23ನಿನ್ನ ಅಧಿಕಾರಿಗಳು ದ್ರೋಹಿಗಳೂ, ಕಳ್ಳರ ಗೆಳೆಯರೂ ಆಗಿದ್ದಾರೆ; ಪ್ರತಿಯೊಬ್ಬನೂ ಕಾಣಿಕೆಗಳನ್ನು ಪ್ರೀತಿಸಿ, ಲಂಚಗಳನ್ನು ಹುಡುಕುವನು; ಅನಾಥರಿಗೆ ನ್ಯಾಯತೀರಿಸುವುದಿಲ್ಲ; ವಿಧವೆಯರ ವ್ಯಾಜ್ಯವು ಅವರ ಮನಸ್ಸಿಗೆ ಬಾರದು.
24ಆದುದರಿಂದ ಕರ್ತನೂ, ಸೇನಾಧೀಶ್ವರನೂ, ಇಸ್ರಾಯೇಲರ ಶೂರನೂ ಆಗಿರುವ ಯೆಹೋವನು ಹೀಗೆ ನುಡಿಯುತ್ತಾನೆ, “ಆಹಾ, ನನ್ನ ವಿರೋಧಿಗಳನ್ನು ಅಡಗಿಸಿ ಶಾಂತನಾಗುವೆನು; ನನ್ನ ಶತ್ರುಗಳಿಗೆ ಮುಯ್ಯಿ ತೀರಿಸುವೆನು.
25ನಿನ್ನ ಮೇಲೆ ಕೈಮಾಡಿ, ನಿನ್ನನ್ನು ಪುಟಕ್ಕೆ ಹಾಕಿ, ನಿನ್ನ ಹೊಲಸುತನವನ್ನು ಸಂಪೂರ್ಣವಾಗಿ ನಿವಾರಿಸಿ, ನಿನ್ನ ಎಲ್ಲಾ ಕಲ್ಮಷವನ್ನು ತೆಗೆದುಬಿಡುವೆನು.
26ಪೂರ್ವದಲ್ಲಿ ನಿನಗಿದ್ದ ನ್ಯಾಯಾಧಿಪತಿಗಳನ್ನು, ಮಂತ್ರಾಲೋಚಕರನ್ನು ಪುನಃ ಒದಗಿಸಿಕೊಡುವೆನು. ಆ ಮೇಲೆ ನೀನು ಸದಾಚಾರದ ನಗರಿ ಎಂತಲೂ, ಸ್ವಾಮಿ ನಿಷ್ಠೆಯುಳ್ಳ ನಗರಿ ಎಂತಲೂ ಕರೆಯಲ್ಪಡುವಿ.”
27ಚೀಯೋನ್ ನ್ಯಾಯತೀರ್ಪಿನಿಂದಲೂ, ನೀತಿ ನಂಬಿಕೆಯಿಂದ ಪಶ್ತಾತ್ತಾಪ ಹೊಂದಿದ ಆಕೆಯ ಜನರೂ ಬಿಡುಗಡೆಯಾಗುವರು.
28ಆದರೆ ದ್ರೋಹಿಗಳೂ ಮತ್ತು ಪಾಪಿಗಳೂ ಒಟ್ಟಾಗಿ ನಾಶವಾಗುವರು. ಹೌದು, ಯೆಹೋವನನ್ನು ತೊರೆದವರು ನಾಶವಾಗುವರು.
29“ನೀವು ಇಷ್ಟಪಟ್ಟ ಏಲಾ ಮರಗಳ ನಿಮಿತ್ತ ನಾಚಿಕೆಪಡುವಿರಿ. ಗೊತ್ತು ಮಾಡಿಕೊಂಡ ವನಗಳ ವಿಷಯವಾಗಿ ಲಜ್ಜೆಪಡುವಿರಿ.
30ಎಲೆ ಒಣಗಿದ ಏಲಾ ಮರದಂತೆಯೂ, ನೀರಿಲ್ಲದ ವನದ ಹಾಗೂ ಇರುವಿರಿ.