1ಮಗನೇ, ನೀನು ನೆರೆಯವನ ಸಾಲಕ್ಕೆ ಹೊಣೆಯಾಗಿದ್ದರೆ, ಪರನೊಂದಿಗೆ ಪ್ರಮಾಣ ಮಾಡಿಕೊಂಡಿದ್ದರೆ,
2ನೀನು ಮಾತುಕೊಟ್ಟು ಪಾಶಕ್ಕೆ ಸಿಕ್ಕಿಕೊಂಡಿದ್ದೀ, ನಿನ್ನ ವಾಗ್ದಾನವು ನಿನ್ನನ್ನು ಹಿಡಿದಿದೆ.
3ಹೀಗಿರಲು, ಮಗನೇ, ನೀನು ನೆರೆಯವನ ಕೈಗೆ ಸಿಕ್ಕಿಕೊಂಡದ್ದರಿಂದ ತಪ್ಪಿಸಿಕೊಳ್ಳುವ ಒಂದು ಕೆಲಸ ಮಾಡು, ನಡೆ, ತ್ವರೆಪಡು, ಆ ನೆರೆಯವನನ್ನು ಅಂಗಲಾಚಿ ಬೇಡಿಕೋ,
4ನಿನ್ನ ಕಣ್ಣುಗಳಿಗೆ ನಿದ್ರೆಕೊಡಬೇಡ, ನಿನ್ನ ರೆಪ್ಪೆಗಳನ್ನು ಮುಚ್ಚಬೇಡ;
5ಬೇಟೆಗಾರನ ಕೈಯಿಂದ ಜಿಂಕೆಯು ಓಡುವಂತೆಯೂ, ಪಕ್ಷಿಯು ಹಾರಿ ಹೋಗುವ ಹಾಗೂ ತಪ್ಪಿಸಿಕೋ.
6ಸೋಮಾರಿಯೇ, ಇರುವೆಯ ಹತ್ತಿರ ಹೋಗಿ, ಅದರ ನಡವಳಿಕೆಯನ್ನು ನೋಡಿ ಜ್ಞಾನವನ್ನು ಪಡೆದುಕೋ.
7ಅದಕ್ಕೆ ನಾಯಕ, ಅಧಿಕಾರಿ ಹಾಗೂ ಪ್ರಭುಗಳಿಲ್ಲದಿದ್ದರೂ,
8ಬೇಸಿಗೆಯಲ್ಲಿ ತನ್ನ ತೀನಿಯನ್ನು ಸಿದ್ಧಮಾಡುವುದು, ಸುಗ್ಗಿಯ ಕಾಲದಲ್ಲಿ ತನಗೆ ಬೇಕಾದಷ್ಟು ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳುವುದು.
9ಸೋಮಾರಿಯೇ, ಎಷ್ಟು ಹೊತ್ತು ನಿದ್ರೆ? ನಿದ್ರೆಯಿಂದ ಯಾವಾಗ ಎಚ್ಚರಗೊಳ್ಳುವಿ?