8ಧರ್ಮನಿಂದಕರು ಪಟ್ಟಣಕ್ಕೆ ಬೆಂಕಿಯನ್ನು ಹತ್ತಿಸುವರು, ಜ್ಞಾನಿಗಳೋ ರೋಷಾಗ್ನಿಯನ್ನು ಆರಿಸುವರು.
9ಮೂರ್ಖನ ಸಂಗಡ ಜ್ಞಾನಿಯು ವ್ಯಾಜ್ಯವಾಡುವಾಗ, ರೇಗಿದರೂ, ನಕ್ಕರೂ ಜಗಳವು ತೀರುವುದಿಲ್ಲ.
10ಕೊಲೆಪಾತಕರು ನಿರ್ದೋಷಿಯನ್ನು ದ್ವೇಷಿಸುವರು, ಯಥಾರ್ಥವಂತನ ಪ್ರಾಣಕ್ಕೂ ಹೊಂಚುಹಾಕುವರು.
11ಮೂಢನು ತನ್ನ ಕೋಪವನ್ನೆಲ್ಲಾ ತೋರಿಸುವನು, ಜ್ಞಾನಿಯು ತನ್ನ ಕೋಪವನ್ನು ತಡೆದು ಶಮನಪಡಿಸಿಕೊಳ್ಳುವನು.
12ಸುಳ್ಳಿಗೆ ಕಿವಿಗೊಡುವ ಅಧಿಪತಿಯ ಸೇವಕರೆಲ್ಲಾ ದುಷ್ಟರೇ.
13ತಗ್ಗುವವನು, ತಗ್ಗಿಸುವವನು ಸ್ಥಿತಿಯಲ್ಲಿ ಎದುರುಬದುರಾಗಿದ್ದಾರೆ, ಯೆಹೋವನೇ ಅವರಿಬ್ಬರ ಕಣ್ಣುಗಳಿಗೆ ಕಳೆಕೊಟ್ಟವನು.
14ಬಡವರನ್ನು ನ್ಯಾಯವಾಗಿ ಆಳ್ವಿಕೆ ಮಾಡುವ ರಾಜನ ಸಿಂಹಾಸನವು ಶಾಶ್ವತವು.
15ಬೆತ್ತ ಮತ್ತು ಬೆದರಿಕೆಗಳಿಂದ ಜ್ಞಾನವುಂಟಾಗುವುದು, ಶಿಕ್ಷಿಸದೆ ಬಿಟ್ಟ ಹುಡುಗನು ತಾಯಿಯ ಮಾನವನ್ನು ಕಳೆಯುವನು.
16ದುಷ್ಟರ ವೃದ್ಧಿ ಪಾಪವೃದ್ಧಿ, ಶಿಷ್ಟರೋ ಅವರ ಬೀಳುವಿಕೆಯನ್ನು ಕಣ್ಣಾರೆ ನೋಡುವರು.
17ಮಗನನ್ನು ಶಿಕ್ಷಿಸು, ಅವನು ನಿನ್ನನ್ನು ಸಂತೋಷಪಡಿಸುವನು, ಅವನೇ ನಿನ್ನ ಆತ್ಮಕ್ಕೆ ಮೃಷ್ಟಾನ್ನವಾಗುವನು.