9ಸ್ತ್ರೀರತ್ನವೇ, ಇತರರ ಕಾಂತರಿಗಿಂತ ನಿನ್ನ ಕಾಂತನ ವಿಶೇಷತೆಯೇನು? ನಮ್ಮಿಂದ ನೀನು ಹೀಗೆ ಪ್ರಮಾಣಮಾಡಿಸುವುದಕ್ಕೆ ಇತರರ ಕಾಂತರಿಗಿಂತ ನಿನ್ನ ಕಾಂತನ ಅತಿಶಯವೇನು?
10ನನ್ನ ನಲ್ಲನು ತೇಜೋಮಯವಾದ ಕೆಂಪು ಬಣ್ಣವುಳ್ಳವನು; ಅವನು ಹತ್ತು ಸಾವಿರ ಜನರಲ್ಲಿ ಧ್ವಜಪ್ರಾಯನು.
11ಅವನ ತಲೆಯು ಚೊಕ್ಕ ಬಂಗಾರದಂತಿದೆ, ಗುಂಗುರು ಗುಂಗುರಾಗಿರುವ ಅವನ ಕೂದಲು ಕಾಗೆಯಂತೆ ಕಪ್ಪಾಗಿದೆ.
12ಅವನ ಕಣ್ಣುಗಳೋ ತುಂಬಿತುಳುಕುವ ತೊರೆಗಳ ಹತ್ತಿರ ತಂಗುವ, ಕ್ಷೀರದಲ್ಲಿ ಸ್ನಾನಮಾಡುವ ಪಾರಿವಾಳಗಳಂತಿವೆ.
13ಅವನ ಕೆನ್ನೆಗಳು ಕರ್ಣಕುಂಡಲ ಗಿಡಗಳ ಪಾತಿಗಳಂತೆಯೂ ಸುಗಂಧಸಸ್ಯಗಳು ಬೆಳೆಯುವ ದಿಬ್ಬಗಳಂತೆಯೂ ಇವೆ; ಅಚ್ಚರಕ್ತಬೋಳವನ್ನು ಸುರಿಸುವ ಅವನ ತುಟಿಗಳು ಕೆಂದಾವರೆಗಳೇ.
14ಅವನ ಕೈಗಳು ಪೀತರತ್ನ ಖಚಿತವಾದ ಬಂಗಾರದ ಸಲಾಕಿಗಳೋಪಾದಿಯಲ್ಲಿವೆ, ಅವನ ಮೈ ಇಂದ್ರನೀಲಮಯವಾದ ದಂತಫಲಕದ ಹಾಗಿದೆ.
15ಅವನ ಕಾಲುಗಳು ಅಪರಂಜಿಯ ಸುಣ್ಣಪಾದಗಳ ಮೇಲಿಟ್ಟ ಚಂದ್ರಕಾಂತ ಸ್ತಂಭಗಳು; ದೇವದಾರುಗಳಷ್ಟು ರಮಣೀಯವಾದ ಅವನ ಗಾಂಭೀರ್ಯವು ಲೆಬನೋನಿಗೆ ಸಮಾನ.