21ಉಳಿದವರು ಅಂದರೆ ಯಾಕೋಬ್ಯರಲ್ಲಿ ಉಳಿದವರೂ ಸಹ ಪರಾಕ್ರಮಿಯಾದ ದೇವರ ಕಡೆಗೆ ತಿರುಗಿಕೊಳ್ಳುವರು.
22ಇಸ್ರಾಯೇಲೇ, ನಿನ್ನ ಜನರು ಸಮುದ್ರದ ಉಸುಬಿನಂತೆ ಅಸಂಖ್ಯವಾಗಿದ್ದರೂ ಅವರಲ್ಲಿ ಉಳಿದವರು ಮಾತ್ರ ತಿರುಗಿಕೊಳ್ಳುವರು. ನಾಶವಾಗುವುದಕ್ಕೆ ವಿಧಿಸಲ್ಪಟ್ಟದ್ದು, ನ್ಯಾಯನೀತಿಯಿಂದ ತುಂಬಿ ತುಳುಕುವುದು.
23ಏಕೆಂದರೆ ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಭೂಮಂಡಲದಲ್ಲೆಲ್ಲಾ ನಿಶ್ಚಯಿಸಲ್ಪಟ್ಟ ನಾಶನವನ್ನು ಉಂಟುಮಾಡುವನು.
24ಆದುದರಿಂದ ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಹೀಗೆ ಹೇಳುತ್ತಾನೆ, “ಚೀಯೋನಿನಲ್ಲಿ ವಾಸಿಸುವ ನನ್ನ ಜನರೇ, ಐಗುಪ್ತರು ಮಾಡಿದಂತೆ, ನಿಮ್ಮನ್ನು ಕೋಲಿನಿಂದ ಹೊಡೆದು, ನಿಮ್ಮ ವಿರುದ್ಧವಾಗಿ ದೊಣ್ಣೆಯನ್ನು ಎತ್ತುವ ಅಶ್ಶೂರರಿಗೆ ಭಯಪಡಬೇಡಿರಿ.
25ಇನ್ನು ಸ್ವಲ್ಪ ಕಾಲದೊಳಗೆ ನಿಮ್ಮ ಮೇಲಿನ ಉಗ್ರವು ತೀರಿ, ನನ್ನ ಕೋಪವು ಅವರ ನಾಶನಕ್ಕಾಗುವುದು.”
26ಸೇನಾಧೀಶ್ವರನಾದ ಯೆಹೋವನು ಓರೇಬ ಬಂಡೆಯ ಹತ್ತಿರ ಮಿದ್ಯಾನ್ಯರನ್ನು ಹತಮಾಡಿದಂತೆ, ಆತನು ಕೋಲನ್ನು ಸಮುದ್ರದ ಮೇಲೆ ಚಾಚಿ, ಐಗುಪ್ತರ ಮೇಲೆ ಎತ್ತಿದಂತೆ ಎತ್ತುವನು.
27ಆ ದಿನದಲ್ಲಿ, ಅವರು ಹೊರಿಸಿದ ಹೊರೆಯು, ನಿಮ್ಮ ಬೆನ್ನಿನಿಂದಲೂ, ಹೂಡಿದ ನೊಗವು ಕುತ್ತಿಗೆಯಿಂದಲೂ ತೊಲಗುವುದು, ಮತ್ತು ನೀವು ಕೊಬ್ಬಿದ ಕಾರಣ ನೊಗವು ಮುರಿದು ಹೋಗುವುದು.
28ಶತ್ರುಗಳು ಅಯ್ಯಾಥಿನ ಮೇಲೆ ದಂಡೆತ್ತಿ ಬಂದಿದ್ದಾರೆ, ಮಿಗ್ರೋನನ್ನು ಹಾದುಹೋಗಿದ್ದಾರೆ; ಮಿಕ್ಮಾಷಿನಲ್ಲಿ ತಮ್ಮ ಸಾಮಗ್ರಿಯನ್ನು ಇಟ್ಟುಬಿಟ್ಟಿದ್ದಾರೆ.
29ಕಣಿವೆಯನ್ನು ದಾಟಿದ್ದಾರೆ, ಗೆಬದಲ್ಲಿ ದಂಡಿಳಿಸುವ ಅನ್ನುತ್ತಾರೆ. ರಾಮಾ ನಡುಗುತ್ತದೆ, ಸೌಲನ ಗಿಬೆಯು ಓಡಿಹೋಯಿತು.
30ಗಲ್ಲೀಮ್ ಗ್ರಾಮವೇ, ಕೂಗಿ ಅರಚಿಕೋ! ಲಯೆಷವೇ, ಕಿವಿಗೊಡು! ಅನಾತೋತೇ, ಪ್ರತಿಧ್ವನಿ ಕೊಡು!
31ಮದ್ಮೇನ ದಿಕ್ಕಾಪಾಲಾಯಿತು. ಗೇಬೀಮಿನ ನಿವಾಸಿಗಳು ವಲಸೆ ಹೋದರು.