Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅ. ಕೃ. - ಅ. ಕೃ. 3

ಅ. ಕೃ. 3:12-26

Help us?
Click on verse(s) to share them!
12ಪೇತ್ರನು ಇದನ್ನು ನೋಡಿ ಜನರಿಗೆ; “ಇಸ್ರಾಯೇಲ್ ಜನರೇ, ಈ ಘಟನೆಯಿಂದ ನೀವೇಕೆ ಆಶ್ಚರ್ಯಚಕಿತರಾಗಿದ್ದೀರಿ? ನೀವು ನಮ್ಮನೇಕೆ ಈ ರೀತಿ ದೃಷ್ಟಿಯಿಟ್ಟು ನೋಡುತ್ತಿದ್ದಿರಿ? ನಾವು ನಮ್ಮ ಸ್ವಂತ ಶಕ್ತಿಯಿಂದಾಗಲಿ, ನಮ್ಮ ದೈವಭಕ್ತಿಯಿಂದಾಗಲಿ ಇವನನ್ನು ನಡೆಯುವಂತೆ ಮಾಡಿದೆವೆಂದು ಭಾವಿಸಬೇಡಿರಿ.
13ನಮ್ಮ ಪೂರ್ವಿಕರಾದ ಅಬ್ರಹಾಮ ಇಸಾಕ ಯಾಕೋಬರ ದೇವರು ತನ್ನ ಸೇವಕನಾದ ಯೇಸುವನ್ನು ಮಹಿಮೆಪಡಿಸಿದ್ದಾನೆ. ನೀವಂತೂ ಆತನನ್ನು ಪಿಲಾತನಿಗೆ ಹಿಡಿದುಕೊಟ್ಟಿರಿ; ಮತ್ತು ಪಿಲಾತನು ಆತನನ್ನು ಬಿಡಿಸಬೇಕೆಂದು ನಿರ್ಣಯಿಸಿದಾಗ, ಆತನ ಮುಂದೆ ಆತನನ್ನು ಧಿಕ್ಕರಿಸಿ ಬೇಡವೆಂದು ಕೂಗಿದ್ದೀರಿ.
14ನೀವು ಪರಿಶುದ್ಧನೂ, ನೀತಿವಂತನೂ ಆಗಿರುವ ಯೇಸುವನ್ನು ಬೇಡವೆಂದು ಹೇಳಿ ಕೊಲೆಗಾರನಾದ ಒಬ್ಬನನ್ನು ಬಿಡಿಸಿಕೊಡಬೇಕೆಂದು ಬೇಡಿಕೊಂಡು ಜೀವದಾಯಕನಾದ ಕ್ರಿಸ್ತನನ್ನು ಕೊಲ್ಲಿಸಿದ್ದೀರಿ.
15ಆದರೆ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನು; ಈ ವಿಷಯದಲ್ಲಿ ನಾವೇ ಸಾಕ್ಷಿಗಳು.
16ನೀವು ನೋಡುತ್ತಿರುವಂತಹ, ನಿಮಗೆ ಗುರುತಿರುವಂತಹ ಈ ಮನುಷ್ಯನು ಗುಣವಾಗುವುದಕ್ಕೆ ಯೇಸುವಿನ ಹೆಸರಿನಲ್ಲಿ ಇಟ್ಟ ಅವನ ನಂಬಿಕೆಯೇ ಕಾರಣ; ಆ ಹೆಸರೇ ಇವನನ್ನು ಬಲಪಡಿಸಿತು. ಆತನ ಮೂಲಕ ಉಂಟಾಗಿರುವ ನಂಬಿಕೆಯೇ ಇವನಿಗೆ ನಿಮ್ಮೆಲ್ಲರ ಮುಂದೆ ಸಂಪೂರ್ಣಸೌಖ್ಯವನ್ನು ಕೊಟ್ಟಿತು.
17“ಸಹೋದರರೇ, ಅದಿರಲಿ, ನೀವು ಆ ಕಾರ್ಯವನ್ನು ತಿಳಿಯದೆ ಮಾಡಿದಿರೆಂದು ಬಲ್ಲೆನು; ನಿಮ್ಮ ಅಧಿಕಾರಿಗಳೂ ಅದನ್ನು ತಿಳಿಯದೆ ಮಾಡಿದರು.
18ಆದರೆ, ಕ್ರಿಸ್ತನು ಕಷ್ಟಗಳನ್ನನುಭವಿಸಬೇಕೆಂದು, ದೇವರು ಎಲ್ಲಾ ಪ್ರವಾದಿಗಳ ಮೂಲಕ ಮುಂಚಿತವಾಗಿ ಹೇಳಿಸಿದ ಮಾತುಗಳನ್ನು ಹೀಗೆ ನೆರವೇರಿಸಿದನು.
19ಆದುದರಿಂದ ನಿಮ್ಮ ಪಾಪಗಳನ್ನು ಅಳಿಸಿಬಿಡುವ ಹಾಗೆ ನೀವು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ. ಹಾಗೆ ತಿರುಗಿದರೆ ಕರ್ತನ, ಸನ್ನಿಧಾನದಿಂದ
20ಪುನರುಜ್ಜೀವನದ ಕಾಲಗಳು ಒದಗಿ ಆತನು ನಿಮಗೆ ನೇಮಕವಾಗಿರುವ ಕ್ರಿಸ್ತನಾದ ಯೇಸುವನ್ನು ಕಳುಹಿಸಿಕೊಡುವನು.
21ಆದರೆ ಸಮಸ್ತವನ್ನು ಸರಿಮಾಡುವ ಕಾಲವು ಬರುವ ತನಕ ಪರಲೋಕವೇ ಕ್ರಿಸ್ತನ ಸ್ಥಾನವಾಗಿರಬೇಕು. ಆ ಕಾಲದ ವಿಷಯವಾಗಿ ದೇವರು ಪೂರ್ವದಲ್ಲಿದ್ದ ತನ್ನ ಪರಿಶುದ್ಧ ಪ್ರವಾದಿಗಳ ಮುಖಾಂತರ ಹೇಳಿಸಿದ್ದಾನೆ.
22ಮೋಶೆಯು ಹೇಳಿದ್ದೇನಂದರೆ, ‘ದೇವರಾಗಿರುವ ಕರ್ತನು ನನ್ನ ಹಾಗೆ ನಿಮ್ಮ ಸಹೋದರರಲ್ಲಿ ಮತ್ತೊಬ್ಬ ಪ್ರವಾದಿಯನ್ನು ನಿಮಗೆ ಎಬ್ಬಿಸುವನು; ಆತನು ಹೇಳುವ ಎಲ್ಲಾ ಮಾತುಗಳಿಗೆ ನೀವು ಕಿವಿಗೊಡಬೇಕು.
23ಆ ಪ್ರವಾದಿಯ ಮಾತನ್ನು ಕೇಳದಿರುವ ಪ್ರತಿಯೊಬ್ಬನು ನಮ್ಮ ಜನರೊಳಗಿಂದ ಸಂಪೂರ್ಣವಾಗಿ ನಾಶವಾಗುವನು’ ಎಂಬುದೇ.
24ಇದಲ್ಲದೆ ಸಮುವೇಲನೂ, ಅವನ ತರುವಾಯ ಬಂದು ಪ್ರವಾದಿಸಿದ ಎಲ್ಲಾ ಪ್ರವಾದಿಗಳೂ ಸಹ ಈಗಿನ ದಿನಗಳನ್ನು ಕುರಿತು ತಿಳಿಸಿರುವರು.
25ನೀವು ಆ ಪ್ರವಾದಿಗಳ ಶಿಷ್ಯರು, ದೇವರು ನಮ್ಮ ಪೂರ್ವಿಕರ ಸಂಗಡ ಮಾಡಿಕೊಂಡ ಒಡಂಬಡಿಕೆಗೆ ಬಾಧ್ಯರೂ ಆಗಿದ್ದೀರಿ. ಆತನು ಅಬ್ರಹಾಮನಿಗೆ ‘ನಿನ್ನ ಸಂತತಿಯ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವುದು’ ಎಂದು ಹೇಳಿ ಆ ಒಡಂಬಡಿಕೆಯನ್ನು ಮಾಡಿಕೊಂಡನಲ್ಲಾ.
26ಮೊದಲು ನಿಮಗಾಗಿಯೇ ದೇವರು ತನ್ನ ಸೇವಕನನ್ನು ಪ್ರತಿಷ್ಠೆಪಡಿಸಿ ಈತನು ನಿಮ್ಮಲ್ಲಿ ಪ್ರತಿಯೊಬ್ಬನನ್ನು ಅವನವನ ಕೆಟ್ಟ ನಡತೆಗಳಿಂದ ತಿರುಗಿಸಿ ನಿಮ್ಮನ್ನು ಆಶೀರ್ವದಿಸಬೇಕೆಂದು ಆತನನ್ನು ಕಳುಹಿಸಿಕೊಟ್ಟಿದ್ದಾನೆ” ಎಂದು ಹೇಳಿದನು.

Read ಅ. ಕೃ. 3ಅ. ಕೃ. 3
Compare ಅ. ಕೃ. 3:12-26ಅ. ಕೃ. 3:12-26