8ತಿರುಗಿ ಆತನು ಬಗ್ಗಿಕೊಂಡು ಬೆರಳಿನಿಂದ ನೆಲದ ಮೇಲೆ ಬರೆಯುತ್ತಾ ಇದ್ದನು.
9ಅದನ್ನು ಅವರು ಕೇಳಿ ಹಿರಿಯರು ಮೊದಲುಗೊಂಡು ಎಲ್ಲರೂ ಒಬ್ಬೊಬ್ಬರಾಗಿ ಹೊರಟು ಹೋದರು; ಆಗ ಯೇಸು ಒಬ್ಬನೇ ಉಳಿದನು. ಆ ಸ್ತ್ರೀಯು ಅಲ್ಲಿಯೇ ನಿಂತಿದ್ದಳು.
10ಯೇಸು ನೆಟ್ಟಗೆ ಕುಳಿತುಕೊಂಡು ಆಕೆಗೆ, “ಸ್ತ್ರೀಯೇ, ಅವರು ಎಲ್ಲಿಗೆ ಹೋದರು? ನಿನ್ನನ್ನು ಖಂಡಿಸುವುದಕ್ಕೆ ಯಾರೂ ಉಳಿಯಲಿಲ್ಲವೋ?” ಎಂದನು.
11ಅದಕ್ಕೆ ಆಕೆಯು “ಕರ್ತನೇ, ಯಾರೂ ಶಿಕ್ಷೆ ವಿಧಿಸಲಿಲ್ಲ” ಎಂದಳು. ಯೇಸು ಆಕೆಗೆ “ನಾನೂ ಸಹ ನಿನ್ನನ್ನು ಶಿಕ್ಷೆ ವಿಧಿಸುವುದಿಲ್ಲ, ಹೋಗು, ಇನ್ನು ಮುಂದೆ ಪಾಪಮಾಡಬೇಡ” ಎಂದು ಹೇಳಿದನು.
12ಯೇಸು ಪುನಃ ಜನರೊಂದಿಗೆ ಮಾತನಾಡುತ್ತಾ, “ನಾನೇ ಲೋಕದ ಬೆಳಕಾಗಿದ್ದೇನೆ. ನನ್ನನ್ನು ಹಿಂಬಾಲಿಸುವವನು ಎಂದಿಗೂ ಕತ್ತಲೆಯಲ್ಲಿ ನಡೆಯುವುದಿಲ್ಲ, ಆದರೆ ಅವನು ಜೀವದ ಬೆಳಕನ್ನು ಹೊಂದಿರುವನು” ಎಂದು ಹೇಳಿದನು.
13ಫರಿಸಾಯರು ಆತನಿಗೆ “ನಿನ್ನ ವಿಷಯವಾಗಿ ನೀನೇ ಸಾಕ್ಷಿ ಹೇಳುತ್ತಿರುವೆ, ನಿನ್ನ ಸಾಕ್ಷಿಯು ನಿಜವಲ್ಲ” ಎಂದು ಹೇಳಲು
14ಯೇಸು ಅವರಿಗೆ “ನನ್ನ ವಿಷಯವಾಗಿ ನಾನು ಸಾಕ್ಷಿನೀಡಿದರೂ, ನನ್ನ ಸಾಕ್ಷಿ ಸತ್ಯವಾದದ್ದು. ನಾನು ಎಲ್ಲಿಂದ ಬಂದೆ ಮತ್ತು ಎಲ್ಲಿಗೆ ಹೋಗುತ್ತೇನೆ ಎಂದು ನನಗೆ ತಿಳಿದಿದೆ, ಆದರೆ ನಾನು ಎಲ್ಲಿಂದ ಬಂದೆನೋ ಇಲ್ಲವೆ ಎಲ್ಲಿಗೆ ಹೋಗುತ್ತೇನೋ ಎಂಬುದು ನಿಮಗೆ ತಿಳಿಯದು.