5ಸುಳ್ಳುಸಾಕ್ಷಿಯು ಶಿಕ್ಷಿಸಲ್ಪಡದೆ ಇರುವುದಿಲ್ಲ, ಸುಳ್ಳಾಡುವವನು ತಪ್ಪಿಸಿಕೊಳ್ಳನು.
6ಉದಾರಿಯ ಕಟಾಕ್ಷವನ್ನು ಅನೇಕರು ಕೋರುವರು, ದಾನಶೂರನಿಗೆ ಪ್ರತಿಯೊಬ್ಬನೂ ಸ್ನೇಹಿತನಲ್ಲವೇ.
7ಬಡವನನ್ನು ಬಂಧುಗಳೆಲ್ಲಾ ಹಗೆಮಾಡುವರು, ಹೌದು, ಮಿತ್ರರೂ ಅವನಿಗೆ ದೂರವಾಗುವರು. ಅವರ ಬರೀ ಮಾತುಗಳನ್ನು ನಂಬಿ ಹಿಂಬಾಲಿಸಿದರೆ ಏನೂ ಸಿಕ್ಕದು.
8ಬುದ್ಧಿಯನ್ನು ಸಂಪಾದಿಸುವವನು ತನಗೆ ತಾನೇ ಮಿತ್ರನು, ವಿವೇಕವನ್ನು ಕಾಪಾಡುವವನು ಮೇಲನ್ನು ಪಡೆಯುವನು.
9ಸುಳ್ಳುಸಾಕ್ಷಿಯು ಶಿಕ್ಷಿಸಲ್ಪಡದೆ ಇರುವುದಿಲ್ಲ, ಸುಳ್ಳಾಡುವವನು ಹಾಳಾಗುವನು.
10ಮೂಢನಿಗೆ ಸುಖಭೋಗ ಜೀವನ ಯುಕ್ತವಲ್ಲ, ದಾಸನಿಗೆ ದೊರೆಗಳ ಮೇಲಣ ದೊರೆತನ ಯುಕ್ತವಲ್ಲ.
11ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ, ಪರರ ದೋಷವನ್ನು ಲಕ್ಷಿಸದಿರುವುದು ಅವನಿಗೆ ಭೂಷಣ.
12ರಾಜನ ರೋಷವು ಸಿಂಹದ ಗರ್ಜನೆ, ಅವನ ದಯೆಯು ಪೈರಿನ ಇಬ್ಬನಿ.
13ಜ್ಞಾನಹೀನನಾದ ಮಗನು ತಂದೆಗೆ ಹಾನಿ, ಜಗಳವಾಡುವ ಹೆಂಡತಿಯು ತಟತಟನೆ ತೊಟ್ಟಿಕ್ಕುವ ಹನಿ.
14ಮನೆಮಾರು, ಆಸ್ತಿಪಾಸ್ತಿಯು ಪೂರ್ವಿಕರಿಂದ ದೊರಕುವವು, ವಿವೇಕಿನಿಯಾದ ಹೆಂಡತಿಯು ಯೆಹೋವನ ಅನುಗ್ರಹವೇ.
15ಮೈಗಳ್ಳತನವು ಗಾಢನಿದ್ರೆಯಲ್ಲಿ ಮುಳುಗಿಸುವುದು, ಸೋಮಾರಿಯು ಹಸಿವೆಗೊಳ್ಳುವನು.