Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 1 ಅರಸು - 1 ಅರಸು 6

1 ಅರಸು 6:3-20

Help us?
Click on verse(s) to share them!
3ದೇವಾಲಯದ ಪರಿಶುದ್ಧ ಸ್ಥಳದ ಮುಂದುಗಡೆಯಲ್ಲಿ ಒಂದು ಮಂಟಪವಿತ್ತು. ಅದರ ಉದ್ದ ದೇವಾಲಯದ ಅಗಲಕ್ಕೆ ಸರಿಯಾಗಿ ಇಪ್ಪತ್ತು ಮೊಳ, ಅಗಲ ಹತ್ತು ಮೊಳ.
4ಇದಲ್ಲದೆ ಅವನು ಆಲಯಕ್ಕೆ ತೆರೆಯಲಾರದ ಜಾಲರಿಗಳುಳ್ಳ ಕಿಟಿಕಿಗಳನ್ನಿರಿಸಿದನು.
5ದೇವಾಲಯದ ಗೋಡೆಯ ಸುತ್ತಲೂ ಅಂದರೆ ಪರಿಶುದ್ಧ ಸ್ಥಳ ಮತ್ತು ಮಹಾಪರಿಶುದ್ಧ ಸ್ಥಳ ಇವುಗಳ ಗೋಡೆಯ ಸುತ್ತಲೂ ಇನ್ನೊಂದು ಗೋಡೆಯನ್ನು ಕಟ್ಟಿಸಿ, ಇವುಗಳ ನಡುವೆ ಅಂತಸ್ತುಗಳುಳ್ಳ ಕೊಠಡಿಗಳನ್ನು ಮಾಡಿಸಿದನು.
6ಕೆಳಗಿನ ಕೊಠಡಿಗಳ ಅಗಲವು ಐದು ಮೊಳ. ಮೊದಲನೆಯ ಅಂತಸ್ತುಗಳ ಕೊಠಡಿಗಳ ಅಗಲವು ಆರು ಮೊಳ. ಎರಡನೆಯ ಅಂತಸ್ತುಗಳ ಕೊಠಡಿಗಳ ಅಗಲವು ಏಳು ಮೊಳ. ಅಂತಸ್ತಿನ ತೊಲೆಗಳನ್ನಿಡುವಾಗ ದೇವಾಲಯದ ಗೋಡೆಗಳಲ್ಲಿ ತೂತಾಗಬಾರದು ಎಂದು ಗೋಡೆಯ ಹೊರಮೈಯನ್ನು ಸೋಪಾನಾಕಾರವಾಗಿ ಮಾಡಿಸಿದನು.
7ದೇವಾಲಯವನ್ನು ಕಟ್ಟುತ್ತಿರುವಾಗ ಕಲ್ಲುಗಳನ್ನು ಕಲ್ಲುಗಣಿಯಲ್ಲಿಯೇ ಸಿದ್ಧಮಾಡಿಕೊಂಡು ಬಂದು ಕಟ್ಟಿದ್ದರಿಂದ ಕಟ್ಟುವ ದಿನಗಳಲ್ಲಿ ಸುತ್ತಿಗೆ, ಉಳಿ ಮುಂತಾದ ಕಬ್ಬಿಣದ ಸಾಮಾನುಗಳ ಶಬ್ದವು ಕೇಳಿಸುತ್ತಿರಲಿಲ್ಲ.
8ಕೆಳಗಿನ ಕೊಠಡಿಗೆ ಹೋಗುವ ಬಾಗಿಲು ಆಲಯದ ಬಲಗಡೆಯಲ್ಲಿತ್ತು. ಅಲ್ಲಿಂದ ಮಧ್ಯದ ಅಂತಸ್ತಿಗೂ ಮತ್ತು ಮೂರನೆಯ ಅಂತಸ್ತಿಗೂ ಹೋಗಲು ಸುರುಳಿಯಾಕಾರದ ಮೆಟ್ಟಲುಗಳಿದ್ದವು.
9ಈ ಪ್ರಕಾರ ಅವನು ಮನೆಯನ್ನು ಕಟ್ಟಿಸಿ, ದೇವದಾರಿನ ತೊಲೆ ಮತ್ತು ಹಲಿಗೆಗಳಿಂದ ಮಾಳಿಗೆಯನ್ನು ಮಾಡಿಸಿ ಕೆಲಸ ಮುಗಿಸಿದನು.
10ಅವನು ದೇವಾಲಯದ ಸುತ್ತಲೂ ಒಂದರ ಮೇಲೊಂದು ಐದೈದು ಮೊಳ ಎತ್ತರವಾದ ಕೊಠಡಿಗಳನ್ನು ಕಟ್ಟಿಸಿದನು. ಇವು ದೇವದಾರಿನ ತೊಲೆಗಳಿಂದ ದೇವಾಲಯಕ್ಕೆ ಸೇರಿಸಲ್ಪಟ್ಟಿದ್ದವು.
11ಯೆಹೋವನು ಸೊಲೊಮೋನನಿಗೆ ಈ ಮಾತುಗಳನ್ನು ತಿಳಿಸಿದನು.
12“ನೀನು ಈಗ ಒಂದು ಆಲಯವನ್ನು ಕಟ್ಟಿಸುತ್ತಿರುವಿಯಷ್ಟೆ. ನೀನು ನನ್ನ ನಿಯಮ ವಿಧಿಗಳನ್ನು ಅನುಸರಿಸಿ, ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವುದಾದರೆ, ನಾನು ನಿನ್ನನ್ನು ಕುರಿತು ನಿನ್ನ ತಂದೆಯಾದ ದಾವೀದನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನು.
13ನನ್ನ ಪ್ರಜೆಗಳಾದ ಇಸ್ರಾಯೇಲರನ್ನು ಕೈಬಿಡದೆ ಅವರ ಮಧ್ಯದಲ್ಲೇ ವಾಸಿಸುವೆನು” ಎಂದು ಹೇಳಿದನು.
14ಸೊಲೊಮೋನನು ದೇವಾಲಯವನ್ನು ಕಟ್ಟಿಸಿ ಮುಗಿಸಿದನು.
15ಅನಂತರ ಅವನು ಅದರ ಗೋಡೆಗಳ ಒಳಮೈಯನ್ನು ನೆಲದಿಂದ ಮಾಳಿಗೆಯವರೆಗೆ ದೇವದಾರಿನ ಹಲಗೆಗಳಿಂದ ಹೊದಿಸಿದನು. ನೆಲಕ್ಕೆ ತುರಾಯಿ ಮರದ ಹಲಗೆಗಳನ್ನು ಹಾಕಿದನು.
16ಇದಲ್ಲದೆ ಅವನು ದೇವಾಲಯದೊಳಗೆ ಹಿಂದಿನ ಇಪ್ಪತ್ತು ಮೊಳ ಸ್ಥಳವನ್ನು ಬಿಟ್ಟು ನೆಲದಿಂದ ತೊಲೆಗಳವರೆಗೆ ದೇವದಾರಿನ ಹಲಗೆಗಳಿಂದ ಒಂದು ಗೋಡೆಯನ್ನು ಮಾಡಿಸಿದನು. ಅದರ ಹಿಂದಿನ ಭಾಗವನ್ನು ಗರ್ಭಗೃಹ ಅಥವಾ ಮಹಾಪರಿಶುದ್ಧ ಸ್ಥಳ ಎಂದು ಪ್ರತ್ಯೇಕಿಸಿದನು.
17ದೇವಾಲಯದ ಪರಿಶುದ್ಧ ಸ್ಥಳ ಎನ್ನಿಸಿಕೊಳ್ಳುವ ಮುಂದಿನ ಭಾಗವು ನಲ್ವತ್ತು ಮೊಳ ಉದ್ದವಿತ್ತು.
18ದೇವಾಲಯದೊಳಗೆ ಕಲ್ಲು ಕಾಣಿಸದಂತೆ ಗೋಡೆಗಳನ್ನೆಲ್ಲಾ ಬಳ್ಳಿಗಳು ಮತ್ತು ಹೂವುಗಳು ಕೆತ್ತಿರುವ ದೇವದಾರಿನ ಹಲಿಗೆಗಳಿಂದ ಹೊದಿಸಿದನು.
19ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಇಡುವುದಕ್ಕಾಗಿ ದೇವಾಲಯದೊಳಗೆ ಒಂದು ಭಾಗವನ್ನು ಗರ್ಭಗೃಹವೆಂದು ಪ್ರತ್ಯೇಕಿಸಿದನು.
20ಆ ಗರ್ಭಗೃಹವು ಇಪ್ಪತ್ತು ಮೊಳ ಉದ್ದವೂ, ಇಪ್ಪತ್ತು ಮೊಳ ಅಗಲವೂ, ಇಪ್ಪತ್ತು ಮೊಳ ಎತ್ತರವೂ ಆಗಿತ್ತು. ಅದನ್ನು ಚೊಕ್ಕ ಬಂಗಾರದ ತಗಡಿನಿಂದಲೂ, ಧೂಪವೇದಿಯನ್ನು ದೇವದಾರು ಮರದಿಂದಲೂ ಹೊದಿಸಿದನು.

Read 1 ಅರಸು 61 ಅರಸು 6
Compare 1 ಅರಸು 6:3-201 ಅರಸು 6:3-20