2ನನ್ನ ಉಪದೇಶವನ್ನು ಕಣ್ಣುಗುಡ್ಡೆಯಂತೆ ಪಾಲಿಸು, ನನ್ನ ಆಜ್ಞೆಗಳನ್ನು ಕೈಕೊಂಡು ಬಾಳು.
3ಅವುಗಳನ್ನು ನಿನ್ನ ಬೆರಳುಗಳಿಗೆ ಉಂಗುರವಾಗಿ ಧರಿಸಿಕೋ, ಹೃದಯದ ಹಲಗೆಯಲ್ಲಿ ಅವುಗಳನ್ನು ಬರೆದುಕೋ.
4ಜ್ಞಾನವನ್ನು, “ನೀನು ನನ್ನ ಅಕ್ಕಾ” ಎಂದು ಹೇಳು, ವಿವೇಕವನ್ನು, “ಪ್ರಿಯೇ” ಎಂದು ಕರೆ.
5ಅವು ಜಾರಳಿಂದ ಮತ್ತು ಸವಿಮಾತನಾಡುವ ಪರಸ್ತ್ರೀಯಿಂದ ನಿನ್ನನ್ನು ರಕ್ಷಿಸುವವು.
6ನಾನು ನನ್ನ ಮನೆಯ ಕಿಟಕಿಯ ಜಾಲರಿಯಿಂದ ಇಣಿಕಿ ನೋಡಲು
7ಅಲ್ಪಬುದ್ಧಿಯುಳ್ಳ ಅನೇಕ ಯುವಕರು ಕಾಣಿಸಿದರು. ಅವರಲ್ಲಿ ಜ್ಞಾನಹೀನನಾದ ಒಬ್ಬ ಯೌವನಸ್ಥನನ್ನು ಕಂಡೆನು.
8ಅವನು ಸಂಜೆಯ ಮೊಬ್ಬಿನಲ್ಲಿ, ಮಧ್ಯರಾತ್ರಿಯ ಅಂಧಕಾರದಲ್ಲಿ,
9ಅವಳ ಮನೆಯ ಹತ್ತಿರ ಬೀದಿಯಲ್ಲಿ ಹಾದುಹೋಗುತ್ತಾ, ಅವಳ ಮನೆಯ ಕಡೆಗೆ ತಿರುಗಿದ್ದನ್ನು ಕಂಡೆನು.
10ಇಗೋ ವೇಶ್ಯಾರೂಪವನ್ನು ಧರಿಸಿಕೊಂಡಿದ್ದ ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರುಗೊಂಡಳು.
11ಇವಳು ಕೂಗಾಟದವಳು, ಹಟಮಾರಿ, ಮನೆಯಲ್ಲಿ ನಿಲ್ಲತಕ್ಕವಳೇ ಅಲ್ಲ;
12ಒಂದು ವೇಳೆ ಬೀದಿಗಳಲ್ಲಿರುವಳು, ಮತ್ತೊಂದು ವೇಳೆ ಚೌಕಗಳಲ್ಲಿರುವಳು, ಅಂತು ಪ್ರತಿಯೊಂದು ಮೂಲೆಯಲ್ಲಿಯೂ ಹೊಂಚು ಹಾಕುವಳು.
13ಅವನನ್ನು ಹಿಡಿದು, ಮುದ್ದಾಡಿ ನಾಚಿಕೆಗೆಟ್ಟವಳಾಗಿ,
14“ಎಲೈ, ಈ ದಿನ ನನ್ನ ಹರಕೆಗಳನ್ನು ಸಲ್ಲಿಸಿದ್ದೇನೆ, ಸಮಾಧಾನ ಯಜ್ಞಶೇಷವು ನನ್ನಲ್ಲಿದೆ,
15ಆದಕಾರಣ ನಿನ್ನನ್ನು ಎದುರುಗೊಳ್ಳಲು ಬಂದೆನು, ನಿನ್ನನ್ನು ಆತುರದಿಂದ ಹುಡುಕಿ ಕಂಡುಕೊಂಡೆನು.
16ನನ್ನ ಮಂಚದಲ್ಲಿ ಸುಪ್ಪತ್ತಿಯನ್ನೂ, ಐಗುಪ್ತದೇಶದ ನೂಲಿನ ವಿಚಿತ್ರ ವಸ್ತ್ರಗಳನ್ನೂ ಹಾಸಿದ್ದೇನೆ.
17ಹಾಸಿಗೆಯ ಮೇಲೆ ರಕ್ತಬೋಳ, ಅಗುರು, ಲವಂಗ, ಚಕ್ಕೆ ಇವುಗಳ ಚೂರ್ಣಗಳಿಂದ ಸುವಾಸನೆಗೊಳಿಸಿದ್ದೇನೆ.
18ಬಾ, ಬೆಳಗಿನ ತನಕ ಬೇಕಾದಷ್ಟು ರಮಿಸುವ, ಕಾಮವಿಲಾಸಗಳಿಂದ ಸಂತೋಷಿಸುವ.