6ತೋಳವು ಕುರಿಯ ಸಂಗಡ ವಾಸಿಸುವುದು; ಚಿರತೆಯು ಮೇಕೆಮರಿಯೊಂದಿಗೆ ಮಲಗುವುದು. ಕರುವೂ, ಪ್ರಾಯದ ಸಿಂಹವೂ, ಪುಷ್ಟಪಶುವೂ ಒಟ್ಟಿಗಿರುವವು; ಇವುಗಳನ್ನು ಚಿಕ್ಕ ಮಗುವು ನಡೆಸುವುದು.
7ಹಸುವು ಕರಡಿಯ ಸಂಗಡ ಮೇಯುವುದು; ಅವುಗಳ ಮರಿಗಳು ಜೊತೆಯಾಗಿ ಮಲಗುವವು. ಸಿಂಹವು ಎತ್ತಿನಂತೆ ಹುಲ್ಲು ತಿನ್ನುವುದು.
8ಮೊಲೆಕೂಸು ನಾಗರ ಹಾವಿನ ಹುತ್ತದ ಮೇಲೆ ಆಡುವುದು; ಮೊಲೆಬಿಟ್ಟ ಮಗುವು ಹಾವಿನ ಬಿಲದ ಒಳಗೆ ಕೈಹಾಕುವುದು.
9ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವುದಿಲ್ಲ, ಯಾರೂ ಹಾಳು ಮಾಡುವುದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವುದು.
10ಆ ದಿನದಲ್ಲಿ ಜನಾಂಗಗಳು ತಮಗೆ ಧ್ವಜಪ್ರಾಯನಾಗಿ ನಿಂತಿರುವ ಇಷಯನ ಅಂಕುರದವನನ್ನು ಆಶ್ರಯಿಸುವರು; ಅವನ ವಿಶ್ರಾಂತಿಯ ಸ್ಥಳವು ವೈಭವವುಳ್ಳದ್ದಾಗಿರುವುದು.
11ಆ ದಿನದಲ್ಲಿ ಕರ್ತನು ಉಳಿದ ತನ್ನ ಜನರನ್ನು ಬಿಡಿಸಿಕೊಳ್ಳುವುದಕ್ಕೆ ಎರಡನೆಯ ಸಾರಿ ಕೈಹಾಕಿ, ಅಶ್ಶೂರ, ಐಗುಪ್ತ, ಪತ್ರೋಸ್, ಕೂಷ್, ಏಲಾಮ್, ಶಿನಾರ್, ಹಮಾಥ್ ಸಮುದ್ರದ ಕರಾವಳಿ ದ್ವೀಪಗಳಿಂದಲೂ ಉಳಿದವರನ್ನು ಬರಮಾಡಿಕೊಳ್ಳುವನು.