1ಬಹಳವಾಗಿ ಗದರಿಸಿದರೂ ತಗ್ಗದವನು, ಏಳದ ಹಾಗೆ ಫಕ್ಕನೆ ಮುರಿದು ಬೀಳುವನು.
2ಶಿಷ್ಟರ ವೃದ್ಧಿ ಜನರಿಗೆ ಉಲ್ಲಾಸ, ದುಷ್ಟನ ಆಳ್ವಿಕೆ ಜನರಿಗೆ ನರಳಾಟ.
3ಜ್ಞಾನವನ್ನು ಪ್ರೀತಿಸುವವನು ತಂದೆಯನ್ನು ಹರ್ಷಗೊಳಿಸುವನು, ವೇಶ್ಯೆಯ ಸಂಗಡಿಗನು ಆಸ್ತಿಯನ್ನು ಹಾಳುಮಾಡಿಕೊಳ್ಳುವನು.
4ನ್ಯಾಯಪಾಲಕನಾದ ರಾಜನು ದೇಶವನ್ನು ವೃದ್ಧಿಗೆ ತರುವನು, ಅನ್ಯಾಯವಾಗಿ ತೆರಿಗೆಯನ್ನು ಕಸಕೊಳ್ಳುವವನು ದೇಶವನ್ನು ನಾಶಮಾಡುವನು.
5ನೆರೆಯವನೊಂದಿಗೆ ವಂಚನೆಯ ಸವಿನುಡಿಗಳನ್ನು ಆಡುವವನು, ಅವನ ಹೆಜ್ಜೆಗೆ ಬಲೆಯನ್ನೊಡ್ಡುವನು.
6ಕೆಟ್ಟವನ ದುರ್ಮಾರ್ಗದಲ್ಲಿ ಉರುಲುಂಟು, ಒಳ್ಳೆಯವನು ಉಲ್ಲಾಸಗೊಂಡು ಹರ್ಷಧ್ವನಿಗೈಯುವನು.
7ಶಿಷ್ಟನು ಬಡವರ ನ್ಯಾಯವನ್ನು ತಿಳಿದಿರುವನು, ದುಷ್ಟನಿಗೆ ಅದನ್ನು ಗ್ರಹಿಸುವಷ್ಟು ವಿವೇಕವಿಲ್ಲ.
8ಧರ್ಮನಿಂದಕರು ಪಟ್ಟಣಕ್ಕೆ ಬೆಂಕಿಯನ್ನು ಹತ್ತಿಸುವರು, ಜ್ಞಾನಿಗಳೋ ರೋಷಾಗ್ನಿಯನ್ನು ಆರಿಸುವರು.