11ಧರ್ಮನಿಂದಕನಿಗೆ ದಂಡನೆಯಾದರೆ ನೋಡಿದ ಮೂಢನೂ ಜ್ಞಾನವನ್ನು ಪಡೆಯುವನು, ಜ್ಞಾನಿಗೆ ಶಿಕ್ಷೆಯಾದರೆ ತಾನೇ ತಿಳಿವಳಿಕೆಯನ್ನು ಹೊಂದುವನು.
12ನೀತಿಸ್ವರೂಪನು ಅಧರ್ಮಿಯ ಮನೆಯನ್ನು ಲಕ್ಷ್ಯಕ್ಕೆ ತಂದು, ಅಧರ್ಮಿಗಳನ್ನು ಕೆಡವಿ ಅವರನ್ನು ಕೇಡಿಗೆ ತಳ್ಳುವನು.
13ಬಡವನ ಕೂಗಿಗೆ ಕಿವಿಮುಚ್ಚಿಕೊಳ್ಳುವವನು, ತಾನೇ ಮೊರೆಯಿಡುವಾಗ ಯಾರೂ ಉತ್ತರಕೊಡರು.
14ಗುಪ್ತ ಬಹುಮಾನವು ಕೋಪವನ್ನಾರಿಸುವುದು, ಮಡಲಲ್ಲಿಟ್ಟ ಲಂಚವು ಕ್ರೋಧವನ್ನು ಅಣಗಿಸುವುದು.
15ನ್ಯಾಯಮಾರ್ಗವು ಶಿಷ್ಟರಿಗೆ ಸಂತೋಷ, ಕೆಡುಕರಿಗೆ ಕೇಡು.
16ಜ್ಞಾನಮಾರ್ಗದಿಂದ ತಪ್ಪಿದವನಿಗೆ, ಪ್ರೇತಸಮೂಹವೇ ವಿಶ್ರಾಂತಿಸ್ಥಾನ.
17ಭೋಗಾಸಕ್ತನು ಕೊರತೆಪಡುವನು, ದ್ರಾಕ್ಷಾರಸವನ್ನು ಮತ್ತು ಸುಗಂಧ ತೈಲವನ್ನು ಆಶಿಸುವವನು ನಿರ್ಭಾಗ್ಯನಾಗುವನು.
18ಶಿಷ್ಟನಿಗೆ ಪ್ರತಿಯಾಗಿ ದುಷ್ಟನೂ, ಸತ್ಯವಂತರಿಗೆ ಬದಲಾಗಿ ದ್ರೋಹಿಯೂ ದಂಡನೆಗೆ ಈಡಾಗುವರು.