Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 2 ಥೆಸ

2 ಥೆಸ 2

Help us?
Click on verse(s) to share them!
1ಸಹೋದರರೇ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಆಗಮನದ ವಿಷಯವಾಗಿಯೂ ಮತ್ತು ನಾವು ಆತನ ಎದುರಿನಲ್ಲಿ ಕೂಡಿಕೊಳ್ಳುವುದರ ವಿಷಯವಾಗಿಯೂ ನಿಮ್ಮನ್ನು ವಿನಂತಿಸುವುದೇನಂದರೆ,
2ಕರ್ತನ ಆಗಮನದ ದಿನವು ಈಗಾಗಲೇ ಬಂದಿದೆಯೆಂಬುದಾಗಿ ಆತ್ಮದಿಂದಾಗಲಿ ಮಾತಿನಿಂದಾಗಲಿ ಅಥವಾ ನಮ್ಮ ಪತ್ರದಿಂದಾಗಲಿ ನೀವು ಬೇಗನೆ ಮನದಲ್ಲಿ ಚಂಚಲರಾಗಿ ಕಳವಳಪಡಬೇಡಿರಿ.
3ಯಾರೂ ಯಾವ ವಿಧದಲ್ಲಿಯೂ ನಿಮ್ಮನ್ನು ಮೋಸಗೊಳಿಸದಂತೆ ನೋಡಿಕೊಳ್ಳಿರಿ, ಯಾಕೆಂದರೆ ಮೊದಲು ನಂಬಿಕೆಯ ಭ್ರಷ್ಟತೆಯುಂಟಾಗಿ ನಾಶನದ ಮಗನಾದ ಅಧರ್ಮ ಪುರುಷನು ಬಯಲಿಗೆ ಬಾರದ ಹೊರತು ಆ ದಿನವು ಬರುವುದಿಲ್ಲ.
4ಯಾವುದು ದೇವರೆನಿಸಿಕೊಳ್ಳುತ್ತದೋ ಯಾವುದು ಆರಾಧಿಸಲ್ಪಡುತ್ತದೋ ಅದನ್ನೆಲ್ಲಾ ನಾಶನಕ್ಕೆ ಅಧೀನನಾದ ಆ ಪುರುಷನು ಎದುರಿಸಿ ಅದಕ್ಕಿಂತ ಮೇಲಾಗಿ ತನ್ನನ್ನು ತಾನೇ ಹೆಚ್ಚಿಸಿಕೊಂಡು ತಾನು ದೇವರೆಂದು ಘೋಷಿಸಿಕೊಂಡು ದೇವರ ಗರ್ಭಗುಡಿಯಲ್ಲೇ ಕುಳಿತುಕೊಳ್ಳುತ್ತಾನೆ.
5ನಾನು ನಿಮ್ಮ ಸಂಗಡ ಇದ್ದಾಗ ಈ ಸಂಗತಿಗಳನ್ನು ಹೇಳಿದ್ದು ಜ್ಞಾಪಕವಿಲ್ಲವೋ?
6ಇದಲ್ಲದೆ ಅವನು ನೇಮಕವಾದ ಸಮಯದಲ್ಲೇ ಹೊರತು ಬಯಲಿಗೆ ಬರುವುದಕ್ಕೆ ಏನು ಅಡ್ಡಿ ಮಾಡುತ್ತದೋ ಅದು ನಿಮಗೆ ತಿಳಿದೇ ಇದೆ.
7ಅಧರ್ಮವು ಈಗಲೂ ಗುಪ್ತವಾಗಿ ತನ್ನ ಕಾರ್ಯವನ್ನು ಸಾಧಿಸುತ್ತದೆ, ಆದರೆ ತಡೆಗಟ್ಟುವವನು ದಾರಿಬಿಡುವ ತನಕ ಅದು ಗುಪ್ತವಾಗಿಯೇ ಇರುವುದು.
8ಆಗ ಅಧರ್ಮಸ್ವರೂಪನು ಕಾಣಿಸಿಕೊಳ್ಳುವನು, ಅವನನ್ನು ಯೇಸು ಕರ್ತನು ತನ್ನ ಬಾಯಿಯ ಉಸಿರಿನಿಂದ ಕೊಲ್ಲುವನು, ತನ್ನ ಬರುವಿಕೆಯ ಪ್ರತ್ಯಕ್ಷತೆಯಿಂದ ಸಂಹರಿಸುವನು.
9ಆ ಅಧರ್ಮಸ್ವರೂಪನು, ಸೈತಾನನ ಕಾರ್ಯಕ್ಕೆ ಅನುಸಾರವಾಗಿ, ಅದು ಸುಳ್ಳಾದ ಸಕಲವಿಧವಾದ ಮಹತ್ಕಾರ್ಯ, ಸೂಚಕಕಾರ್ಯ, ಅದ್ಭುತಕಾರ್ಯ ಇವುಗಳಿಂದಲೂ,
10ದುರ್ನೀತಿಯ ಎಲ್ಲಾ ವಂಚನೆಯಿಂದಲೂ ಕೂಡಿ ನಾಶದ ಮಾರ್ಗದಲ್ಲಿರುವವರಿಗೋಸ್ಕರವಾಗಿ ಬರುವನು. ಯಾಕೆಂದರೆ ಅವರು ಸತ್ಯವನ್ನು ಪ್ರೀತಿಸದೆ ನಿರಾಕರಿಸಿದ್ದರಿಂದ ರಕ್ಷಣೆಯನ್ನು ಹೊಂದದೆ ನಾಶವಾಗುತ್ತಾರೆ.
11ಇದೇ ಕಾರಣದಿಂದ ದೇವರು ಗಾಢಭ್ರಮೆಯನ್ನು ಅವರಲ್ಲಿಗೆ ಕಳುಹಿಸಿ ಅವರು ಆ ಸುಳ್ಳನ್ನು ನಂಬುವಂತೆ ಒಳಪಡಿಸುತ್ತಾನೆ.
12ಸತ್ಯವನ್ನು ನಂಬದೆ ಅನೀತಿಯಲ್ಲಿ ಆನಂದಪಡುವವರೆಲ್ಲರೂ ಈ ಪ್ರಕಾರ ನ್ಯಾಯತೀರ್ಪಿಗೆ ಗುರಿಯಾಗುವರು.
13ಕರ್ತನಿಗೆ ಪ್ರಿಯರಾಗಿರುವ ಸಹೋದರರೇ, ನೀವು ಪವಿತ್ರಾತ್ಮನಿಂದ ಶುದ್ಧೀಕರಿಸಲ್ಪಟ್ಟವರಾಗಿ, ಸತ್ಯದ ಮೇಲೆ ನಂಬಿಕೆಯನ್ನಿಟ್ಟು, ರಕ್ಷಣೆಯನ್ನು ಪಡೆಯುವುದಕ್ಕಾಗಿ ದೇವರು ನಿಮ್ಮನ್ನು ಆದಿಯಿಂದ ಆರಿಸಿಕೊಂಡಿದ್ದರಿಂದ ನಾವು ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಕೃತಜ್ಞತಾಸ್ತುತಿಮಾಡುವುದಕ್ಕೆ ಬದ್ಧರಾಗಿದ್ದೇವೆ.
14ನೀವು ಹೀಗೆ ರಕ್ಷಿಸಲ್ಪಟ್ಟು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮಹಿಮೆಯನ್ನು ಸಂಪಾದಿಸಿಕೊಳ್ಳಬೇಕೆಂದು ದೇವರು ನಮ್ಮ ಸುವಾರ್ತೆಯ ಮೂಲಕವಾಗಿ ನಿಮ್ಮನ್ನು ಕರೆದನು.
15ಹೀಗಿರುವುದರಿಂದ ಸಹೋದರರೇ, ದೃಢವಾಗಿ ನಿಲ್ಲಿರಿ. ನಾವು ಮಾತಿನಿಂದಾಗಲಿ, ಪತ್ರದ ಮೂಲಕವಾಗಲಿ ನಿಮಗೆ ಬೋಧಿಸಿದ ಸಂಪ್ರದಾಯಗಳನ್ನು ಭದ್ರವಾಗಿ ಹಿಡಿದುಕೊಂಡಿರಿ.
16ಮತ್ತು ನಮ್ಮನ್ನು ಪ್ರೀತಿಸಿ ನಮಗೆ ನಿತ್ಯವಾದ ಆದರಣೆಯನ್ನೂ ಉತ್ತಮವಾದ ನಿರೀಕ್ಷೆಯನ್ನೂ ಕೃಪೆಯಿಂದ ಅನುಗ್ರಹಿಸಿದ ನಮ್ಮ ತಂದೆಯಾದ ದೇವರೂ ನಮ್ಮ ಕರ್ತನಾದ ಯೇಸು ಕ್ರಿಸ್ತನೂ ತಾನೇ ನಿಮ್ಮ ಹೃದಯಗಳನ್ನು ಸಂತೈಸಿ,
17ಸಕಲ ಸತ್ಕಾರ್ಯದಲ್ಲಿಯೂ, ಸದ್ವಾಕ್ಯದಲ್ಲಿಯೂ ದೃಢಪಡಿಸಲಿ.