Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯಾಜ - ಯಾಜ 13

ಯಾಜ 13:32-58

Help us?
Click on verse(s) to share them!
32ಏಳನೆಯ ದಿನದಲ್ಲಿ ಯಾಜಕನು ಪರೀಕ್ಷಿಸುವಾಗ ಆ ಗಾಯ ಹರಡಿಕೊಳ್ಳದೆ ಇದ್ದರೆ ಮತ್ತು ಅದು ಇರುವ ಭಾಗದಲ್ಲಿ ಹಳದಿ ಬಣ್ಣದ ಕೂದಲು ಇಲ್ಲದಿದ್ದರೆ ಮತ್ತು ಅದು ಉಳಿದ ಚರ್ಮಕ್ಕಿಂತ ಆಳವಾಗಿ ಕಾಣದೆಹೋದರೆ,
33ಅವನು ಕ್ಷೌರಮಾಡಿಸಿಕೊಳ್ಳಬೇಕು. ಆ ಗಾಯ ಇರುವ ಭಾಗವನ್ನು ಮಾತ್ರ ಕ್ಷೌರಮಾಡಿಸಿಕೊಳ್ಳಬಾರದು. ಯಾಜಕನು ಅವನನ್ನು ಇನ್ನು ಏಳು ದಿನಗಳವರೆಗೂ ಪ್ರತ್ಯೇಕಿಸಬೇಕು.
34ಏಳನೆಯ ದಿನದಲ್ಲಿ ಯಾಜಕನು ಪುನಃ ಆ ಗಾಯವನ್ನು ನೋಡುವಾಗ ಅದು ಚರ್ಮದಲ್ಲಿ ಹರಡಿಕೊಳ್ಳದೆ ಹೋಗಿದ್ದರೆ ಉಳಿದ ಚರ್ಮಕ್ಕಿಂತ ಆಳವಾಗಿ ತೋರದೆ ಇದ್ದರೆ ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು. ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡಾಗ ಶುದ್ಧನಾಗುವನು.
35ಆದರೆ ಅವನು ಶುದ್ಧನೆಂದು ನಿರ್ಣಯಿಸಲ್ಪಟ್ಟ ಮೇಲೆ ಆ ಗಾಯ ಚರ್ಮದಲ್ಲಿ ಹರಡಿಕೊಂಡರೆ,
36ಯಾಜಕನು ಅವನನ್ನು ಪರೀಕ್ಷಿಸಬೇಕು; ಆದರೆ ಹಳದಿಬಣ್ಣದ ಕೂದಲು ಇದೆಯೋ ಇಲ್ಲವೋ ಎಂದು ನೋಡಬೇಕಾದ ಅಗತ್ಯವಿಲ್ಲ; ಅವನು ಅಶುದ್ಧನೇ.
37ಆ ಗಾಯ ಮೊದಲು ಇದ್ದಂತೆಯೇ ಇದ್ದು ಅದರಲ್ಲಿ ಕಪ್ಪು ಕೂದಲು ಹುಟ್ಟಿದ್ದರೆ ಅದು ವಾಸಿಯಾಯಿತು. ಅವನು ಶುದ್ಧನು; ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು.
38“ಪುರುಷನಿಗಾಗಲಿ ಅಥವಾ ಸ್ತ್ರೀಗಾಗಲಿ ಚರ್ಮದಲ್ಲಿ ಹೊಳೆಯುವ ಬಿಳುಪಾದ ಕಲೆಗಳು ಅಲ್ಲಲ್ಲಿ ಹುಟ್ಟಿದ್ದರೆ ಯಾಜಕನು ಅವುಗಳನ್ನು ಪರೀಕ್ಷಿಸಬೇಕು.
39ಆ ಹೊಳೆಯುವ ಕಲೆಗಳು ಮೊಬ್ಬಾದ ಬಿಳೀ ಬಣ್ಣವಾಗಿದ್ದರೆ ಅದು ದೇಹದ ಚರ್ಮದಲ್ಲಿ ಹುಟ್ಟಿದ ಚಿಬ್ಬು; ಅವನು ಶುದ್ಧನು.
40“ಯಾವನ ತಲೆಯ ಕೂದಲು ಉದುರಿ ಹೋಗಿ ಅವನು ಬೋಳುತಲೆಯವನಾದರೂ ಅವನು ಶುದ್ಧನೇ.
41ಮುಂದಲೆಯ ಕೂದಲು ಉದುರಿದರೆ ಅವನು ಪಟ್ಟೆತಲೆಯವನಾದರೂ ಶುದ್ಧನೇ.
42ಆದರೆ ಬೋಳುತಲೆಯಲ್ಲಾಗಲಿ ಅಥವಾ ಪಟ್ಟೆತಲೆಯಲ್ಲಾಗಲಿ ಕೆಂಪು ಬಿಳುಪು ಮಿಶ್ರವಾದ ಮಚ್ಚೆ ಹುಟ್ಟಿದರೆ ಅದು ಕುಷ್ಠವೇ.
43ಯಾಜಕನು ಅವನನ್ನು ಪರೀಕ್ಷಿಸಬೇಕು. ಆಗ ಅದರಿಂದುಂಟಾದ ಬಾವು ಕೆಂಪು ಬಿಳುಪು ಮಿಶ್ರವಾಗಿ ಚರ್ಮದಲ್ಲಿನ ಕುಷ್ಠದಂತೆ ತೋರಿದರೆ,
44ಅವನು ಕುಷ್ಠರೋಗಿ ಮತ್ತು ಅಶುದ್ಧನು. ಅವನ ತಲೆಯ ಮೇಲೆ ಕುಷ್ಠದ ಗುರುತು ಕಾಣಿಸಿದ್ದರಿಂದ ಅವನು ಅಶುದ್ಧನೆಂದು ಯಾಜಕನು ನಿರ್ಣಯಿಸಬೇಕು.
45“ಯಾರಲ್ಲಿ ಕುಷ್ಠದ ಗುರುತು ಕಾಣಿಸಿತೋ ಅವನು ತನ್ನ ಬಟ್ಟೆಗಳನ್ನು ಹರಿದುಕೊಂಡು, ತಲೆಯನ್ನು ಕೆದರಿಕೊಂಡು, ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಂಡು ‘ನಾನು ಅಶುದ್ಧನು, ಅಶುದ್ಧನು’ ಎಂದು ಕೂಗಿಕೊಳ್ಳಬೇಕು.
46ಆ ರೋಗದ ಗುರುತುಗಳು ಅವನಲ್ಲಿ ಇರುವ ದಿನಗಳೆಲ್ಲಾ ಅವನು ಅಶುದ್ಧನಾಗಿರುವನು. ಅವನು ಅಶುದ್ಧನಾದುದರಿಂದ ಪ್ರತ್ಯೇಕವಾಗಿಯೇ ವಾಸವಾಗಿರಬೇಕು; ಅವನ ನಿವಾಸವು ಪಾಳೆಯದ ಹೊರಗೆ ಇರಬೇಕು.
47“ಕುಷ್ಠರೋಗದ ಗುರುತು ಬಟ್ಟೆಯಲ್ಲಿ ಕಂಡು ಬಂದಾಗ ಅದು ಉಣ್ಣೆಯ ಬಟ್ಟೆಯಾಗಲಿ ಅಥವಾ ನಾರಿನ ಬಟ್ಟೆಯಾಗಲಿ,
48ನಾರಿನ ಅಥವಾ ಉಣ್ಣೆಯ ಹಾಸಿನಲ್ಲಾಗಲಿ, ಹೆಣಿಗೆಯಲ್ಲಾಗಲಿ ಇಲ್ಲವೆ ತೊಗಲಿನಲ್ಲಾಗಲಿ, ತೊಗಲಿನಿಂದ ಮಾಡಲ್ಪಟ್ಟ ವಸ್ತುವಿನಲ್ಲಾಗಲಿ,
49ಆ ಬಟ್ಟೆ, ತೊಗಲು, ಹಾಸು, ಹೆಣಿಗೆ, ತೊಗಲಿನ ಸಾಮಾನುಗಳಲ್ಲಿ ಹಸುರಾಗಿ ಇಲ್ಲವೆ ಕೆಂಪಾಗಿ ಮಚ್ಚೆಕಾಣಿಸಿದರೆ ಅದು ಕುಷ್ಠದ ಗುರುತು; ಅದನ್ನು ಯಾಜಕನಿಗೆ ತೋರಿಸಬೇಕು.
50ಯಾಜಕನು ಅದನ್ನು ಪರೀಕ್ಷಿಸಿ ನೋಡಿ ಏಳು ದಿನಗಳ ವರೆಗೆ ಪ್ರತ್ಯೇಕವಾಗಿ ಇಡಿಸಬೇಕು.
51ಏಳನೆಯ ದಿನದಲ್ಲಿ ಅವನು ಅದನ್ನು ಪರೀಕ್ಷಿಸುವಾಗ ಆ ಬಟ್ಟೆಯ ಹಾಸಿನಲ್ಲಾಗಲಿ ಅಥವಾ ಹೆಣಿಗೆಯಲ್ಲಾಗಲಿ ಇಲ್ಲವೆ ಯಾವುದಾದರೂ ಒಂದು ಕೆಲಸಕ್ಕೆ ಉಪಯೋಗವಾಗಿರುವ ಆ ತೊಗಲಿನಲ್ಲಿ ಆ ಮಚ್ಚೆ ಹರಡಿಕೊಂಡಿದ್ದರೆ ಅದು ಪ್ರಾಣಕ್ಕೆ ಅಪಾಯಕರವಾದ ಕುಷ್ಠವೇ, ಆ ವಸ್ತುವು ಅಶುದ್ಧ.
52ಆ ವಸ್ತುವು ಬಟ್ಟೆಯಾದರೂ, ಹಾಸಾದರೂ, ಹೊಕ್ಕಾದರೂ, ಉಣ್ಣೆಯದಾದರೂ, ನಾರಿನದಾದರೂ ಅಥವಾ ತೊಗಲಿನದಾದರೂ ಅದರಲ್ಲಿ ಪ್ರಾಣಕ್ಕೆ ಅಪಾಯಕರವಾದ ಕುಷ್ಠವಿರುವುದರಿಂದ ಅದನ್ನು ಬೆಂಕಿಯಿಂದ ಸುಡಿಸಿಬಿಡಬೇಕು.
53ಆದರೆ ಯಾಜಕನು ಪರೀಕ್ಷಿಸುವಾಗ ಆ ವಸ್ತುವಿನಲ್ಲಿ ಅಂದರೆ ಆ ಬಟ್ಟೆ, ಹಾಸು, ಹೆಣಿಗೆ, ತೊಗಲಿನ ಸಾಮಾನು ಇವುಗಳಲ್ಲಿ ಆ ಮಚ್ಚೆ ಹರಡಿಕೊಳ್ಳದಿದ್ದರೆ,
54ಅದನ್ನು ನೀರಿನಿಂದ ತೊಳೆಯಬೇಕೆಂದು ಯಾಜಕನು ಅಪ್ಪಣೆಕೊಟ್ಟು ಇನ್ನು ಏಳು ದಿನಗಳ ತನಕ ಅದನ್ನು ಪ್ರತ್ಯೇಕವಾಗಿ ಇಡಿಸಬೇಕು.
55ಆ ಮಚ್ಚೆ ಇದ್ದ ವಸ್ತುಗಳನ್ನು ತೊಳೆಸಿದ ಮೇಲೆ ಯಾಜಕನು ಪರೀಕ್ಷಿಸುವಾಗ ಆ ಮಚ್ಚೆಯು ಹರಡಿಕೊಳ್ಳದೆ ಇದ್ದಾಗ್ಯೂ ಅದರ ಬಣ್ಣ ಮೊದಲಿದ್ದಂತೆಯೇ ಇದ್ದರೆ ಆ ವಸ್ತು ಅಶುದ್ಧ. ಕುಷ್ಠರೋಗದ ಗುರುತು ಅದರ ಮೇಲ್ಭಾಗದಿಂದಾಗಲಿ ಅಥವಾ ಕೆಳಭಾಗದಿಂದಾಗಲಿ ಆ ವಸ್ತುವಿನೊಳಗೆ ವ್ಯಾಪಿಸಿದ್ದರಿಂದ ಅದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
56ಆದರೆ ತೊಳೆದ ಬಟ್ಟೆಯನ್ನು ಯಾಜಕನು ಪರೀಕ್ಷಿಸುವಾಗ ಅದರಲ್ಲಿದ್ದ ಮಚ್ಚೆ ಮೊಬ್ಬಾಗಿಹೋಗಿದ್ದರೆ ಅವನು ಆ ಮಚ್ಚೆ ಇರುವ ಭಾಗವನ್ನು ಆ ಬಟ್ಟೆಯಿಂದಾಗಲಿ, ತೊಗಲಿನಿಂದಾಗಲಿ, ಹಾಸಿನಿಂದಾಗಲಿ, ಹೆಣಿಗೆಯಿಂದಾಗಲಿ ಕತ್ತರಿಸಬೇಕು.
57ಆ ಮೇಲೆಯೂ ಕುಷ್ಠದ ಮಚ್ಚೆ ಆ ಬಟ್ಟೆಯಲ್ಲಾಗಲಿ, ಹಾಸಿನಲ್ಲಾಗಲಿ, ಹೆಣಿಗೆಯಲ್ಲಾಗಲಿ ಅಥವಾ ತೊಗಲಿನ ಸಾಮಾನಿನಲ್ಲಾಗಲಿ ಕಂಡು ಬಂದರೆ ಕುಷ್ಠರೋಗವು ಇನ್ನು ಅದರಲ್ಲಿ ಉಂಟೆಂದು ತಿಳಿದುಕೊಳ್ಳಬೇಕು. ಆ ಮಚ್ಚೆ ಇರುವ ವಸ್ತುವನ್ನೇ ಬೆಂಕಿಯಿಂದ ಸುಟ್ಟುಬಿಡಬೇಕು.
58ಆ ಬಟ್ಟೆಯನ್ನಾಗಲಿ, ಹಾಸನ್ನಾಗಲಿ, ಹೆಣಿಗೆಯನ್ನಾಗಲಿ ಅಥವಾ ತೊಗಲಿನ ಸಾಮಾನನ್ನಾಗಲಿ ತೊಳೆದನಂತರ ಆ ಮಚ್ಚೆ ಕಾಣದೆಹೋದರೆ ಅದನ್ನು ಎರಡನೆಯ ಸಾರಿ ತೊಳೆಯಬೇಕು; ಆಗ ಅದು ಶುದ್ಧವಾಗುವುದು.

Read ಯಾಜ 13ಯಾಜ 13
Compare ಯಾಜ 13:32-58ಯಾಜ 13:32-58