Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯೋಹಾ - ಯೋಹಾ 19

ಯೋಹಾ 19:2-13

Help us?
Click on verse(s) to share them!
2ಸಿಪಾಯಿಗಳು ಮುಳ್ಳಿನ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟ್ಟು, ಕೆನ್ನೇರಳೆ ಬಣ್ಣದ ನಿಲುವಂಗಿಯನ್ನು ಆತನಿಗೆ ತೊಡಿಸಿ,
3ಆತನ ಬಳಿಗೆ ಬಂದು “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ” ಎಂದು ಹೇಳಿ ತಮ್ಮ ಕೈಗಳಿಂದ ಆತನ ಕೆನ್ನೆಗೆ ಹೊಡೆದರು.
4ತರುವಾಯ ಪಿಲಾತನು ಪುನಃ ಹೊರಗೆ ಹೋಗಿ ಯೆಹೂದ್ಯರಿಗೆ, “ನನಗೆ ಅವನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲವೆಂಬುದು ನಿಮಗೆ ತಿಳಿಯುವಂತೆ ಅವನನ್ನು ನಿಮ್ಮ ಬಳಿಗೆ ತರುತ್ತೇನೆ ನೋಡಿರಿ” ಎಂದು ಹೇಳಿದನು.
5ಯೇಸು ಮುಳ್ಳಿನ ಕಿರೀಟವನ್ನು ಮತ್ತು ಕೆನ್ನೇರಳೆ ಬಣ್ಣದ ನಿಲುವಂಗಿಯನ್ನು ಧರಿಸಿದವನಾಗಿ ಹೊರಗೆ ಬಂದನು. ಆಗ ಪಿಲಾತನು ಅವರಿಗೆ, “ಇಗೋ, ಈ ಮನುಷ್ಯನು” ಎಂದನು.
6ಮುಖ್ಯಯಾಜಕರೂ ಮತ್ತು ಕಾವಲುಗಾರರು ಆತನನ್ನು ಕಾಣುತ್ತಲೇ, “ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು” ಎಂದು ಕೂಗಿದರು. ಪಿಲಾತನು ಅವರಿಗೆ, “ಬೇಕಾದರೆ ನೀವೇ ಅವನನ್ನು ತೆಗೆದುಕೊಂಡು ಹೋಗಿ ಶಿಲುಬೆಗೆ ಹಾಕಿರಿ, ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲ” ಎಂದನು.
7ಯೆಹೂದ್ಯರು ಅವನಿಗೆ, “ನಮಗೆ ಒಂದು ನೇಮ ಉಂಟು. ಆ ನೇಮದ ಪ್ರಕಾರ ಆತನು ಸಾಯಲೇಬೇಕು. ಏಕೆಂದರೆ ಆತನು ತನ್ನನ್ನು ದೇವರ ಮಗನಾಗಿ ಮಾಡಿಕೊಂಡಿದ್ದಾನೆ” ಎಂದರು.
8ಪಿಲಾತನು ಈ ಮಾತನ್ನು ಕೇಳಿ ಬಹಳವಾಗಿ ಭಯಪಟ್ಟನು,
9ಪುನಃ ತನ್ನ ಅರಮನೆಯೊಳಗೆ ಹೋಗಿ, “ನೀನು ಎಲ್ಲಿಂದ ಬಂದವನು?” ಎಂದು ಯೇಸುವನ್ನು ಕೇಳಿದನು, ಆದರೆ ಯೇಸು ಆತನಿಗೆ ಉತ್ತರಕೊಡಲಿಲ್ಲ.
10ಪಿಲಾತನು, “ನೀನು ನನ್ನೊಡನೆ ಮಾತನಾಡುವುದಿಲ್ಲವೋ? ನಿನ್ನನ್ನು ಬಿಡಿಸುವ ಅಧಿಕಾರವೂ ಮತ್ತು ನಿನ್ನನ್ನು ಶಿಲುಬೆಗೆ ಹಾಕಿಸುವ ಅಧಿಕಾರವೂ ನನಗೆ ಉಂಟೆಂಬುದು ನಿನಗೆ ಗೊತ್ತಿಲ್ಲವೋ?” ಎಂದು ಆತನನ್ನು ಕೇಳಿದನು.
11ಅದಕ್ಕೆ ಯೇಸು, “ಮೇಲಿನಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಿನ ಪಾಪವಿದೆ” ಎಂದು ಉತ್ತರ ಕೊಟ್ಟನು.
12ಈ ಮಾತಿನಿಂದ ಪಿಲಾತನು ಆತನನ್ನು ಬಿಡಿಸಲು ಪ್ರಯತ್ನಿಸಿದನು, ಆದರೆ ಯೆಹೂದ್ಯರು, “ನೀನು ಈ ಮನುಷ್ಯನನ್ನು ಬಿಡಿಸಿದರೆ, ನೀನು ಕೈಸರನಿಗೆ ಮಿತ್ರನಲ್ಲ, ತನ್ನನ್ನು ತಾನೇ ಅರಸನಾಗಿ ಮಾಡಿಕೊಳ್ಳುವವನು, ಕೈಸರನಿಗೆ ವಿರೋಧಿ” ಎಂದು ಕೂಗಿ ಹೇಳಿದರು.
13ಈ ಮಾತುಗಳನ್ನು ಪಿಲಾತನು ಕೇಳಿ ಯೇಸುವನ್ನು ಹೊರಗೆ ಕರೆದುಕೊಂಡು ಬಂದು ಇಬ್ರಿಯ ಮಾತಿನಲ್ಲಿ, ಗಬ್ಬಥಾ ಎಂದು ಕರೆಯಲ್ಪಟ್ಟ, “ಕಲ್ಲು ಹಾಸಿದ ಕಟ್ಟೆ” ಎಂಬ ಸ್ಥಳಕ್ಕೆ ಹೋಗಿ ನ್ಯಾಯಾಸನದ ಮೇಲೆ ಕುಳಿತುಕೊಂಡನು.

Read ಯೋಹಾ 19ಯೋಹಾ 19
Compare ಯೋಹಾ 19:2-13ಯೋಹಾ 19:2-13