11ಆತನು ನಿಮಗೂ ಮತ್ತು ನಿಮ್ಮ ಮನೆಯವರಿಗೂ ಉಂಟುಮಾಡಿದ ಎಲ್ಲಾ ಸುಖಸಂತೋಷಗಳಿಗಾಗಿ ನೀವೂ, ಲೇವಿಯರೂ ಮತ್ತು ನಿಮ್ಮ ಮಧ್ಯದಲ್ಲಿರುವ ಪರದೇಶಿಗಳೂ ಸಂಭ್ರಮದಿಂದಿರಬೇಕು.
12ದಶಮಾಂಶವನ್ನು ಕೊಡಬೇಕಾದ ಮೂರನೆಯ ವರ್ಷದಲ್ಲಿ ನಿಮಗುಂಟಾದ ಆದಾಯದ ದಶಮ ಭಾಗವನ್ನು ನೀವು ಪ್ರತ್ಯೇಕಿಸಿದಾಗ, ನಿಮ್ಮ ನಿಮ್ಮ ಊರುಗಳಲ್ಲಿರುವ ಲೇವಿಯರೂ, ಪರದೇಶಿಗಳೂ, ಅನಾಥರು ಮತ್ತು ವಿಧವೆಯರೂ ಊಟಮಾಡಿ ಸಂತೋಷವಾಗಿರುವಂತೆ ಅದನ್ನು ಅವರಿಗೆ ಕೊಡಬೇಕಲ್ಲಾ.
13ಆಗ ನೀವು ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ, “ನಾವು ಪ್ರತ್ಯೇಕಿಸಿದ ವಸ್ತುಗಳನ್ನು ಮನೆಯಿಂದ ತೆಗೆದುಕೊಂಡು ಬಂದಿದ್ದೇವೆ. ನೀನು ಆಜ್ಞಾಪಿಸಿದ ಮೇರೆಗೆ ಅವುಗಳನ್ನು ಲೇವಿಯರು, ಪರದೇಶಿಗಳು, ಅನಾಥರು, ವಿಧವೆಯರು ಇಂಥವರಿಗೆ ಕೊಟ್ಟಿದ್ದೇವೆ ನಿನ್ನ ಆಜ್ಞೆಗಳಲ್ಲಿ ಒಂದನ್ನೂ ಮೀರಲಿಲ್ಲ ಮತ್ತು ಮರೆಯಲೂ ಇಲ್ಲ.