕ್ಷೆಯುಳ್ಳವನಾಗಿದ್ದೇನೆ.
82ನಿನ್ನ ನುಡಿಯನ್ನು ನೆರವೇರಿಸಿ ಯಾವಾಗ ನನ್ನನ್ನು ಸಂತೈಸುವಿ? ಎಂಬುವುದಕ್ಕೋಸ್ಕರವೇ ನನ್ನ ದೃಷ್ಟಿಯು ಮಂದವಾಯಿತು.
83ಹೊಗೆಯಲ್ಲಿ ನೇತು ಹಾಕಿರುವ ಬುದ್ದಲಿಯಂತಿದ್ದೇನೆ, ಆದರೂ ನಿನ್ನ ನಿಬಂಧನೆಗಳನ್ನು ಮರೆಯಲಿಲ್ಲ.
84ನಿನ್ನ ಸೇವಕನ ದಿನಗಳು ಬಹುಸ್ವಲ್ಪವಲ್ಲಾ! ನನ್ನನ್ನು ಬಾಧಿಸುವವರಿಗೆ ಶಿಕ್ಷೆ ವಿಧಿಸುವುದು ಯಾವಾಗ?
85ನಿನ್ನ ಧರ್ಮಶಾಸ್ತ್ರವನ್ನು ಅನುಸರಿಸದ ಗರ್ವಿಷ್ಠರು ನನಗಾಗಿ ಗುಂಡಿಗಳನ್ನು ತೋಡಿದ್ದಾರೆ.
86ನಿನ್ನ ಆಜ್ಞೆಗಳೆಲ್ಲಾ ಸ್ಥಿರವಾಗಿವೆ, ಅವರು ಮೋಸದಿಂದ ಹಿಂಸಿಸುತ್ತಾರೆ, ನನಗೆ ಸಹಾಯಮಾಡು.
87ನನ್ನನ್ನು ಭೂಮಿಯಿಂದ ತೆಗೆದೇಬಿಟ್ಟಿದ್ದರು, ಆದರೆ ನಾನು ನಿನ್ನ ನಿಯಮಗಳನ್ನು ಬಿಡಲೇ ಇಲ್ಲ.
88ನಿನ್ನ ಕೃಪೆಗೆ ಅನುಸಾರವಾಗಿ ನನ್ನನ್ನು ಕಾಪಾಡು, ಆಗ ನೀನು ಆಜ್ಞಾಪಿಸಿದ ಕಟ್ಟಳೆಯನ್ನು ಕೈಕೊಳ್ಳುವೆನು.
89ಲಾಮೆದ್. ಯೆಹೋವನೇ, ನಿನ್ನ ವಾಕ್ಯವು ಪರಲೋಕದಲ್ಲಿ ಶಾಶ್ವತವಾಗಿ ಸ್ಥಾಪಿಸಲ್ಪಟ್ಟಿದೆ.
90ನಿನ್ನ ಸತ್ಯವು ತಲತಲಾಂತರಕ್ಕೂ ಇರುವುದು. ನೀನು ಭೂಮಿಯನ್ನು ಸ್ಥಾಪಿಸಿರುತ್ತಿ, ಅದು ಕದಲುವುದಿಲ್ಲ.