6ಕೃಪಾಸತ್ಯತೆಗಳಿಂದ ಪಾಪನಿವಾರಣೆ, ಯೆಹೋವನ ಭಯಭಕ್ತಿಯಿಂದ ಹಾನಿನಿವಾರಣೆ.
7ಯೆಹೋವನು ಒಬ್ಬನ ನಡತೆಗೆ ಮೆಚ್ಚಿದರೆ, ಅವನ ಶತ್ರುಗಳನ್ನೂ ಮಿತ್ರರನ್ನಾಗಿ ಮಾಡುವನು.
8ಅನ್ಯಾಯದಿಂದ ಗಳಿಸಿದ ಬಹು ಧನಕ್ಕಿಂತಲೂ, ನ್ಯಾಯದಿಂದ ಕೂಡಿಸಿದ ಅಲ್ಪ ಧನವೇ ಲೇಸು.
9ಮನುಷ್ಯನು ತನ್ನ ಮನದಂತೆ ದಾರಿಯನ್ನು ಆರಿಸಿಕೊಂಡರೂ, ಯೆಹೋವನೇ ಅವನಿಗೆ ಗತಿಯನ್ನು ಏರ್ಪಡಿಸುವನು.
10ರಾಜನ ತುಟಿಗಳಲ್ಲಿ ದೈವೋಕ್ತಿ, ನ್ಯಾಯತೀರಿಸುವುದರಲ್ಲಿ ಅವನ ಬಾಯಿ ತಪ್ಪಿಹೋಗದು.
11ನ್ಯಾಯದ ಅಳತೆ ಮತ್ತು ತಕ್ಕಡಿಗಳು ಯೆಹೋವನ ಏರ್ಪಾಡು, ಚೀಲದಲ್ಲಿನ ತೂಕದಕಲ್ಲುಗಳೆಲ್ಲಾ ಆತನ ಕೈಕೆಲಸವೇ.
12ರಾಜರು ಸಿಂಹಾಸನಕ್ಕೆ ಧರ್ಮವೇ ಆಧಾರವೆಂದು ತಿಳಿದು, ಅಧರ್ಮವನ್ನಾಚರಿಸಲು ಅಸಹ್ಯಪಡುವರು.
13ರಾಜರು ಸತ್ಯದ ತುಟಿಗಳನ್ನು ಮೆಚ್ಚುವರು, ಯಥಾರ್ಥವಾದಿಯನ್ನು ಪ್ರೀತಿಸುವರು.
14ರಾಜನ ಕೋಪ ಮೃತ್ಯುವಿನ ದೂತ, ಜಾಣನು ಅದನ್ನು ಶಮನಪಡಿಸುವನು.
15ಪ್ರಭುವಿನ ಮುಖಪ್ರಸನ್ನತೆ ಜೀವ, ಆತನ ದಯೆ ಮುಂಗಾರುಮುಗಿಲು.
16ಬಂಗಾರಕ್ಕಿಂತಲೂ ಜ್ಞಾನವನ್ನು ಪಡೆಯುವುದು ಎಷ್ಟೋ ಮೇಲು, ಬೆಳ್ಳಿಗಿಂತಲೂ ವಿವೇಕವನ್ನು ಹೊಂದುವುದು ಲೇಸು.
17ಸತ್ಯವಂತನ ರಾಜಮಾರ್ಗ ಹಾನಿಗೆ ದೂರ, ತನ್ನ ನಡತೆಯನ್ನು ಗಮನಿಸುವವನು ತನ್ನ ಆತ್ಮವನ್ನು ಕಾಯುವನು.
18ಗರ್ವದಿಂದ ಭಂಗ, ಉಬ್ಬಿನಿಂದ ದೊಬ್ಬು.
19ಸೊಕ್ಕಿನವರ ಸಂಗಡ ಸೂರೆಯನ್ನು ಹಂಚಿಕೊಳ್ಳುವುದಕ್ಕಿಂತಲೂ, ದೀನರ ಸಂಗಡ ದೈನ್ಯದಿಂದಿರುವುದು ವಾಸಿ.
20ದೇವರ ವಾಕ್ಯವನ್ನು ಸ್ಮರಿಸುವವನು ಸುಕ್ಷೇಮವನ್ನು ಪಡೆಯುವನು, ಯೆಹೋವನಲ್ಲಿ ಭರವಸವಿಡುವವನು ಭಾಗ್ಯವಂತನು.
21ಜ್ಞಾನಹೃದಯರಿಗೆ ಜಾಣರೆಂಬ ಬಿರುದು ಬರುವುದು, ಸವಿತುಟಿಯಿಂದ ಉಪದೇಶ ಶಕ್ತಿಯು ಹೆಚ್ಚುವುದು.
22ವಿವೇಕಿಗೆ ವಿವೇಕವೇ ಜೀವದ ಬುಗ್ಗೆ, ಮೂರ್ಖನಿಗೆ ಮೂರ್ಖತನವೇ ದಂಡನೆ.
23ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ, ಅವನ ತುಟಿಗಳಿಗೆ ಉಪದೇಶ ಶಕ್ತಿಯನ್ನೂ ಹೆಚ್ಚಿಸುವುದು.
24ಸವಿನುಡಿಯು ಜೇನುಕೊಡ, ಅದು ಆತ್ಮಕ್ಕೆ ಸಿಹಿ, ಎಲುಬಿಗೆ ಕ್ಷೇಮ.
25ಮನುಷ್ಯನ ದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು, ಕಟ್ಟಕಡೆಗೆ ಅದು ಮರಣಮಾರ್ಗವೇ.
26ದುಡಿಯುವವನಿಗೆ ಅವನ ಹೊಟ್ಟೆಯೇ ದುಡಿಯುವಂತೆ ಮಾಡುವುದು, ದುಡಿಯಲಿಕ್ಕೆ ಅವನ ಬಾಯೇ ಅವನನ್ನು ಒತ್ತಾಯ ಮಾಡುವುದು.
27ನೀಚನು ಕೇಡೆಂಬ ಕುಣಿಯನ್ನು ತೋಡುತ್ತಾನೆ, ಅವನ ಮಾತುಗಳು ಬೆಂಕಿಯ ಉರಿಯಂತಿದೆ.
28ತುಂಟನು ಜಗಳ ಬಿತ್ತುತ್ತಾನೆ, ಚಾಡಿಕೋರನು ಮಿತ್ರರನ್ನು ಅಗಲಿಸುತ್ತಾನೆ.
29ಬಲಾತ್ಕಾರಿಯು ನೆರೆಯವನನ್ನು ಮರುಳುಗೊಳಿಸಿ, ದುರ್ಮಾರ್ಗಕ್ಕೆ ಎಳೆಯುವನು.
30ಕಣ್ಣನ್ನು ಮುಚ್ಚಿಕೊಳ್ಳುವವನು ಕುಯುಕ್ತಿಯನ್ನು ಕಲ್ಪಿಸುವನು, ತುಟಿಯನ್ನು ಕಚ್ಚುವವನು ಕೇಡನ್ನು ಸಾಧಿಸುವನು.
31ನರೆಗೂದಲೇ ಸುಂದರ ಕಿರೀಟವು, ಅದು ಧರ್ಮಮಾರ್ಗದಲ್ಲಿ ದೊರಕುವುದು.
32ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠ, ತನ್ನನ್ನು ಆಳುವವನು ಪಟ್ಟಣವನ್ನು ಗೆದ್ದವನಿಗಿಂತಲೂ ಬಲಿಷ್ಠ.