17ಸತ್ಯವಂತನ ರಾಜಮಾರ್ಗ ಹಾನಿಗೆ ದೂರ, ತನ್ನ ನಡತೆಯನ್ನು ಗಮನಿಸುವವನು ತನ್ನ ಆತ್ಮವನ್ನು ಕಾಯುವನು.
18ಗರ್ವದಿಂದ ಭಂಗ, ಉಬ್ಬಿನಿಂದ ದೊಬ್ಬು.
19ಸೊಕ್ಕಿನವರ ಸಂಗಡ ಸೂರೆಯನ್ನು ಹಂಚಿಕೊಳ್ಳುವುದಕ್ಕಿಂತಲೂ, ದೀನರ ಸಂಗಡ ದೈನ್ಯದಿಂದಿರುವುದು ವಾಸಿ.
20ದೇವರ ವಾಕ್ಯವನ್ನು ಸ್ಮರಿಸುವವನು ಸುಕ್ಷೇಮವನ್ನು ಪಡೆಯುವನು, ಯೆಹೋವನಲ್ಲಿ ಭರವಸವಿಡುವವನು ಭಾಗ್ಯವಂತನು.
21ಜ್ಞಾನಹೃದಯರಿಗೆ ಜಾಣರೆಂಬ ಬಿರುದು ಬರುವುದು, ಸವಿತುಟಿಯಿಂದ ಉಪದೇಶ ಶಕ್ತಿಯು ಹೆಚ್ಚುವುದು.
22ವಿವೇಕಿಗೆ ವಿವೇಕವೇ ಜೀವದ ಬುಗ್ಗೆ, ಮೂರ್ಖನಿಗೆ ಮೂರ್ಖತನವೇ ದಂಡನೆ.
23ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ, ಅವನ ತುಟಿಗಳಿಗೆ ಉಪದೇಶ ಶಕ್ತಿಯನ್ನೂ ಹೆಚ್ಚಿಸುವುದು.
24ಸವಿನುಡಿಯು ಜೇನುಕೊಡ, ಅದು ಆತ್ಮಕ್ಕೆ ಸಿಹಿ, ಎಲುಬಿಗೆ ಕ್ಷೇಮ.
25ಮನುಷ್ಯನ ದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು, ಕಟ್ಟಕಡೆಗೆ ಅದು ಮರಣಮಾರ್ಗವೇ.
26ದುಡಿಯುವವನಿಗೆ ಅವನ ಹೊಟ್ಟೆಯೇ ದುಡಿಯುವಂತೆ ಮಾಡುವುದು, ದುಡಿಯಲಿಕ್ಕೆ ಅವನ ಬಾಯೇ ಅವನನ್ನು ಒತ್ತಾಯ ಮಾಡುವುದು.