36ಸೌಲನು ತನ್ನ ಸೈನಿಕರನ್ನು, “ಬನ್ನಿರಿ; ನಾವು ಈ ರಾತ್ರಿಯಲ್ಲೇ ಫಿಲಿಷ್ಟಿಯರನ್ನು ಬೆನ್ನಟ್ಟಿ, ಬೆಳಗಾಗುವವರೆಗೆ ಅವರನ್ನು ಸುಲಿದುಕೊಂಡು, ಒಬ್ಬನನ್ನೂ ಉಳಿಸದೆ ಕೊಂದುಹಾಕೋಣ” ಎಂದು ಕರೆದನು. ಅವರು, “ನಿನ್ನ ಇಷ್ಟದಂತೆ ಆಗಲಿ” ಎಂದು ಹೇಳಿದರು. ಆದರೆ ಯಾಜಕನು, “ಇತ್ತ ಬನ್ನಿರಿ; ನಾವು ದೇವರನ್ನು ವಿಚಾರಿಸೋಣ” ಎಂದನು.
37ಆಗ ಸೌಲನು, “ದೇವಾ, ನಾವು ಫಿಲಿಷ್ಟಿಯರನ್ನು ಬೆನ್ನಟ್ಟಬಹುದೋ? ನೀನು ಅವರನ್ನು ಇಸ್ರಾಯೇಲ್ಯರ ಕೈಗೆ ಒಪ್ಪಿಸಿಕೊಡುವಿಯೋ?” ಎಂದು ಕೇಳಿಕೊಂಡರೂ ದೇವರು ಅವನಿಗೆ ಆ ದಿನ ಉತ್ತರಕೊಡಲೇ ಇಲ್ಲ.
38ಆಗ ಸೌಲನು ಪ್ರಜೆಗಳ ಮುಖಂಡರಿಗೆ, “ನೀವೆಲ್ಲರೂ ಇಲ್ಲಿ ಬಂದು, ಈ ಹೊತ್ತು ಪಾಪ ಯಾವುದರಿಂದ ಉಂಟಾಯಿತು ಎಂದು ವಿಚಾರಿಸಿ ಗೊತ್ತುಮಾಡಿರಿ.
39ಇಸ್ರಾಯೇಲ್ಯರ ರಕ್ಷಕನಾದ ಯೆಹೋವನ ಆಣೆ, ಪಾಪಮಾಡಿದವನು ನನ್ನ ಮಗನಾದ ಯೋನಾತಾನನಾಗಿದ್ದರೂ ಸರಿಯೇ, ಅವನು ಸಾಯಲೇಬೇಕು” ಎಂದು ಹೇಳಿದನು; ಜನರು ಏನೂ ಮಾತನಾಡದೆ ಮೌನವಾಗಿದ್ದರು.
40ಆಗ ಸೌಲನು ಅವರಿಗೆ, “ನೀವೆಲ್ಲರೂ ಒಂದು ಕಡೆ ನಿಲ್ಲಿರಿ; ನಾನೂ ನನ್ನ ಮಗನಾದ ಯೋನಾತಾನನೂ ಮತ್ತೊಂದು ಕಡೆಯಲ್ಲಿರುವೆವು” ಅನ್ನಲು ಅವರು, “ನಿನ್ನ ಇಷ್ಟದಂತೆ ಆಗಲಿ” ಅಂದರು.
41ಅನಂತರ ಸೌಲನು, “ಇಸ್ರಾಯೇಲ್ಯರ ದೇವರೇ, ಸತ್ಯವನ್ನು ತಿಳಿಸು” ಎಂದು ಯೆಹೋವನನ್ನು ಪ್ರಾರ್ಥಿಸಿ ಚೀಟು ಹಾಕಿದಾಗ ಅದು ಅವನಿಗೂ ಯೋನಾತಾನನಿಗೂ ಬಂದಿತು, ಜನರು ಪಾರಾದರು.
42ಸೌಲನು ಪುನಃ, “ನಮ್ಮಿಬ್ಬರೊಳಗೆ ಚೀಟು ಹಾಕಿರಿ” ಎಂದು ಹೇಳಿದನು. ಹಾಗೆಯೇ ಮಾಡಿದಾಗ ಚೀಟು ಯೋನಾತಾನನಿಗೆ ಬಿದ್ದಿತು.
43ಆಗ ಸೌಲನು ಯೋನಾತಾನನನ್ನು, “ನೀನು ಏನು ಮಾಡಿದಿ, ಹೇಳು” ಎಂದು ಕೇಳಲು ಅವನು, “ನಾನು ಕೋಲಿನಿಂದ ಸ್ವಲ್ಪ ಜೇನುತುಪ್ಪವನ್ನು ತೆಗೆದುಕೊಂಡು ತಿಂದೆನು; ನಾನು ಸಾಯುವುದಕ್ಕೆ ಸಿದ್ಧನಾಗಿದ್ದೇನೆ” ಎಂದು ಉತ್ತರಕೊಟ್ಟನು.