1ನೀನು ನನ್ನ ತಾಯಿಯ ಹಾಲನ್ನು ಕುಡಿದ ನನ್ನ ಅಣ್ಣನ ಹಾಗಿದ್ದರೆ ಎಷ್ಟೋ ಚೆನ್ನಾಗಿತ್ತು! ನಾನು ನಿನ್ನನ್ನು ಹೊರಗೆ ಕಂಡೊಡನೆ ಮುದ್ದಿಟ್ಟರೂ ಯಾರೂ ಹೀನೈಸುತ್ತಿರಲಿಲ್ಲ.
2ನಿನ್ನನ್ನು ನನ್ನ ತಾಯಿಯ ಮನೆಗೆ ಕರೆದುಕೊಂಡು ಹೋಗುತ್ತಿದ್ದೆನು, ಅಲ್ಲಿ ಆಕೆಯು ನಿನಗೆ ಉಪದೇಶ ಮಾಡಬಹುದಾಗಿತ್ತು; ದ್ರಾಕ್ಷಿಯ ಮಿಶ್ರಪಾನವನ್ನು ಕೊಡುತ್ತಿದ್ದೆ, ನನ್ನ ದಾಳಿಂಬೆಯ ಸವಿರಸವನ್ನು ನಿನಗೆ ಕುಡಿಸುತ್ತಿದ್ದೆನು.
3ಆಗ ನಿನ್ನ ಎಡಗೈ ನನಗೆ ತಲೆದಿಂಬಾಗಿ ಬಲಗೈ ನನ್ನನ್ನು ತಬ್ಬುತ್ತಿತ್ತು.
4ಯೆರೂಸಲೇಮಿನ ಮಹಿಳೆಯರೇ, ಆತನು ತಾನಾಗಿ ಎಚ್ಚರಗೊಳ್ಳುವವರೆಗೆ ಯಾರೂ ನನ್ನ ಪ್ರಿಯನನ್ನು ಎಚ್ಚರಿಸದಿರಿ, ಆತನ ವಿಶ್ರಾಂತಿಗೆ ಯಾರೂ ಭಂಗ ಮಾಡದಿರಿ ಎಂದು ವನದ ಜಿಂಕೆ ಹರಿಣಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.
5ನಲ್ಲನನ್ನು ಒರಗಿಕೊಂಡು ಅಡವಿಯಿಂದ ಬರುವ ಇವಳು ಯಾರು? ಎಬ್ಬಿಸಿದೆನಲ್ಲಾ ನಿನ್ನನ್ನು ಆ ಸೇಬಿನ ಮರದಡಿಯಲ್ಲಿ ಇಗೋ, ಅಲ್ಲಿ ನಿನ್ನ ತಾಯಿ ನಿನ್ನನ್ನು ಗರ್ಭಧರಿಸಿದ್ದು, ಅಲ್ಲೇ ನಿನ್ನನ್ನು ಪ್ರಸವವೇದನೆಯಿಂದ ಹೆತ್ತಳು.