1ತಿಳಿವಳಿಕೆಯನ್ನು ಪ್ರೀತಿಸುವವನು ಶಿಕ್ಷಣವನ್ನು ಪ್ರೀತಿಸುತ್ತಾನೆ, ಮೂರ್ಖನು ಗದರಿಕೆಯನ್ನು ದ್ವೇಷಿಸುತ್ತಾನೆ.
2ಯೆಹೋವನು ಒಳ್ಳೆಯವನಿಗೆ ದಯೆತೋರಿಸುವನು, ಕುಯುಕ್ತಿಯುಳ್ಳವನನ್ನು ಕೆಟ್ಟವನೆಂದು ನಿರ್ಣಯಿಸುವನು.
3ಯಾರೂ ದುಷ್ಟತನದಿಂದ ಸ್ಥಿರನಾಗನು, ಶಿಷ್ಟನು ಯಾವಾಗಲೂ ದೃಢಮೂಲನೇ.
4ಗುಣವತಿಯಾದ ಸ್ತ್ರೀಯು ಪತಿಯ ತಲೆಗೆ ಕಿರೀಟ, ಮಾನ ಕಳೆಯುವವಳು ಪತಿಯ ಎಲುಬಿಗೆ ಕ್ಷಯ.
5ಶಿಷ್ಟರ ಉದ್ದೇಶ ನ್ಯಾಯ, ದುಷ್ಟರ ಆಲೋಚನೆ ಮೋಸ.
6ಕೆಟ್ಟವರ ಮಾತು ರಕ್ತಕ್ಕೆ ಹೊಂಚು, ಯಥಾರ್ಥವಂತರ ನುಡಿ ಪ್ರಾಣರಕ್ಷಣೆ.
7ದುರ್ಜನರು ಕೆಡವಲ್ಪಟ್ಟು ನಿರ್ಮೂಲರಾಗುವರು, ಸಜ್ಜನರ ಮನೆಯು ಸ್ಥಿರವಾಗಿ ನಿಲ್ಲುವುದು.
8ಬುದ್ಧಿವಂತನನ್ನು ಅವನ ಬುದ್ಧಿಗೆ ತಕ್ಕಂತೆ ಹೊಗಳುವರು, ವಕ್ರಬುದ್ಧಿಯುಳ್ಳವನನ್ನು ತಿರಸ್ಕರಿಸುವರು.
9ಹೊಟ್ಟೆಗಿಲ್ಲದ ಡಾಂಭಿಕನಿಗಿಂತಲೂ ಸೇವಕನುಳ್ಳ ಸಾಧಾರಣ ಮನುಷ್ಯನ ಸ್ಥಿತಿಯೇ ಲೇಸು.
10ಶಿಷ್ಟನು ತನ್ನ ಪಶುಗಳ ಕ್ಷೇಮವನ್ನು ಲಕ್ಷಿಸುತ್ತಾನೆ, ದುಷ್ಟನ ವಾತ್ಸಲ್ಯವೋ ಕ್ರೂರತನವೇ.
11ದುಡಿದು ಹೊಲಗೇಯುವವನು ಹೊಟ್ಟೆತುಂಬಾ ಉಣ್ಣುವನು, ವ್ಯರ್ಥಕಾರ್ಯಾಸಕ್ತನು ಬುದ್ಧಿಹೀನನೇ.
12ಕೆಡುಕರ ಕೊಳ್ಳೆಯು ದುಷ್ಟರಿಗೆ ಇಷ್ಟ, ಆದರೆ ಶಿಷ್ಟರ ಬುಡ ಫಲದಾಯಕ.
13ದುಷ್ಟನು ತನ್ನ ತುಟಿಗಳ ದೋಷದಿಂದ ಬೋನಿಗೆ ಬೀಳುವನು, ಶಿಷ್ಟನು ಇಕ್ಕಟ್ಟಿನಿಂದ ಪಾರಾಗುವನು.