Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 1 ಅರಸು - 1 ಅರಸು 8

1 ಅರಸು 8:22-52

Help us?
Click on verse(s) to share them!
22ತರುವಾಯ ಸೊಲೊಮೋನನು ಎಲ್ಲಾ ಇಸ್ರಾಯೇಲರ ಎದುರಿನಲ್ಲಿ ಯೆಹೋವನ ಯಜ್ಞವೇದಿಯ ಮುಂದೆ ನಿಂತು ಆಕಾಶದ ಕಡೆಗೆ ಕೈಗಳನ್ನೆತ್ತಿ ಹೀಗೆ ಪ್ರಾರ್ಥಿಸಿದನು,
23“ಇಸ್ರಾಯೇಲ್ ದೇವರಾದ ಯೆಹೋವನೇ, ಭೂಲೋಕದಲ್ಲಿಯೂ, ಪರಲೋಕದಲ್ಲಿಯೂ ನಿನಗೆ ಸಮಾನನಾದ ದೇವರಿಲ್ಲ. ಪೂರ್ಣಮನಸ್ಸಿನಿಂದ ನಿನಗೆ ನಡೆದುಕೊಳ್ಳುವಂಥ ಸೇವಕರ ವಿಷಯದಲ್ಲಿ ನೀನು ನಿನ್ನ ಒಡಂಬಡಿಕೆಯನ್ನೂ, ಕೃಪೆಯನ್ನೂ ನೆರವೇರಿಸುವವನು.
24ನಿನ್ನ ಸೇವಕನೂ ನನ್ನ ತಂದೆಯೂ ಆದ ದಾವೀದನಿಗೆ ಕೊಟ್ಟ ಮಾತನ್ನು ನೆರವೇರಿಸಿರುವೆ. ನಿನ್ನ ಬಾಯಿ ನುಡಿದಿದ್ದನ್ನು ನಿನ್ನ ಹಸ್ತವು ಈಗ ನೆರವೇರಿಸಿದೆ.
25ಇಸ್ರಾಯೇಲ್ ದೇವರಾದ ಯೆಹೋವನೇ, ನೀನು ನನ್ನ ತಂದೆಯಾದ ದಾವೀದನಿಗೆ, ‘ನಿನ್ನ ಸಂತಾನದವರು ನಿನ್ನಂತೆ ಜಾಗರೂಕತೆಯಿಂದ ನನ್ನ ಮಾರ್ಗದಲ್ಲೇ ನಡೆದುಕೊಳ್ಳುವುದಾದರೆ, ಅವರು ತಪ್ಪದೆ ಇಸ್ರಾಯೇಲ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವಂತೆ ಮಾಡುವೆನು’ ಎಂಬುದಾಗಿ ವಾಗ್ದಾನ ಮಾಡಿದಿಯಲ್ಲಾ ಅದನ್ನು ನೆರವೇರಿಸು.
26ಇಸ್ರಾಯೇಲ್ ದೇವರೇ, ನೀನು ನಿನ್ನ ಸೇವಕನೂ, ನನ್ನ ತಂದೆಯೂ ಆದ ದಾವೀದನಿಗೆ ನುಡಿದಿದ್ದೆಲ್ಲವೂ ಸಾರ್ಥಕವಾಗಲಿ.
27“ದೇವರು ನಿಜವಾಗಿ ಭೂಲೋಕದಲ್ಲಿ ವಾಸಿಸುವನೋ? ಆಕಾಶವೂ ಉನ್ನತೋನ್ನತವಾದ ಆಕಾಶವೂ ನಿನ್ನ ವಾಸಕ್ಕೆ ಸಾಲದು. ಹೀಗಿರುವಲ್ಲಿ ನಾನು ಕಟ್ಟಿಸಿದ ಈ ಮಂದಿರವು ಹೇಗೆ ಸಾಕಾದೀತು?
28ಆದರೂ ನನ್ನ ದೇವರೇ, ಯೆಹೋವನೇ, ನಿನ್ನ ಸೇವಕನ ಪ್ರಾರ್ಥನೆಗೂ, ವಿಜ್ಞಾಪನೆಗೂ ಕಿವಿಗೊಡು. ಈ ಹೊತ್ತು ನಿನ್ನನ್ನು ಪ್ರಾರ್ಥಿಸುತ್ತಿರುವ ನಿನ್ನ ಸೇವಕನ ಮೊರೆಯನ್ನು ಲಾಲಿಸು.
29ಈ ಸ್ಥಳವನ್ನು ಕುರಿತು, ‘ನನ್ನ ನಾಮಪ್ರಭಾವವು ಇಲ್ಲಿ ವಾಸಿಸುವುದು’ ಎಂದು ಹೇಳಿದವನೇ, ನಿನ್ನ ಕಟಾಕ್ಷವು ಹಗಲಿರುಳು ಈ ಮಂದಿರದ ಮೇಲಿರಲಿ. ಇಲ್ಲಿ ನಿನ್ನ ಸೇವಕರು ನಿನ್ನನ್ನು ಪ್ರಾರ್ಥಿಸುವಾಗೆಲ್ಲಾ ಅವರಿಗೆ ಸದುತ್ತರವನ್ನು ದಯಪಾಲಿಸು.
30ನಿನ್ನ ಸೇವಕನಾದ ನಾನಾಗಲಿ ನಿನ್ನ ಪ್ರಜೆಗಳಾದ ಇಸ್ರಾಯೇಲರಾಗಲಿ ಈ ಸ್ಥಳದ ಕಡೆಗೆ ತಿರುಗಿಕೊಂಡು ನಿನ್ನನ್ನು ಪ್ರಾರ್ಥಿಸುವುದಾದರೆ, ನಿನ್ನ ನಿವಾಸವಾಗಿರುವ ಪರಲೋಕದಿಂದ ನಮ್ಮ ಬಿನ್ನಹವನ್ನು ಕೇಳಿ, ಕ್ಷಮೆಯನ್ನು ಅನುಗ್ರಹಿಸು.
31“ನೆರೆಯವನಿಗೆ ವಿರೋಧವಾಗಿ ತಪ್ಪುಮಾಡಿದವನೆಂಬ ಸಂಶಯಕ್ಕೆ ಗುರಿಯಾದ ಮನುಷ್ಯನು ತಾನು ನಿರ್ದೋಷಿಯೆಂದು ಪ್ರಮಾಣಮಾಡಬೇಕಾದಾಗ ಅಂಥವನು ಈ ಆಲಯಕ್ಕೆ ಬಂದು ನಿನ್ನ ಈ ಯಜ್ಞವೇದಿಯ ಮುಂದೆ ನಿಂತು ಪ್ರಮಾಣಮಾಡುವುದಾದರೆ,
32ಪರಲೋಕದಲ್ಲಿರುವ ನೀನು ಅದನ್ನು ಕೇಳಿ ನಿನ್ನ ಸೇವಕರ ವ್ಯಾಜ್ಯವನ್ನು ತೀರಿಸು. ದುಷ್ಟನಿಗೆ ಅವನ ದುಷ್ಟತ್ವವನ್ನು ಅವನ ತಲೆಯ ಮೇಲೆಯೇ ಬರಮಾಡಿ, ಅವನು ಅಪರಾಧಿಯೆಂದು ತೋರಿಸು. ನೀತಿವಂತನಿಗೆ ಅವನ ನೀತಿಯ ಫಲವನ್ನು ಅನುಗ್ರಹಿಸಿ ಅವನು ನೀತಿವಂತನೆಂದೂ ತೋರಿಸಿಕೊಡು.
33“ತಮ್ಮ ಪಾಪಗಳ ಫಲವಾಗಿ ಶತ್ರುಗಳಿಂದ ತಗ್ಗಿಸಲ್ಪಟ್ಟ ನಿನ್ನ ಪ್ರಜೆಗಳಾದ ಇಸ್ರಾಯೇಲರು ನಿನ್ನ ಕಡೆಗೆ ತಿರುಗಿಕೊಂಡು ನಿನ್ನ ನಾಮವನ್ನು ಸ್ತುತಿಸಿ ಈ ಆಲಯದಲ್ಲಿ ನಿನಗೆ ವಿಜ್ಞಾಪನೆಯನ್ನು ಮತ್ತು ಪ್ರಾರ್ಥನೆಯನ್ನೂ ಮಾಡುವುದಾದರೆ,
34ಪರಲೋಕದಲ್ಲಿರುವ ನೀನು ಅದನ್ನು ಆಲಿಸಿ, ಅವರ ಪಾಪಗಳನ್ನು ಕ್ಷಮಿಸಿ, ಅವರ ಪೂರ್ವಿಕರಿಗೆ ನೀನು ಕೊಟ್ಟ ದೇಶಕ್ಕೆ ಅವರನ್ನು ಮರಳಿ ಬರುವಂತೆಮಾಡು.
35“ಅವರ ಪಾಪಗಳ ನಿಮಿತ್ತವಾಗಿ ಆಕಾಶವು ಮಳೆಗರೆಯದಂತೆ ಮುಚ್ಚಿಕೊಂಡಾಗ ಅವರು ತಮ್ಮ ಪಾಪಗಳನ್ನು ಬಿಟ್ಟು ತಮ್ಮನ್ನು ತಗ್ಗಿಸಿದವನು ನೀನೇ ಎಂದು ನಿನ್ನ ನಾಮವನ್ನು ಸ್ತುತಿಸಿ ಈ ಆಲಯದ ಕಡೆಗೆ ತಿರುಗಿಕೊಂಡು ಪ್ರಾರ್ಥಿಸುವುದಾದರೆ,
36ಪರಲೋಕದಲ್ಲಿರುವ ನೀನು ಆಲಿಸಿ, ನಿನ್ನ ಸೇವಕರೂ ಪ್ರಜೆಗಳೂ ಆದ ಇಸ್ರಾಯೇಲರ ಪಾಪಗಳನ್ನು ಕ್ಷಮಿಸಿ ಅವರು ನಡೆಯಬೇಕಾದ ಮಾರ್ಗವನ್ನು ತೋರಿಸಿ, ನಿನ್ನ ಪ್ರಜೆಗೆ ಸ್ವತ್ತಾಗಿ ಕೊಟ್ಟ ದೇಶಕ್ಕೆ ಮಳೆಯನ್ನು ಅನುಗ್ರಹಿಸು.
37“ದೇಶಕ್ಕೆ ಕ್ಷಾಮ, ಘೋರವ್ಯಾಧಿ, ಬಿಸಿಗಾಳಿ, ಜೊಳ್ಳು, ಮಿಡತೆ, ಜಿಟ್ಟೇಹುಳ, ಪಟ್ಟಣಗಳಿಗೆ ಶತ್ರುಗಳ ಮುತ್ತಿಗೆ, ಅಂತು ಯಾವ ಉಪದ್ರವದಿಂದಾಗಲಿ, ವ್ಯಾಧಿಯಿಂದಾಗಲಿ ಬಾಧೆ ಉಂಟಾಗುವಾಗ,
38ಮನಸ್ಸಾಕ್ಷಿ ಪೀಡಿತರಾದ ಎಲ್ಲಾ ಇಸ್ರಾಯೇಲರಾಗಲಿ, ಅವರಲ್ಲಿ ಒಬ್ಬನಾಗಲಿ ಈ ಆಲಯದ ಕಡೆಗೆ ಕೈಯೆತ್ತಿ ಸ್ತುತಿಸಿ ನಿನಗೆ ಪ್ರಾರ್ಥನೆಯನ್ನೂ, ವಿಜ್ಞಾಪನೆಯನ್ನು ಮಾಡುವುದಾದರೆ,
39ಮನುಷ್ಯರ ಹೃದಯಗಳನ್ನು ಬಲ್ಲಂಥ ನೀನು ನಿನ್ನ ನಿವಾಸವಾಗಿರುವ ಪರಲೋಕದಿಂದ ಲಾಲಿಸಿ, ಅವರಿಗೆ ಪಾಪಪರಿಹಾರವನ್ನು ಅನುಗ್ರಹಿಸು. ನೀನೊಬ್ಬನೇ ಎಲ್ಲಾ ಮನುಷ್ಯರ ಹೃದಯಗಳನ್ನು ಬಲ್ಲವನಾಗಿರುವುದರಿಂದ ಪ್ರತಿಯೊಬ್ಬನಿಗೂ ಅವನವನು ಹಿಡಿಯುವ ಮಾರ್ಗಕ್ಕೆ ತಕ್ಕ ಹಾಗೆ ಫಲವನ್ನು ಕೊಡು.
40ಆಗ ನಮ್ಮ ಪೂರ್ವಿಕರಿಗೆ ನೀನು ಕೊಟ್ಟ ದೇಶದಲ್ಲಿ ಅವರು ವಾಸಿಸುವ ಕಾಲದಲ್ಲೆಲ್ಲಾ ನಿನ್ನಲ್ಲಿ ಭಯಭಕ್ತಿಯುಳ್ಳವರಾಗಿರುವರು.
41“ನಿನ್ನ ಪ್ರಜೆಗಳಾದ ಇಸ್ರಾಯೇಲನಲ್ಲದ ಒಬ್ಬ ಪರದೇಶದವನು ನಿನ್ನ ನಾಮಸ್ತುತಿಗೋಸ್ಕರ ದೂರದೇಶದಿಂದ ಬರುವಾಗ
42ಅಲ್ಲಿ ನಿನ್ನ ನಾಮಮಹತ್ತು, ಭುಜಬಲ, ಶಿಕ್ಷಾಹಸ್ತ ಇವುಗಳ ವರ್ತಮಾನವು ಪರರಾಜ್ಯಗಳವರಿಗೂ ಗೊತ್ತಾಗುವುದು. ಅವನು ಈ ಆಲಯದ ಮುಂದೆ ನಿಂತು ನಿನ್ನನ್ನು ಪ್ರಾರ್ಥಿಸುವುದಾದರೆ,
43ನಿನ್ನ ನಿವಾಸವಾಗಿರುವ ಪರಲೋಕದಿಂದ ಅವನ ಪ್ರಾರ್ಥನೆಯನ್ನು ಕೇಳಿ, ಅವನು ಬೇಡಿಕೊಂಡದ್ದನ್ನು ಅನುಗ್ರಹಿಸು. ಆಗ ಪರರಾಜ್ಯದವರೂ, ಲೋಕದ ಎಲ್ಲಾ ಜನರು ನಿನ್ನ ನಾಮಮಹತ್ತನ್ನು ತಿಳಿದು, ನಿನ್ನ ಜನರಾದ ಇಸ್ರಾಯೇಲರಂತೆ ನಿನ್ನಲ್ಲಿ ಭಯಭಕ್ತಿಯುಳ್ಳವರಾಗಿ, ನಾನು ನಿನ್ನ ಹೆಸರಿಗಾಗಿ ಈ ಆಲಯವನ್ನು ಕಟ್ಟಸಿದ್ದೇನೆಂದು ತಿಳಿದುಕೊಳ್ಳುವರು.
44ನೀನು ನಿನ್ನ ಜನರನ್ನು ಶತ್ರುಗಳೊಡನೆ ಯುದ್ಧಮಾಡುವುದಕ್ಕೋಸ್ಕರ ಎಲ್ಲಿಗಾದರು ಕಳುಹಿಸಿದಾಗ ಅವರು ಅಲ್ಲಿಂದ ನೀನು ಆರಿಸಿಕೊಂಡ ಪಟ್ಟಣದ ಕಡೆಗೂ, ನಾನು ನಿನ್ನ ಹೆಸರಿಗಾಗಿ ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು ಯೆಹೋವನಾದ ನಿನ್ನನ್ನು ಪ್ರಾರ್ಥಿಸುವುದಾದರೆ
45ಪರಲೋಕದಲ್ಲಿರುವ ನೀನು ವಿಜ್ಞಾಪನೆಯನ್ನು ಮತ್ತು ಪ್ರಾರ್ಥನೆಯನ್ನೂ ಕೇಳಿ, ಅವರ ನ್ಯಾಯವನ್ನು ಸ್ಥಾಪಿಸು.
46“ಅವರು ನಿನಗೆ ವಿರುದ್ಧವಾಗಿ ಪಾಪ ಮಾಡಬಹುದು. ಪಾಪಮಾಡದ ಮನುಷ್ಯನು ಒಬ್ಬನೂ ಇಲ್ಲ. ನೀನು ಅವರ ಮೇಲೆ ಕೋಪಗೊಂಡು ಅವರನ್ನು ಶತ್ರುಗಳ ಕೈಗೆ ಒಪ್ಪಿಸಿದಾಗ ಮತ್ತು ಆ ಶತ್ರುಗಳು ಅವರನ್ನು ಸೆರೆಹಿಡಿದು ದೂರದಲ್ಲಾಗಲಿ, ಸಮೀಪದಲ್ಲಾಗಲಿ ಇರುವ ತಮ್ಮ ದೇಶಕ್ಕೆ ಅವರನ್ನು ಒಯ್ದಾಗ,
47ಸೆರೆಯವರಾಗಿ ಬಿದ್ದುಕೊಂಡಿರುವ ದೇಶದಲ್ಲಿ ಅವರು ಪಶ್ಚಾತ್ತಾಪಪಟ್ಟು, ನಿನ್ನ ಅನುಗ್ರಹದಿಂದ ತಮ್ಮ ಪೂರ್ವಿಕರಿಗೆ ದೊರಕಿದ ದೇಶದ ಕಡೆಗೂ, ನೀನು ಆರಿಸಕೊಂಡ ಪಟ್ಟಣದ ಕಡೆಗೂ, ನಾನು ನಿನ್ನ ಹೆಸರಿಗೋಸ್ಕರ ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು,
48‘ನಾವು ನಿನ್ನ ಆಜ್ಞೆಗಳನ್ನು ಮೀರಿ ಪಾಪಮಾಡಿ ದ್ರೋಹಿಗಳಾದೆವು’ ಎಂದು ಒಪ್ಪಿ ಪೂರ್ಣಮನಸ್ಸಿನಿಂದ ನಿನ್ನನ್ನು ಪ್ರಾರ್ಥಿಸುವುದಾದರೆ,
49ನೀನು ನಿನ್ನ ನಿವಾಸವಾಗಿರುವ ಪರಲೋಕದಿಂದ ಅವರ ಪ್ರಾರ್ಥನೆಯನ್ನು ಲಾಲಿಸಿ ಅವರ ನ್ಯಾಯವನ್ನು ಸ್ಥಾಪಿಸು.
50ಕಬ್ಬಿಣ ಕರಗಿಸುವ ಕುಲುಮೆಯೋಪಾದಿಯಲ್ಲಿದ್ದ ಐಗುಪ್ತ ದೇಶದಿಂದ ನೀನು ಬಿಡಿಸಿದ ಈ ಜನರು ನಿನ್ನ ಸ್ವಕೀಯ ಜನರಾಗಿದ್ದಾರೆಂಬುದನ್ನು ನೆನಪುಮಾಡಿಕೊ.
51ಅವರು ನಿನಗೆ ವಿರುದ್ಧವಾಗಿ ಮಾಡಿದ ಎಲ್ಲಾ ಅಪರಾಧ ದ್ರೋಹಗಳನ್ನು ಕ್ಷಮಿಸಿ ಅವರನ್ನು ಸೆರೆಯೊಯ್ದವರ ಮನಸ್ಸಿನಲ್ಲಿ ಅವರ ಮೇಲೆ ದಯೆಹುಟ್ಟಿಸು.
52ನಿನ್ನ ಸೇವಕನ ಮೇಲೆಯೂ, ನಿನ್ನ ಪ್ರಜೆಗಳಾದ ಇಸ್ರಾಯೇಲರ ಮೇಲೆಯೂ ಕಟಾಕ್ಷವಿಟ್ಟು ಅವರು ಪ್ರಾರ್ಥಿಸುವಾಗೆಲ್ಲಾ ಅವರ ವಿಜ್ಞಾಪನೆಗಳನ್ನು ಲಾಲಿಸು.

Read 1 ಅರಸು 81 ಅರಸು 8
Compare 1 ಅರಸು 8:22-521 ಅರಸು 8:22-52