4ಆದರೆ ಬಡವರಿಗೋಸ್ಕರ ನ್ಯಾಯವಾಗಿ ತೀರ್ಪುಮಾಡುವನು. ಲೋಕದ ದೀನರಿಗಾಗಿ ಧರ್ಮವನ್ನು ನಿರ್ಣಯಿಸುವನು. ಭೂಮಿಯನ್ನು ತನ್ನ ಬಾಯಿಯ ಕೋಲಿನಿಂದ ದಂಡಿಸುವನು. ದುಷ್ಟನನ್ನು ತನ್ನ ತುಟಿಗಳ ಉಸಿರಿನಿಂದ ಕೊಲ್ಲುವನು.
5ಧರ್ಮವೇ ಅವನಿಗೆ ನಡುಕಟ್ಟು, ಪ್ರಾಮಾಣಿಕತೆಯೇ ಸೊಂಟಪಟ್ಟಿ.
6ತೋಳವು ಕುರಿಯ ಸಂಗಡ ವಾಸಿಸುವುದು; ಚಿರತೆಯು ಮೇಕೆಮರಿಯೊಂದಿಗೆ ಮಲಗುವುದು. ಕರುವೂ, ಪ್ರಾಯದ ಸಿಂಹವೂ, ಪುಷ್ಟಪಶುವೂ ಒಟ್ಟಿಗಿರುವವು; ಇವುಗಳನ್ನು ಚಿಕ್ಕ ಮಗುವು ನಡೆಸುವುದು.
7ಹಸುವು ಕರಡಿಯ ಸಂಗಡ ಮೇಯುವುದು; ಅವುಗಳ ಮರಿಗಳು ಜೊತೆಯಾಗಿ ಮಲಗುವವು. ಸಿಂಹವು ಎತ್ತಿನಂತೆ ಹುಲ್ಲು ತಿನ್ನುವುದು.
8ಮೊಲೆಕೂಸು ನಾಗರ ಹಾವಿನ ಹುತ್ತದ ಮೇಲೆ ಆಡುವುದು; ಮೊಲೆಬಿಟ್ಟ ಮಗುವು ಹಾವಿನ ಬಿಲದ ಒಳಗೆ ಕೈಹಾಕುವುದು.
9ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವುದಿಲ್ಲ, ಯಾರೂ ಹಾಳು ಮಾಡುವುದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವುದು.
10ಆ ದಿನದಲ್ಲಿ ಜನಾಂಗಗಳು ತಮಗೆ ಧ್ವಜಪ್ರಾಯನಾಗಿ ನಿಂತಿರುವ ಇಷಯನ ಅಂಕುರದವನನ್ನು ಆಶ್ರಯಿಸುವರು; ಅವನ ವಿಶ್ರಾಂತಿಯ ಸ್ಥಳವು ವೈಭವವುಳ್ಳದ್ದಾಗಿರುವುದು.
11ಆ ದಿನದಲ್ಲಿ ಕರ್ತನು ಉಳಿದ ತನ್ನ ಜನರನ್ನು ಬಿಡಿಸಿಕೊಳ್ಳುವುದಕ್ಕೆ ಎರಡನೆಯ ಸಾರಿ ಕೈಹಾಕಿ, ಅಶ್ಶೂರ, ಐಗುಪ್ತ, ಪತ್ರೋಸ್, ಕೂಷ್, ಏಲಾಮ್, ಶಿನಾರ್, ಹಮಾಥ್ ಸಮುದ್ರದ ಕರಾವಳಿ ದ್ವೀಪಗಳಿಂದಲೂ ಉಳಿದವರನ್ನು ಬರಮಾಡಿಕೊಳ್ಳುವನು.
12ಅವನು ಜನಾಂಗಗಳಲ್ಲಿ ಧ್ವಜವನ್ನೆತ್ತಿ, ಇಸ್ರಾಯೇಲರಲ್ಲಿ ಸೆರೆಗೆ ಒಯ್ಯಲ್ಪಟ್ಟವರನ್ನೂ, ಯೆಹೂದದಿಂದ ಚದರಿದವರನ್ನೂ ಭೂಮಿಯ ನಾಲ್ಕು ಕಡೆಗಳಿಂದಲೂ ಕೂಡಿಸುವನು.