10ಯಥಾರ್ಥವಂತರನ್ನು ದುರ್ಮಾರ್ಗಕ್ಕೆ ಎಳೆಯುವವನು, ತಾನು ತೋಡಿದ ಗುಂಡಿಯಲ್ಲಿ ತಾನೇ ಬೀಳುವನು, ನಿರ್ದೋಷಿಗಳಿಗೋ ಸುಖವು ಸೊತ್ತಾಗುವುದು.
11ಐಶ್ವರ್ಯವಂತನು ತಾನು ಜ್ಞಾನಿಯೆಂದೆಣಿಸಿಕೊಳ್ಳುವನು, ವಿವೇಕಿಯಾದ ಬಡವನು ಅವನನ್ನು ಇಂಥವನೆಂದು ಗೊತ್ತುಮಾಡುವನು.
12ಶಿಷ್ಟರಿಗೆ ಉಲ್ಲಾಸವಾದರೆ ದೊಡ್ಡ ಸಂಭ್ರಮವಾಗುವುದು, ದುಷ್ಟರಿಗೆ ಏಳಿಗೆಯಾದರೆ ಜನರು ಅಡಗಿಕೊಳ್ಳುವರು.
13ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು, ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವುದು.
14ಕೆಟ್ಟದನ್ನು ಮಾಡುವುದಕ್ಕೆ ಯಾವಾಗಲೂ ಭಯಪಡುವವನು ಧನ್ಯನು, ಕಠಿಣಹೃದಯನು ಕೇಡಿಗೆ ಸಿಕ್ಕಿಬೀಳುವನು.
15ಬಡವರಾದ ಪ್ರಜೆಗಳನ್ನು ಆಳುವ ದುಷ್ಟರಾಜನು, ಗರ್ಜಿಸುವ ಸಿಂಹ ಮತ್ತು ಹುಡುಕಾಡುವ ಕರಡಿಯಂತೆ.
16ವಿವೇಕಶೂನ್ಯನಾದ ಒಡೆಯನು ಮಹಾ ಹಿಂಸಕನು, ದೋಚಿಕೊಳ್ಳದವನು ದೀರ್ಘಾಯುಷ್ಯನು.
17ನರಪ್ರಾಣ ತೆಗೆದ ದೋಷವನ್ನು ಕಟ್ಟಿಕೊಂಡವನು ಸಮಾಧಿಯ ಕಡೆಗೆ ಓಡುವನು, ಅವನನ್ನು ಯಾರೂ ತಡೆಯಬಾರದು.
18ಸನ್ಮಾರ್ಗಿಗೆ ಉದ್ಧಾರ, ವಕ್ರಮಾರ್ಗಿಗೆ ತಟ್ಟನೆ ಸೋಲು.
19ದುಡಿದು ಹೊಲಗೇಯುವವನಿಗೆ ಹೊಟ್ಟೆ ತುಂಬಾ ಅನ್ನ, ವ್ಯರ್ಥ ಕಾರ್ಯಾಸಕ್ತನಿಗೆ ಹೊಟ್ಟೆತುಂಬಾ ಬಡತನ.
20ನಂಬಿಗಸ್ತನು ಆಶೀರ್ವಾದಪೂರ್ಣನಾಗುವನು, ಧನವಂತನಾಗಲು ಆತುರಪಡುವವನು ದಂಡನೆಯನ್ನು ಹೊಂದದೆ ಇರನು.
21ಪಕ್ಷಪಾತವು ಅಧರ್ಮ, ತುತ್ತು ಅನ್ನಕ್ಕಾಗಿಯೂ ಜನರು ದ್ರೋಹಮಾಡುವುದುಂಟು.
22ಲೋಭಿಯು ಆಸ್ತಿಯನ್ನು ಗಳಿಸಲು ಆತುರಪಡುವನು, ತನಗೆ ಕೊರತೆಯಾಗುವುದೆಂದು ಅರಿಯನು.
23ಮುಖಸ್ತುತಿ ಮಾಡುವವನಿಗಿಂತಲೂ, ಗದರಿಸುವವನು ಬಳಿಕ ಹೆಚ್ಚು ದಯಾಪಾತ್ರನಾಗುವನು.
24ದೋಷವಲ್ಲವೆಂದು ತಾಯಿತಂದೆಗಳ ಧನವನ್ನು ಕದಿಯುವವನು, ಕೆಡುಕನಿಗೆ ಜೊತೆಗಾರನು.
25ದುರಾಶೆಯುಳ್ಳವನು ಜಗಳವನ್ನೆಬ್ಬಿಸುವನು, ಯೆಹೋವನಲ್ಲಿ ಭರವಸವಿಡುವವನು ಪುಷ್ಟನಾಗುವನು.
26ತನ್ನಲ್ಲೇ ಭರವಸವಿಡುವವನು ಮೂಢನು, ಜ್ಞಾನದಿಂದ ನಡೆಯುವವನು ಉದ್ಧಾರ ಹೊಂದುವನು.
27ಬಡವರಿಗೆ ದಾನಮಾಡುವವನು ಕೊರತೆಪಡನು, ಅವರನ್ನು ಕಂಡು ಕಾಣದಂತೆ ಇರುವವನು ಬಹುಶಾಪಕ್ಕೆ ಒಳಗಾಗುವನು.
28ದುಷ್ಟರು ಎದ್ದರೆ ಜನರು ಅಡಗಿಕೊಳ್ಳುವರು, ನಾಶನವಾದರೆ ಶಿಷ್ಟರು ವೃದ್ಧಿಯಾಗುವರು.