18ಜ್ಞಾನವು ತನ್ನನ್ನು ಹಿಡಿದುಕೊಳ್ಳುವವರಿಗೆ ಜೀವವೃಕ್ಷವಾಗಿದೆ. ಅದನ್ನು ಅವಲಂಬಿಸುವ ಪ್ರತಿಯೊಬ್ಬನೂ ಧನ್ಯನು.
19ಯೆಹೋವನು ಜ್ಞಾನದ ಮೂಲಕ ಭೂಮಿಯನ್ನು ಸ್ಥಾಪಿಸಿ, ವಿವೇಕದ ಮುಖಾಂತರ ಆಕಾಶಮಂಡಲವನ್ನು ಸ್ಥಿರಪಡಿಸಿದನು.
20ಭೂಮಿಯ ಕೆಳಗಿನ ಸಾಗರವು ಒಡೆದದ್ದಕ್ಕೂ, ಆಕಾಶವು ಇಬ್ಬನಿಯನ್ನು ಸುರಿಸುವುದಕ್ಕೂ ಆತನ ತಿಳಿವಳಿಕೆಯೇ ಸಾಧನ.
21ನನ್ನ ಮಗನೇ, ಸುಜ್ಞಾನವನ್ನೂ ಮತ್ತು ಬುದ್ಧಿಯನ್ನೂ ಭದ್ರವಾಗಿಟ್ಟುಕೋ, ನಿನ್ನ ದೃಷ್ಟಿಯು ಅವುಗಳ ಮೇಲೆ ತಪ್ಪದೇ ಇರಲಿ.
22ಅವು ನಿನಗೆ ಜೀವವೂ, ನಿನ್ನ ಕೊರಳಿಗೆ ಭೂಷಣವೂ ಆಗಿರುವವು.
23ಆಗ ನೀನು ಎಡವದೆ ನಿನ್ನ ಮಾರ್ಗದಲ್ಲಿ ನಿರ್ಭಯವಾಗಿ ನಡೆಯುವಿ.
24ನೀನು ಮಲಗುವಾಗ ಹೆದರಿಕೆ ಇರುವುದಿಲ್ಲ, ಮಲಗಿದ ಮೇಲೆ ಸುಖವಾಗಿ ನಿದ್ರೆಮಾಡುವಿ.
25ಪಕ್ಕನೆ ಬರುವ ಅಪಾಯಕ್ಕಾಗಲಿ ಅಥವಾ ದುಷ್ಟರಿಗೆ ಸಂಭವಿಸುವ ನಾಶನಕ್ಕಾಗಲಿ ನೀನು ಅಂಜುವುದೇ ಇಲ್ಲ.
26ಯೆಹೋವನು ನಿನ್ನ ಭರವಸಕ್ಕೆ ಆಧಾರನಾಗಿದ್ದು, ನಿನ್ನ ಕಾಲು ಮೋಸದ ಬಲೆಗೆ ಸಿಕ್ಕದಂತೆ ನಿನ್ನನ್ನು ಕಾಪಾಡುವನು.
27ಉಪಕಾರಮಾಡುವುದಕ್ಕೆ ನಿನ್ನಿಂದ ಸಾಧ್ಯವಾಗುವಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ.
28ಕೊಡತಕ್ಕದ್ದು ನಿನ್ನಲ್ಲಿದ್ದರೆ ನೆರೆಯವನಿಗೆ, “ಹೋಗಿ ಬಾ, ನಾಳೆ ಕೊಡುತ್ತೇನೆ” ಎಂದು ಹೇಳಬೇಡ.
29ನೆರೆಯವನಿಗೆ ಕೇಡನ್ನು ಕಲ್ಪಿಸಬಾರದು, ಅವನು ನಿನ್ನ ಪಕ್ಕದಲ್ಲಿ ನಂಬಿಕೆಯಿಂದ ವಾಸಮಾಡುತ್ತಾನಲ್ಲವೇ?
30ನಿನಗೆ ಅಪಕಾರ ಮಾಡದವನ ಸಂಗಡ ಸುಮ್ಮನೆ ಜಗಳವಾಡಬೇಡ.