2“ಇವನು ತಾನೇ ಕ್ರಿಸ್ತನು, ಅರಸನಾಗಿದ್ದೇನೆಂದು ಹೇಳುತ್ತಾ, ಕೈಸರನಿಗೆ ಸುಂಕ ಕೊಡಬಾರದೆಂದು ಬೋಧಿಸುತ್ತಾ, ನಮ್ಮ ದೇಶದವರ ಮನಸ್ಸು ಕೆಡಿಸುವುದನ್ನು ನಾವು ಕಂಡಿದ್ದೇವೆ” ಎಂಬುದಾಗಿ ಆತನ ಮೇಲೆ ದೂರು ಹೇಳುವುದಕ್ಕೆ ತೊಡಗಿದರು.
3ಪಿಲಾತನು ಯೇಸುವನ್ನು “ನೀನು ಯೆಹೂದ್ಯರ ಅರಸನೋ” ಎಂದು ಕೇಳಲು, ಆತನು, “ನೀನೇ ಹೇಳಿದ್ದೀ” ಎಂದು ಉತ್ತರ ಕೊಟ್ಟನು.
4ಪಿಲಾತನು ಮುಖ್ಯಯಾಜಕರಿಗೂ, ಜನರ ಗುಂಪಿಗೂ, “ಈ ಮನುಷ್ಯನಲ್ಲಿ ನನಗೆ ಯಾವ ಅಪರಾಧವೂ ಕಾಣಿಸುತ್ತಿಲ್ಲವೆಂದು” ಹೇಳಿದನು.
5ಅದಕ್ಕೆ ಅವರು, “ಗಲಿಲಾಯದಿಂದ ಮೊದಲುಗೊಂಡು ಇಲ್ಲಿಯವರೆಗೂ ಯೂದಾಯ ಸೀಮೆಯಲ್ಲೆಲ್ಲಾ ಇವನು ಬೋಧನೆ ಮಾಡುತ್ತಾ ಜನರ ಮನಸ್ಸನ್ನು ಕದಲಿಸುತ್ತಾನೆ” ಎಂದು ಇನ್ನೂ ಒತ್ತಿ ಹೇಳಿದರು.
6ಇದನ್ನು ಪಿಲಾತನು ಕೇಳಿ, ಈ ಮನುಷ್ಯನು ಗಲಿಲಾಯದವನೋ ಎಂದು ವಿಚಾರಿಸಿ,
7ಈತನು ಹೆರೋದನ ಅಧಿಕಾರಕ್ಕೆ ಒಳಪಟ್ಟವನು ಎಂದು ತಿಳಿದುಕೊಂಡು ಯೇಸುವನ್ನು ಹೆರೋದನ ಬಳಿಗೆ ಕಳುಹಿಸಿದನು. ಹೆರೋದನು ಆ ದಿನಗಳಲ್ಲಿ ಯೆರೂಸಲೇಮಿನಲ್ಲೇ ಇದ್ದನು.
8ಹೆರೋದನು ಯೇಸುವನ್ನು ನೋಡಿದಾಗ ಬಹಳ ಸಂತೋಷಪಟ್ಟನು. ಏಕೆಂದರೆ ಆತನ ವಿಷಯವಾಗಿ ಅನೇಕ ಸಂಗತಿಗಳನ್ನು ಕೇಳಿದ್ದರಿಂದ ಆತನನ್ನು ಕಾಣಬೇಕೆಂದು ಬಹು ಕಾಲದಿಂದ ಅಪೇಕ್ಷಿಸಿದ್ದನು. ಆತನಿಂದ ಯಾವುದಾದರೂ ಒಂದು ಸೂಚಕ ಕಾರ್ಯವಾಗುವುದನ್ನು ನೋಡಬೇಕೆಂದು ನಿರೀಕ್ಷಿಸಿದನು.
9ಹೆರೋದನು ಅನೇಕ ಮಾತುಗಳಿಂದ ಯೇಸುವನ್ನು ಪ್ರಶ್ನೆ ಮಾಡಿದಾಗ್ಯೂ ಆತನು ಅವನಿಗೆ ಏನೂ ಉತ್ತರ ಕೊಡಲಿಲ್ಲ.