9ಮೂರ್ಖರನ್ನು ಅವರ ದೋಷವೇ ಹಾಸ್ಯಮಾಡುವುದು, ಯಥಾರ್ಥವಂತರಲ್ಲಿ (ದೇವರ) ದಯೆಯಿರುವುದು.
10ಪ್ರತಿಯೊಬ್ಬನು ತನ್ನ ಹೃದಯದ ವ್ಯಾಕುಲವನ್ನು ತಾನು ಗ್ರಹಿಸಿಕೊಳ್ಳುವನು, ಅವನ ಆನಂದದಲ್ಲಿಯೂ ಬೇರೆಯವರು ಪಾಲುಗಾರರಾಗುವುದಿಲ್ಲ.
11ದುಷ್ಟರ ಮನೆಗೆ ನಾಶನ, ಶಿಷ್ಟರ ಗುಡಾರಕ್ಕೆ ಏಳಿಗೆ.
12ಮನುಷ್ಯನ ದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು. ಅದು ಕಟ್ಟಕಡೆಗೆ ಮರಣಮಾರ್ಗವೇ.
13ನಗುವವನಿಗೂ ಮನೋವ್ಯಥೆಯುಂಟು, ಉಲ್ಲಾಸದ ಅಂತ್ಯವು ವ್ಯಾಕುಲವೇ.
14ಭ್ರಷ್ಟನು ಕರ್ಮಫಲವನ್ನು ತಿಂದು ತಿಂದು ದಣಿಯುವನು, ಶಿಷ್ಟನು ತನ್ನಲ್ಲಿ ತಾನೇ ತೃಪ್ತನಾಗುವನು.
15ಮೂಢನು ಯಾವ ಮಾತನ್ನಾದರೂ ನಂಬುವನು, ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.
16ಜ್ಞಾನಿಯು ಕೇಡಿಗೆ ಭಯಪಟ್ಟು ಓರೆಯಾಗುವನು, ಜ್ಞಾನಹೀನನು ಸೊಕ್ಕಿನಿಂದ ಭಯವನ್ನು ಲಕ್ಷಿಸನು.
17ಮುಂಗೋಪಿಯು ಬುದ್ಧಿಹೀನನಾಗಿ ವರ್ತಿಸುವನು, ಕುಯುಕ್ತಿಯುಳ್ಳವನು ದ್ವೇಷಕ್ಕೆ ಪಾತ್ರನು.
18ಮೂರ್ಖರಿಗೆ ಮೂರ್ಖತನವೇ ಸ್ವತ್ತು, ಜಾಣರಿಗೆ ಜ್ಞಾನವೇ ಕಿರೀಟ.
19ಕೆಟ್ಟವರು ಒಳ್ಳೆಯವರಿಗೆ ಬಾಗುವರು, ದುಷ್ಟರು ಶಿಷ್ಟರ ಬಾಗಿಲಲ್ಲಿ ಅಡ್ಡಬೀಳುವರು.