15ಬೆತ್ತ ಮತ್ತು ಬೆದರಿಕೆಗಳಿಂದ ಜ್ಞಾನವುಂಟಾಗುವುದು, ಶಿಕ್ಷಿಸದೆ ಬಿಟ್ಟ ಹುಡುಗನು ತಾಯಿಯ ಮಾನವನ್ನು ಕಳೆಯುವನು.
16ದುಷ್ಟರ ವೃದ್ಧಿ ಪಾಪವೃದ್ಧಿ, ಶಿಷ್ಟರೋ ಅವರ ಬೀಳುವಿಕೆಯನ್ನು ಕಣ್ಣಾರೆ ನೋಡುವರು.
17ಮಗನನ್ನು ಶಿಕ್ಷಿಸು, ಅವನು ನಿನ್ನನ್ನು ಸಂತೋಷಪಡಿಸುವನು, ಅವನೇ ನಿನ್ನ ಆತ್ಮಕ್ಕೆ ಮೃಷ್ಟಾನ್ನವಾಗುವನು.
18ದೇವದರ್ಶನ ಇಲ್ಲದಿರುವಲ್ಲಿ ಜನರು ನಾಶವಾಗುವರು, ಧರ್ಮೋಪದೇಶವನ್ನು ಕೈಕೊಳ್ಳುವವನೋ ಧನ್ಯನಾಗುವನು.
19ಆಳು ಮಾತಿನಿಂದ ಮಾತ್ರ ಶಿಕ್ಷಿತನಾಗಲಾರನು, ಅವನು ತಿಳಿದುಕೊಂಡರೂ ಗಮನಿಸನು.
20ದುಡುಕಿ ಮಾತನಾಡುವವನನ್ನು ನೋಡು, ಅಂಥವನಿಗಿಂತಲೂ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯನ್ನು ಇಡಬಹುದು.
21ಆಳನ್ನು ಬಾಲ್ಯದಿಂದ ಕೋಮಲವಾಗಿ ಸಾಕಿದರೆ, ತರುವಾಯ ಅವನು ಎದುರುಬೀಳುವನು.
22ಕೋಪಿಷ್ಠನು ಜಗಳವನ್ನೆಬ್ಬಿಸುವನು, ಕ್ರೋಧಶೀಲನು ದೋಷಭರಿತನು.
23ಗರ್ವವು ಮನುಷ್ಯನನ್ನು ದೀನಸ್ಥಿತಿಗೆ ತರುವುದು, ದೀನಮನಸ್ಸುಳ್ಳವನು ಮಾನವನ್ನು ಪಡೆಯುವನು.