7ಹೋಗು, ನಿನ್ನ ಅನ್ನವನ್ನು ಸಂತೋಷದಿಂದ ಉಣ್ಣು. ನಿನ್ನ ದ್ರಾಕ್ಷಾರಸವನ್ನು ಒಳ್ಳೆಯ ಮನಸ್ಸಿನಿಂದ ಕುಡಿ. ದೇವರು ನಿನ್ನ ಕೆಲಸಗಳನ್ನು ಈಗ ಒಪ್ಪಿಕೊಳ್ಳುತ್ತಾನೆ.
8ನಿನ್ನ ಬಟ್ಟೆಗಳು ಯಾವಾಗಲೂ ಬಿಳುಪಾಗಿರಲಿ. ನಿನ್ನ ತಲೆಗೆ ಎಣ್ಣೆಯ ಕೊರತೆ ಇಲ್ಲದಿರಲಿ.
9ಲೋಕದೊಳಗೆ ದೇವರು ನಿನಗೆ ನೇಮಿಸಿರುವ ವ್ಯರ್ಥ ಜೀವಮಾನದ ವ್ಯರ್ಥ ದಿನಗಳೆಲ್ಲಾ ನಿನ್ನ ಪ್ರಿಯಪತ್ನಿಯೊಡನೆ ಸುಖದಿಂದ ಬದುಕು. ನಿನ್ನ ಬಾಳಿನಲ್ಲಿಯೂ, ನೀನು ಲೋಕದೊಳಗೆ ಪಡುವ ಪ್ರಯಾಸದಲ್ಲಿಯೂ ಇದೇ ನಿನ್ನ ಪಾಲಾಗಿದೆ.
10ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು. ಏಕೆಂದರೆ ನೀನು ಸೇರಬೇಕಾದ ಸಮಾಧಿಯಲ್ಲಿ ಯಾವ ಕೆಲಸವೂ, ಯುಕ್ತಿಯೂ, ತಿಳಿವಳಿಕೆಯೂ, ಜ್ಞಾನವೂ ಇರುವುದಿಲ್ಲ.
11ನಾನು ಲೋಕದಲ್ಲಿ ತಿರುಗಿ ದೃಷ್ಟಿಸಲು ವೇಗಿಗಳಿಗೆ ಓಟದಲ್ಲಿ ಗೆಲುವಿಲ್ಲ. ಬಲಿಷ್ಠರಿಗೆ ಯುದ್ಧದಲ್ಲಿ ಜಯವಿಲ್ಲ. ಜ್ಞಾನಿಗಳಿಗೆ ಅನ್ನ ಸಿಕ್ಕದು. ವಿವೇಕಿಗಳಿಗೆ ಧನ ಲಭಿಸದು. ಪ್ರವೀಣರಿಗೆ ದಯೆ ದೊರಕದು. ಕಾಲವೂ, ಗತಿಯೂ ಅವರೆಲ್ಲರಿಗೆ ಸಂಭವಿಸುತ್ತದೆ.
12ಮನುಷ್ಯನೋ ತನ್ನ ಕಾಲ ಗತಿಯನ್ನು ತಿಳಿಯನಷ್ಟೆ. ಮೀನುಗಳು ಕೆಟ್ಟ ಬಲೆಗೂ, ಪಕ್ಷಿಗಳು ಉರುಲಿನಲ್ಲಿ ಸಿಕ್ಕಿಬೀಳುವ ಹಾಗೆ ಮನುಷ್ಯರು ಪ್ರಾಣಿಗಳ ಹಾಗೆ ತಮ್ಮ ಮೇಲೆ ತಟ್ಟನೆ ಬೀಳುವ ಕೇಡಿನ ಕಾಲಕ್ಕೆ ಸಿಕ್ಕಿಕೊಳ್ಳುವರು.
13ನಾನು ಲೋಕದಲ್ಲಿ ಜ್ಞಾನವನ್ನು ಈ ವಿಧವಾಗಿಯೂ ಕಂಡುಕೊಂಡೆನು. ಅದು ದೊಡ್ಡದೆಂದು ತೋಚಿತು.
14ಇಗೋ, ಒಂದು ಚಿಕ್ಕ ಪಟ್ಟಣ. ಅದರಲ್ಲಿ ಸ್ವಲ್ಪ ಜನರು ಇದ್ದರು. ಒಬ್ಬ ದೊಡ್ಡ ಅರಸನು ಅದಕ್ಕೆ ವಿರುದ್ಧವಾಗಿ ಬಂದು ಮುತ್ತಿಗೆ ಹಾಕಿ ಅಲ್ಲಿ ದೊಡ್ಡ ದಿಬ್ಬಗಳನ್ನು ಹಾಕಿದನು.
15ಆಗ ಅಲ್ಲಿದ್ದವರು ತಮ್ಮಲ್ಲಿ ಒಬ್ಬ ಬಡ ಜ್ಞಾನಿಯನ್ನು ಕಂಡುಕೊಂಡರು. ಅವನು ತನ್ನ ಜ್ಞಾನದಿಂದಲೇ ಆ ಪಟ್ಟಣವನ್ನು ರಕ್ಷಿಸಿದನು. ಆದರೆ ಆ ಬಡ ಜ್ಞಾನಿಯನ್ನು ಯಾರೂ ಸ್ಮರಿಸಲಿಲ್ಲ.