3ಯೇಸು ಅವರಿಗೆ, “ದಾವೀದನು ಮತ್ತು ಆತನ ಸಂಗಡ ಇದ್ದವರೂ ಹಸಿದಿದ್ದಾಗ, ಆತನು ಏನು ಮಾಡಿದನೆಂಬುದನ್ನು ನೀವು ಓದಲಿಲ್ಲವೋ?
4ಅವನು ದೇವಮಂದಿರದೊಳಕ್ಕೆ ಹೋಗಿ ಯಾಜಕರು ಮಾತ್ರವೇ ಹೊರತು ಮತ್ತಾರೂ ತಿನ್ನಬಾರದ ನೈವೇದ್ಯದ ರೊಟ್ಟಿಗಳನ್ನು ತೆಗೆದುಕೊಂಡು ತಾನೂ ತಿಂದು ತನ್ನ ಸಂಗಡ ಇದ್ದವರಿಗೂ ಕೊಟ್ಟನಲ್ಲಾ?” ಎಂದು ಉತ್ತರಿಸಿ,
5“ಮನುಷ್ಯಕುಮಾರನು ಸಬ್ಬತ್ ದಿನಕ್ಕೆ ಒಡೆಯನಾಗಿದ್ದಾನೆ” ಎಂದು ಅವರಿಗೆ ಹೇಳಿದನು.
6ಮತ್ತೊಂದು ಸಬ್ಬತ್ ದಿನದಲ್ಲಿ ಆತನು ಸಭಾಮಂದಿರಕ್ಕೆ ಹೋಗಿ ಉಪದೇಶಮಾಡುತ್ತಿರುವಾಗ, ಅಲ್ಲಿ ಬಲಗೈ ಬತ್ತಿದವನೊಬ್ಬನು ಇದ್ದನು.
7ಶಾಸ್ತ್ರಿಗಳೂ ಫರಿಸಾಯರೂ ಆತನ ಮೇಲೆ ತಪ್ಪುಹೊರಿಸುವುದಕ್ಕೆ ಕಾರಣ ಸಿಕ್ಕಬೇಕೆಂದು ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವನೋ ಇಲ್ಲವೋ ಎಂದು ಆತನನ್ನು ಹೊಂಚಿನೋಡುತ್ತಿದ್ದರು.
8ಆದರೆ ಆತನು ಅವರ ಯೋಚನೆಗಳನ್ನು ತಿಳಿದು ಕೈ ಬತ್ತಿಹೋಗಿದ್ದ ಆ ಮನುಷ್ಯನಿಗೆ, “ಎದ್ದು ನಡುವೆ ಬಂದು ನಿಂತುಕೋ” ಎಂದು ಹೇಳಿದನು. ಅವನು ಎದ್ದುಬಂದು ನಿಂತುಕೊಂಡನು.
9ಆಗ ಯೇಸು ಅವರಿಗೆ, “ನಿಮ್ಮನ್ನು ಒಂದು ಮಾತು ಕೇಳುತ್ತೇನೆ, ಸಬ್ಬತ್ ದಿನದಲ್ಲಿ ಯಾವುದನ್ನು ಮಾಡುವುದು ನ್ಯಾಯ? ಮೇಲನ್ನು ಮಾಡುವುದೋ ಅಥವಾ ಕೇಡನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ ಅಥವಾ ಹಾಳುಮಾಡುವುದೋ?” ಎಂದು ಕೇಳಿ,
10ಸುತ್ತಲೂ ಇದ್ದವರೆಲ್ಲರನ್ನೂ ನೋಡಿ ಆ ಮನುಷ್ಯನಿಗೆ, “ನಿನ್ನ ಕೈಚಾಚು” ಎಂದು ಹೇಳಿದನು. ಅವನು ಹಾಗೆಯೇ ಮಾಡಿದನು, ಕೈ ವಾಸಿಯಾಯಿತು.
11ಆದರೆ ಅವರು ಕ್ರೋಧಭರಿತರಾಗಿದ್ದರಿಂದ, ಈ ಯೇಸುವಿಗೆ ಏನು ಮಾಡೋಣ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
12ಆ ದಿನಗಳಲ್ಲಿ ಯೇಸು ಪ್ರಾರ್ಥನೆ ಮಾಡಲು ಬೆಟ್ಟಕ್ಕೆ ಹೋಗಿ ರಾತ್ರಿಯೆಲ್ಲಾ ದೇವರನ್ನು ಪ್ರಾರ್ಥಿಸುವುದರಲ್ಲಿ ಕಳೆದನು.
13ಬೆಳಗಾದ ಮೇಲೆ ಆತನು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡು ಅವರಿಗೆ ಅಪೊಸ್ತಲರೆಂದು ಹೆಸರಿಟ್ಟನು.
14ಅವರು ಯಾರಾರೆಂದರೆ, ಆತನಿಂದ ಪೇತ್ರನೆಂಬ ಹೆಸರನ್ನು ಹೊಂದಿದ ಸೀಮೋನ, ಅವನ ತಮ್ಮನಾದ ಅಂದ್ರೆಯ, ಯಾಕೋಬ, ಯೋಹಾನ, ಫಿಲಿಪ್ಪ, ಬಾರ್ತೊಲೊಮಾಯ,
15ಮತ್ತಾಯ, ತೋಮ, ಅಲ್ಫಾಯನ ಮಗನಾದ ಯಾಕೋಬ, ಮತಾಭಿಮಾನಿ ಅನ್ನಿಸಿಕೊಂಡ ಸೀಮೋನ,
16ಯಾಕೋಬನ ಮಗನಾದ ಯೂದ, ಆತನನ್ನು ಹಿಡಿದುಕೊಡುವ ದ್ರೋಹಿಯಾದ ಇಸ್ಕರಿಯೋತ ಯೂದ.