Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 1 ಅರಸು - 1 ಅರಸು 8

1 ಅರಸು 8:18-32

Help us?
Click on verse(s) to share them!
18ಆಗ ಯೆಹೋವನು ಅವನಿಗೆ, ‘ನೀನು ನನ್ನ ಹೆಸರಿಗೋಸ್ಕರ ಒಂದು ಮನೆಯನ್ನು ಕಟ್ಟುವುದಕ್ಕೆ ಮನಸ್ಸು ಮಾಡಿದ್ದು ಒಳ್ಳೇದೆ ಸರಿ. ಆದರೂ ನೀನು ಅದನ್ನು ಕಟ್ಟಬಾರದು.
19ನಿನ್ನಿಂದ ಹುಟ್ಟುವ ಮಗನು ನನ್ನ ಹೆಸರಿಗಾಗಿ ಒಂದು ಆಲಯವನ್ನು ಕಟ್ಟಬೇಕು’ ಎಂದು ಹೇಳಿದನು.
20ಯೆಹೋವನು ತಾನು ಕೊಟ್ಟ ಮಾತನ್ನು ನೆರವೇರಿಸಿದನು. ಆತನ ವಾಗ್ದಾನದಂತೆ ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ಇಸ್ರಾಯೇಲ್ ಸಿಂಹಾಸನದ ಮೇಲೆ ಅರಸನಾಗಿ ಕುಳಿತುಕೊಂಡು ಇಸ್ರಾಯೇಲ್ ದೇವರಾದ ಯೆಹೋವನಿಗೋಸ್ಕರ ಈ ಆಲಯವನ್ನು ಕಟ್ಟಿದೆನು.
21ಇದಲ್ಲದೆ ಐಗುಪ್ತದೇಶದಿಂದ ಬಿಡುಗಡೆ ಹೊಂದಿದ ನಮ್ಮ ಪೂರ್ವಿಕರಿಗೆ ಯೆಹೋವನಿಂದ ದೊರಕಿದ ನಿಬಂಧನಾಶಾಸನಗಳಿರುವ ಮಂಜೂಷಕ್ಕೆ ಸ್ಥಳವನ್ನು ಪ್ರತ್ಯೇಕಿಸಿ ಅಲ್ಲಿ ಅದನ್ನು ಇರಿಸಿದೆನು” ಎಂದು ಹೇಳಿದನು.
22ತರುವಾಯ ಸೊಲೊಮೋನನು ಎಲ್ಲಾ ಇಸ್ರಾಯೇಲರ ಎದುರಿನಲ್ಲಿ ಯೆಹೋವನ ಯಜ್ಞವೇದಿಯ ಮುಂದೆ ನಿಂತು ಆಕಾಶದ ಕಡೆಗೆ ಕೈಗಳನ್ನೆತ್ತಿ ಹೀಗೆ ಪ್ರಾರ್ಥಿಸಿದನು,
23“ಇಸ್ರಾಯೇಲ್ ದೇವರಾದ ಯೆಹೋವನೇ, ಭೂಲೋಕದಲ್ಲಿಯೂ, ಪರಲೋಕದಲ್ಲಿಯೂ ನಿನಗೆ ಸಮಾನನಾದ ದೇವರಿಲ್ಲ. ಪೂರ್ಣಮನಸ್ಸಿನಿಂದ ನಿನಗೆ ನಡೆದುಕೊಳ್ಳುವಂಥ ಸೇವಕರ ವಿಷಯದಲ್ಲಿ ನೀನು ನಿನ್ನ ಒಡಂಬಡಿಕೆಯನ್ನೂ, ಕೃಪೆಯನ್ನೂ ನೆರವೇರಿಸುವವನು.
24ನಿನ್ನ ಸೇವಕನೂ ನನ್ನ ತಂದೆಯೂ ಆದ ದಾವೀದನಿಗೆ ಕೊಟ್ಟ ಮಾತನ್ನು ನೆರವೇರಿಸಿರುವೆ. ನಿನ್ನ ಬಾಯಿ ನುಡಿದಿದ್ದನ್ನು ನಿನ್ನ ಹಸ್ತವು ಈಗ ನೆರವೇರಿಸಿದೆ.
25ಇಸ್ರಾಯೇಲ್ ದೇವರಾದ ಯೆಹೋವನೇ, ನೀನು ನನ್ನ ತಂದೆಯಾದ ದಾವೀದನಿಗೆ, ‘ನಿನ್ನ ಸಂತಾನದವರು ನಿನ್ನಂತೆ ಜಾಗರೂಕತೆಯಿಂದ ನನ್ನ ಮಾರ್ಗದಲ್ಲೇ ನಡೆದುಕೊಳ್ಳುವುದಾದರೆ, ಅವರು ತಪ್ಪದೆ ಇಸ್ರಾಯೇಲ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವಂತೆ ಮಾಡುವೆನು’ ಎಂಬುದಾಗಿ ವಾಗ್ದಾನ ಮಾಡಿದಿಯಲ್ಲಾ ಅದನ್ನು ನೆರವೇರಿಸು.
26ಇಸ್ರಾಯೇಲ್ ದೇವರೇ, ನೀನು ನಿನ್ನ ಸೇವಕನೂ, ನನ್ನ ತಂದೆಯೂ ಆದ ದಾವೀದನಿಗೆ ನುಡಿದಿದ್ದೆಲ್ಲವೂ ಸಾರ್ಥಕವಾಗಲಿ.
27“ದೇವರು ನಿಜವಾಗಿ ಭೂಲೋಕದಲ್ಲಿ ವಾಸಿಸುವನೋ? ಆಕಾಶವೂ ಉನ್ನತೋನ್ನತವಾದ ಆಕಾಶವೂ ನಿನ್ನ ವಾಸಕ್ಕೆ ಸಾಲದು. ಹೀಗಿರುವಲ್ಲಿ ನಾನು ಕಟ್ಟಿಸಿದ ಈ ಮಂದಿರವು ಹೇಗೆ ಸಾಕಾದೀತು?
28ಆದರೂ ನನ್ನ ದೇವರೇ, ಯೆಹೋವನೇ, ನಿನ್ನ ಸೇವಕನ ಪ್ರಾರ್ಥನೆಗೂ, ವಿಜ್ಞಾಪನೆಗೂ ಕಿವಿಗೊಡು. ಈ ಹೊತ್ತು ನಿನ್ನನ್ನು ಪ್ರಾರ್ಥಿಸುತ್ತಿರುವ ನಿನ್ನ ಸೇವಕನ ಮೊರೆಯನ್ನು ಲಾಲಿಸು.
29ಈ ಸ್ಥಳವನ್ನು ಕುರಿತು, ‘ನನ್ನ ನಾಮಪ್ರಭಾವವು ಇಲ್ಲಿ ವಾಸಿಸುವುದು’ ಎಂದು ಹೇಳಿದವನೇ, ನಿನ್ನ ಕಟಾಕ್ಷವು ಹಗಲಿರುಳು ಈ ಮಂದಿರದ ಮೇಲಿರಲಿ. ಇಲ್ಲಿ ನಿನ್ನ ಸೇವಕರು ನಿನ್ನನ್ನು ಪ್ರಾರ್ಥಿಸುವಾಗೆಲ್ಲಾ ಅವರಿಗೆ ಸದುತ್ತರವನ್ನು ದಯಪಾಲಿಸು.
30ನಿನ್ನ ಸೇವಕನಾದ ನಾನಾಗಲಿ ನಿನ್ನ ಪ್ರಜೆಗಳಾದ ಇಸ್ರಾಯೇಲರಾಗಲಿ ಈ ಸ್ಥಳದ ಕಡೆಗೆ ತಿರುಗಿಕೊಂಡು ನಿನ್ನನ್ನು ಪ್ರಾರ್ಥಿಸುವುದಾದರೆ, ನಿನ್ನ ನಿವಾಸವಾಗಿರುವ ಪರಲೋಕದಿಂದ ನಮ್ಮ ಬಿನ್ನಹವನ್ನು ಕೇಳಿ, ಕ್ಷಮೆಯನ್ನು ಅನುಗ್ರಹಿಸು.
31“ನೆರೆಯವನಿಗೆ ವಿರೋಧವಾಗಿ ತಪ್ಪುಮಾಡಿದವನೆಂಬ ಸಂಶಯಕ್ಕೆ ಗುರಿಯಾದ ಮನುಷ್ಯನು ತಾನು ನಿರ್ದೋಷಿಯೆಂದು ಪ್ರಮಾಣಮಾಡಬೇಕಾದಾಗ ಅಂಥವನು ಈ ಆಲಯಕ್ಕೆ ಬಂದು ನಿನ್ನ ಈ ಯಜ್ಞವೇದಿಯ ಮುಂದೆ ನಿಂತು ಪ್ರಮಾಣಮಾಡುವುದಾದರೆ,
32ಪರಲೋಕದಲ್ಲಿರುವ ನೀನು ಅದನ್ನು ಕೇಳಿ ನಿನ್ನ ಸೇವಕರ ವ್ಯಾಜ್ಯವನ್ನು ತೀರಿಸು. ದುಷ್ಟನಿಗೆ ಅವನ ದುಷ್ಟತ್ವವನ್ನು ಅವನ ತಲೆಯ ಮೇಲೆಯೇ ಬರಮಾಡಿ, ಅವನು ಅಪರಾಧಿಯೆಂದು ತೋರಿಸು. ನೀತಿವಂತನಿಗೆ ಅವನ ನೀತಿಯ ಫಲವನ್ನು ಅನುಗ್ರಹಿಸಿ ಅವನು ನೀತಿವಂತನೆಂದೂ ತೋರಿಸಿಕೊಡು.

Read 1 ಅರಸು 81 ಅರಸು 8
Compare 1 ಅರಸು 8:18-321 ಅರಸು 8:18-32