18“ಬನ್ನಿರಿ ವಾದಿಸುವ” ಎಂದು ಯೆಹೋವನು ಅನ್ನುತ್ತಾನೆ. “ನಿಮ್ಮ ಪಾಪಗಳು ಕಡುಕೆಂಪಾಗಿದ್ದರೂ, ಹಿಮದ ಹಾಗೆ ಬಿಳುಪಾಗುವವು. ಕಿರಮಂಜಿ ಬಣ್ಣವಾಗಿದ್ದರೂ ಉಣ್ಣೆಯಂತೆ ಬೆಳ್ಳಗಾಗುವವು.
19ನೀವು ಒಪ್ಪಿ ವಿಧೇಯರಾದರೆ ದೇಶದ ಮೇಲನ್ನು ಅನುಭವಿಸುವಿರಿ.
20ಒಪ್ಪದೆ ತಿರುಗಿ ಬಿದ್ದರೆ, ಕತ್ತಿಯ ಬಾಯಿಗೆ ತುತ್ತಾಗುವಿರಿ” ಈ ಮಾತನ್ನು ಯೆಹೋವನೇ ನುಡಿದಿದ್ದಾನೆ.
21ಅಯ್ಯೋ, ನಂಬಿಕೆಯುಳ್ಳ ನಗರಿಯು ಸೂಳೆಯಾದಳಲ್ಲಾ! ನ್ಯಾಯದಿಂದ ತುಂಬಿ ಧರ್ಮಕ್ಕೆ ನೆಲೆಯಾಗಿದ್ದ ನಗರ ಈಗ ಕೊಲೆಪಾತಕರಿಗೆ ನೆಲೆಯಾಗಿದೆ.
22ನಿನ್ನ ಬೆಳ್ಳಿಯು ಅಶುದ್ಧವಾಯಿತು. ನಿನ್ನ ದ್ರಾಕ್ಷಾರಸವು ನೀರಾಯಿತು.
23ನಿನ್ನ ಅಧಿಕಾರಿಗಳು ದ್ರೋಹಿಗಳೂ, ಕಳ್ಳರ ಗೆಳೆಯರೂ ಆಗಿದ್ದಾರೆ; ಪ್ರತಿಯೊಬ್ಬನೂ ಕಾಣಿಕೆಗಳನ್ನು ಪ್ರೀತಿಸಿ, ಲಂಚಗಳನ್ನು ಹುಡುಕುವನು; ಅನಾಥರಿಗೆ ನ್ಯಾಯತೀರಿಸುವುದಿಲ್ಲ; ವಿಧವೆಯರ ವ್ಯಾಜ್ಯವು ಅವರ ಮನಸ್ಸಿಗೆ ಬಾರದು.
24ಆದುದರಿಂದ ಕರ್ತನೂ, ಸೇನಾಧೀಶ್ವರನೂ, ಇಸ್ರಾಯೇಲರ ಶೂರನೂ ಆಗಿರುವ ಯೆಹೋವನು ಹೀಗೆ ನುಡಿಯುತ್ತಾನೆ, “ಆಹಾ, ನನ್ನ ವಿರೋಧಿಗಳನ್ನು ಅಡಗಿಸಿ ಶಾಂತನಾಗುವೆನು; ನನ್ನ ಶತ್ರುಗಳಿಗೆ ಮುಯ್ಯಿ ತೀರಿಸುವೆನು.
25ನಿನ್ನ ಮೇಲೆ ಕೈಮಾಡಿ, ನಿನ್ನನ್ನು ಪುಟಕ್ಕೆ ಹಾಕಿ, ನಿನ್ನ ಹೊಲಸುತನವನ್ನು ಸಂಪೂರ್ಣವಾಗಿ ನಿವಾರಿಸಿ, ನಿನ್ನ ಎಲ್ಲಾ ಕಲ್ಮಷವನ್ನು ತೆಗೆದುಬಿಡುವೆನು.
26ಪೂರ್ವದಲ್ಲಿ ನಿನಗಿದ್ದ ನ್ಯಾಯಾಧಿಪತಿಗಳನ್ನು, ಮಂತ್ರಾಲೋಚಕರನ್ನು ಪುನಃ ಒದಗಿಸಿಕೊಡುವೆನು. ಆ ಮೇಲೆ ನೀನು ಸದಾಚಾರದ ನಗರಿ ಎಂತಲೂ, ಸ್ವಾಮಿ ನಿಷ್ಠೆಯುಳ್ಳ ನಗರಿ ಎಂತಲೂ ಕರೆಯಲ್ಪಡುವಿ.”
27ಚೀಯೋನ್ ನ್ಯಾಯತೀರ್ಪಿನಿಂದಲೂ, ನೀತಿ ನಂಬಿಕೆಯಿಂದ ಪಶ್ತಾತ್ತಾಪ ಹೊಂದಿದ ಆಕೆಯ ಜನರೂ ಬಿಡುಗಡೆಯಾಗುವರು.