5ಜ್ಞಾನಿಯು ಇವುಗಳನ್ನು ಕೇಳಿ ಹೆಚ್ಚಾದ ಪಾಡಿಂತ್ಯವನ್ನು ಹೊಂದುವನು, ವಿವೇಕಿಯು ಮತ್ತಷ್ಟು ಉಚಿತಾಲೋಚನೆಯನ್ನು ಹೊಂದುವನು.
6ಇವು ಗಾದೆ, ಸಾಮ್ಯ, ಜ್ಞಾನಿಗಳ ನುಡಿ ಮತ್ತು ಒಗಟುಗಳನ್ನು ತಿಳಿಯಲು ಸಾಧನವಾಗಿವೆ.
7ಯೆಹೋವನ ಭಯವೇ ತಿಳಿವಳಿಕೆಗೆ ಮೂಲವು, ಮೂರ್ಖರಾದರೋ ಜ್ಞಾನವನ್ನು ಮತ್ತು ಶಿಕ್ಷಣವನ್ನು ತಿರಸ್ಕರಿಸುವರು.
8ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ.
9ಅವು ನಿನ್ನ ತಲೆಗೆ ಸುಂದರವಾದ ಪುಷ್ಪಕಿರೀಟ, ಕೊರಳಿಗೆ ಹಾರದಂತಿರುವುದು.
10ಮಗನೇ, ಪಾಪಿಗಳು ದುಷ್ಪ್ರೇರಣೆಯನ್ನು ಮಾಡಿದರೆ ನೀನು ಒಪ್ಪಲೇ ಬೇಡ.
11ಅವರು, “ನಮ್ಮೊಂದಿಗೆ ಬಾ, ರಕ್ತಕ್ಕಾಗಿ ಹೊಂಚುಹಾಕೋಣ, ನಿರಪರಾಧಿಯನ್ನು ಕಾರಣವಿಲ್ಲದೆಯೇ ಹಿಡಿಯುವುದಕ್ಕೆ ಕಾದಿರೋಣ.
12ಪಾತಾಳವು ತನ್ನೊಳಗೆ ಇಳಿಯುವವರನ್ನು ಸಂಪೂರ್ಣವಾಗಿ ನುಂಗುವಂತೆ, ನಾವೂ ಇವರನ್ನು ಜೀವದೊಡನೆ ನುಂಗಿಬಿಡೋಣ.