Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅರಣ್ಯ - ಅರಣ್ಯ 16

ಅರಣ್ಯ 16:28-46

Help us?
Click on verse(s) to share them!
28ಆಗ ಮೋಶೆ ಜನರಿಗೆ, “ಈ ಕಾರ್ಯಗಳೆಲ್ಲಾ ನನ್ನ ಆಲೋಚನೆಯಿಂದ ಆಗಲಿಲ್ಲವೆಂದೂ ಮತ್ತು ಯೆಹೋವನೇ ಇವುಗಳನ್ನು ನಡಿಸುವುದಕ್ಕೆ ನನ್ನನ್ನು ಕಳುಹಿಸಿದನೆಂದೂ ನೀವೇ ತಿಳಿದುಕೊಳ್ಳುವಿರಿ.
29ಹೇಗೆಂದರೆ, ಎಲ್ಲರೂ ಸಾಯುವ ರೀತಿಯಲ್ಲೇ ಇವರು ಸತ್ತರೆ, ಇಲ್ಲವೆ ಎಲ್ಲರಿಗೂ ಸಂಭವಿಸುವ ಗತಿ ಇವರಿಗುಂಟಾದರೆ ಯೆಹೋವನು ನನ್ನನ್ನು ಕಳುಹಿಸಲಿಲ್ಲವೆಂದು ತಿಳಿದುಕೊಳ್ಳಬೇಕು.
30ಆದರೆ ಯೆಹೋವನು ಇವರಿಗೋಸ್ಕರ ಭೂಮಿಯು ಬಾಯ್ದೆರೆದು ಇವರನ್ನೂ, ಇವರ ಸರ್ವಸ್ವವನ್ನೂ ನುಂಗಿ, ಇವರು ಸಜೀವಿಗಳಾಗಿ ಪಾತಾಳಕ್ಕೆ ಹೋಗಿಬಿಟ್ಟರೆ, ಇವರು ಯೆಹೋವನನ್ನು ತಿರಸ್ಕರಿಸಿದವರೆಂದು ನೀವು ತಿಳಿದುಕೊಳ್ಳಬೇಕು” ಎಂದು ಹೇಳಿದನು.
31ಮೋಶೆ ಈ ಮಾತುಗಳನ್ನು ಹೇಳಿ ಮುಗಿಸಿದ ಕೂಡಲೆ ಆ ಮನುಷ್ಯರ ಕೆಳಗಿದ್ದ ನೆಲವು ಸೀಳಿತು.
32ಭೂಮಿಯು ಬಾಯ್ದೆರೆದು ಅವರನ್ನೂ ಮತ್ತು ಕೋರಹನಿಗೆ ಸೇರಿದ ಮನುಷ್ಯರೆಲ್ಲರನ್ನೂ, ಅವರ ಸರ್ವಸ್ವವನ್ನೂ ನುಂಗಿಬಿಟ್ಟಿತು.
33ಅವರು ಸಜೀವಿಗಳಾಗಿ ತಮ್ಮ ಸರ್ವಸ್ವ ಸಹಿತವಾಗಿ ಪಾತಾಳಕ್ಕೆ ಹೋಗಿಬಿಟ್ಟರು, ಭೂಮಿಯು ಅವರನ್ನು ಮುಚ್ಚಿಕೊಂಡಿತು. ಹೀಗೆ ಅವರು ಸಮೂಹದವರೊಳಗಿಂದ ನಾಶವಾದರು.
34ಅವರ ಸುತ್ತಲಿದ್ದ ಇಸ್ರಾಯೇಲರೆಲ್ಲರೂ ಹೆದರಿಕೊಂಡು, “ಭೂಮಿಯು ನಮ್ಮನ್ನೂ ಸಹ ನುಂಗಿಬಿಟ್ಟೀತು!” ಎಂದು ಹೇಳಿ ಓಡಿಹೋದರು.
35ನಂತರ ಯೆಹೋವನ ಬಳಿಯಿಂದ ಬೆಂಕಿಹೊರಟು, ಧೂಪವನ್ನು ಅರ್ಪಿಸುತ್ತಿದ್ದ ಆ ಇನ್ನೂರೈವತ್ತು ಮಂದಿಯನ್ನು ದಹಿಸಬಿಟ್ಟಿತು.
36ಆಗ ಯೆಹೋವನು ಮೋಶೆಯ ಸಂಗಡ ಮಾತನಾಡಿ
37“ಯಾಜಕನಾದ ಆರೋನನ ಮಗನಾದ ಎಲ್ಲಾಜಾರನಿಗೆ, ಧೂಪಾರತಿಗಳು ಪರಿಶುದ್ಧವಾಗಿರುವುದರಿಂದ ದಹಿಸಲ್ಪಟ್ಟವರ ಮಧ್ಯದಿಂದ ಆ ಧೂಪಾರತಿಗಳನ್ನು ತೆಗೆಯಬೇಕೆಂದು ಆಜ್ಞಾಪಿಸು ಮತ್ತು ನೀನು ಅವುಗಳಲ್ಲಿರುವ ಕೆಂಡಗಳನ್ನು ದೂರ ಚೆಲ್ಲು.
38ತಮ್ಮ ಪಾಪಗಳಿಂದ ಪ್ರಾಣವನ್ನು ಕಳೆದುಕೊಂಡ ಆ ದೋಷಿಗಳ ಧೂಪಾರತಿಗಳು ಯೆಹೋವನ ಸನ್ನಿಧಿಗೆ ತಂದ ಕಾರಣ ಅವು ಪರಿಶುದ್ಧವಾದವು. ಆದುದರಿಂದ ಅವುಗಳನ್ನು ತಗಡುಗಳನ್ನಾಗಿ ಮಾಡಿ, ಯಜ್ಞವೇದಿಗೆ ಮುಚ್ಚಳವನ್ನು ಮಾಡಿಸಬೇಕು. ಇಸ್ರಾಯೇಲರಿಗೆ ಅವು ಗುರುತುಗಳಾಗಿರಬೇಕು” ಎಂದು ಹೇಳಿದನು.
39ಆಗ ಯಾಜಕನಾದ ಎಲ್ಲಾಜಾರನು ಯೆಹೋವನು ಮೋಶೆಯ ಮೂಲಕ ಹೇಳಿದ ಅಪ್ಪಣೆಯ ಪ್ರಕಾರ ದಹಿಸಿಹೋದವರು ಅರ್ಪಿಸಿದ ಆ ತಾಮ್ರದ ಧೂಪಾರತಿಗಳನ್ನು ತೆಗೆದುಕೊಂಡು ತಗಡುಗಳಾಗಿ ಮಾಡಿಸಿ, ಯಜ್ಞವೇದಿಯನ್ನು ಮುಚ್ಚಿದನು.
40ಆರೋನನ ಸಂತಾನಕ್ಕೆ ಸೇರದ ಬೇರೆ ಜನರು ಯೆಹೋವನ ಸನ್ನಿಧಿಗೆ ಬಂದು ಧೂಪವನ್ನು ಸಮರ್ಪಿಸಬಾರದು. ಸಮರ್ಪಿಸಿದರೆ ಕೋರಹನಿಗೂ ಮತ್ತು ಅವನ ಸಮೂಹದವರಿಗೂ ಆದ ಸ್ಥಿತಿಯೇ ಇವರಿಗೂ ಉಂಟಾಗುವುದೆಂಬುದನ್ನು ಇಸ್ರಾಯೇಲರಿಗೆ ಜ್ಞಾಪಿಸುವುದಕ್ಕೆ ಗುರುತಾಯಿತು.
41ಮರುದಿನ ಇಸ್ರಾಯೇಲರ ಸರ್ವಸಮೂಹದವರು ಮೋಶೆ ಮತ್ತು ಆರೋನರ ಮೇಲೆ ಗುಣುಗುಟ್ಟಿ, “ನೀವೇ ಯೆಹೋವನ ಜನರನ್ನು ಸಾಯಿಸಿದಿರಿ” ಎಂದು ಹೇಳುವವರಾದರು.
42ಸರ್ವಸಮೂಹದವರೆಲ್ಲರೂ ಹೀಗೆ ಮೋಶೆ ಮತ್ತು ಆರೋನರಿಗೆ ವಿರುದ್ಧವಾಗಿ ಸೇರಿ ಬಂದಾಗ ದೇವದರ್ಶನದ ಗುಡಾರದ ಮೇಲೆ, ಮೇಘವು ಆವರಿಸಿಕೊಂಡಿತು ಮತ್ತು ಯೆಹೋವನ ತೇಜಸ್ಸು ಅಲ್ಲಿ ಕಾಣಿಸಿತು.
43ಮೋಶೆ ಮತ್ತು ಆರೋನರು ದೇವದರ್ಶನದ ಗುಡಾರದ ಮುಂಭಾಗಕ್ಕೆ ಬಂದರು.
44ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
45“ನೀವಿಬ್ಬರೂ ಸಮೂಹದವರಲ್ಲಿ ಇರದೆ ಬೇರೆ ನಿಲ್ಲಬೇಕು. ನಾನು ಒಂದು ಕ್ಷಣಮಾತ್ರದಲ್ಲಿ ಅವರನ್ನು ದಹಿಸಿಬಿಡುತ್ತೇನೆ” ಎಂದು ಹೇಳಿದನು. ಆಗ ಮೋಶೆ ಮತ್ತು ಆರೋನರು ಬೋರಲುಬಿದ್ದರು.
46ಮೋಶೆಯು ಆರೋನನಿಗೆ, “ಯೆಹೋವನ ಕೋಪದಿಂದ ಈ ಜನರೊಳಗೆ ಘೋರವ್ಯಾಧಿಯು ಪ್ರಾರಂಭವಾಯಿತು. ನೀನು ಧೂಪಾರತಿಯನ್ನು ತೆಗೆದುಕೊಂಡು ಅದರಲ್ಲಿ ಯಜ್ಞವೇದಿಯಿಂದ ಕೆಂಡಗಳನ್ನು ಇಟ್ಟು ಧೂಪಹಾಕಿ, ಸಮೂಹದವರ ಬಳಿಗೆ ಬೇಗ ಹೋಗಿ ಅವರಿಗೋಸ್ಕರ ದೋಷಪರಿಹಾರವನ್ನು ಮಾಡಬೇಕು” ಎಂದು ಹೇಳಿದನು.

Read ಅರಣ್ಯ 16ಅರಣ್ಯ 16
Compare ಅರಣ್ಯ 16:28-46ಅರಣ್ಯ 16:28-46