Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 1 ಅರಸು - 1 ಅರಸು 22

1 ಅರಸು 22:2-24

Help us?
Click on verse(s) to share them!
2ಮೂರನೆಯ ವರ್ಷದಲ್ಲಿ ಯೆಹೂದ್ಯರ ಅರಸನಾದ ಯೆಹೋಷಾಫಾಟನು ಇಸ್ರಾಯೇಲರ ಅರಸನ ಬಳಿಗೆ ಬಂದನು.
3ಆಗ ಇಸ್ರಾಯೇಲರ ಅರಸನು ತನ್ನ ಸೇವಕರಿಗೆ, “ಗಿಲ್ಯಾದಿನ ರಾಮೋತ್ ಪಟ್ಟಣವು ನಮ್ಮದೆಂದು ನಿಮಗೆ ಗೊತ್ತಿದೆಯಲ್ಲಾ. ಅದನ್ನು ಇಷ್ಟರವರೆಗೂ ಅರಾಮ್ಯರ ಅರಸನಿಂದ ಹಿಂತಿರುಗಿ ತೆಗೆದುಕೊಳ್ಳದೆ ಸುಮ್ಮನೆ ಕುಳಿತುಕೊಂಡಿರುತ್ತೇವೆ” ಎಂದು ಹೇಳಿದನು.
4ಅವನು ಯೆಹೋಷಾಫಾಟನಿಗೆ, “ಯುದ್ಧಮಾಡುವುದಕ್ಕಾಗಿ ನೀನು ನಮ್ಮ ಜೊತೆಯಲ್ಲಿ ರಾಮೋತ್ ಗಿಲ್ಯಾದಿಗೆ ಬರುತ್ತೀಯೋ?” ಎಂದು ಕೇಳಲು ಅವನು, “ನಾನೂ ನೀನೂ, ನನ್ನ ಜನರೂ ನಿನ್ನ ಜನರೂ, ನನ್ನ ಕುದುರೆಗಳೂ ನಿನ್ನ ಕುದುರೆಗಳೂ ಒಂದೇ ಅಲ್ಲವೇ?” ಎಂದು ಉತ್ತರಕೊಟ್ಟನು.
5ಯೆಹೋಷಾಫಾಟನು, “ಯೆಹೋವನ ಸನ್ನಿಧಿಯಲ್ಲಿ ಈಗ ವಿಚಾರಿಸು” ಎಂದು ಇಸ್ರಾಯೇಲರ ಅರಸನನ್ನು ಬೇಡಿಕೊಂಡನು.
6ಆಗ ಇಸ್ರಾಯೇಲರ ಅರಸನು ತನ್ನ ರಾಜ್ಯದಲ್ಲಿದ್ದ ಸುಮಾರು ನಾನೂರು ಪ್ರವಾದಿಗಳನ್ನು ಕೂಡಿಸಿ ಅವರನ್ನು, “ನಾನು ರಾಮೋತ್ ಗಿಲ್ಯಾದಿನ ಮೇಲೆ ಯುದ್ಧಕಾಗಿ ಹೋಗಬಹುದೋ ಹೋಗಬಾರದೋ?” ಎಂದು ಕೇಳಲು ಅವರು, “ಹೋಗಬಹುದು, ಕರ್ತನು ಅದನ್ನು ಅರಸನ ಕೈಗೆ ಒಪ್ಪಿಸುವನು” ಅಂದರು.
7ಆದರೆ ಯೆಹೋಷಾಫಾಟನು ಇಸ್ರಾಯೇಲ್ಯರ ಅರಸನನ್ನು, “ಯೆಹೋವನ ಪ್ರವಾದಿಗಳಲ್ಲಿ ಇವರ ಹೊರತಾಗಿ ನಾವು ವಿಚಾರಿಸಬಹುದಾದ ಬೇರೆ ಪ್ರವಾದಿಗಳು ಇರುವುದಿಲ್ಲವೋ?” ಎಂದು ಕೇಳಿದನು.
8ಅದಕ್ಕೆ ಅವನು “ನಮಗೋಸ್ಕರ ಯೆಹೋವನ ಸನ್ನಿಧಿಯಲ್ಲಿ ವಿಚಾರಿಸಬಲ್ಲವನಾದ ಇನ್ನೊಬ್ಬ ಪ್ರವಾದಿಯಿರುತ್ತಾನೆ, ಅವನು ಇಮ್ಲನ ಮಗನಾದ ಮೀಕಾಯೆಹು ಎಂಬುವನು. ಆದರೆ ನಾನು ಅವನನ್ನು ಹಗೆಮಾಡುತ್ತೇನೆ, ಅವನು ನನ್ನ ಕುರಿತು ಯಾವಾಗಲೂ ಶುಭವನ್ನಲ್ಲ ಅಶುಭವನ್ನೇ ಮುಂತಿಳಿಸುತ್ತಾನೆ” ಎಂದು ಉತ್ತರಕೊಟ್ಟನು. ಅದಕ್ಕೆ ಯೆಹೋಷಾಫಾಟನು “ಅರಸನು ಹಾಗನ್ನದಿರಲಿ” ಅಂದನು.
9ಆಗ ಇಸ್ರಾಯೇಲ್ಯರ ಅರಸನು ಒಬ್ಬ ಕಂಚುಕಿಯನ್ನು ಕರೆದು ಅವನಿಗೆ, “ಹೋಗಿ ಇಮ್ಲನ ಮಗನಾದ ಮೀಕಾಯೆಹುವನ್ನು ಬೇಗನೆ ಕರೆದುಕೊಂಡು ಬಾ” ಎಂದು ಆಜ್ಞಾಪಿಸಿದನು.
10ಇಸ್ರಾಯೇಲರ ಅರಸನೂ ಯೆಹೂದ್ಯರ ಅರಸನಾದ ಯೆಹೋಷಾಫಾಟನೂ ರಾಜವಸ್ತ್ರಗಳನ್ನು ಧರಿಸಿಕೊಂಡು ಸಮಾರ್ಯ ಪಟ್ಟಣದ ಹೆಬ್ಬಾಗಿಲಿನ ಹತ್ತಿರವಿರುವ ಬಯಲಿನಲ್ಲಿ ತಮ್ಮ ತಮ್ಮ ಆಸನಗಳ ಮೇಲೆ ಕುಳಿತುಕೊಂಡಿರಲು ಎಲ್ಲಾ ಪ್ರವಾದಿಗಳು ಅವರ ಮುಂದೆ ಪರವಶರಾಗಿ ಮಾತನಾಡುತ್ತಾ ಇದ್ದರು.
11ಅವರಲ್ಲಿ ಕೆನಾನನ ಮಗನಾದ ಚಿದ್ಕೀಯ ಎಂಬುವನು ಕಬ್ಬಿಣದ ಕೊಂಬುಗಳನ್ನು ಮಾಡಿಸಿ, ತಲೆಗೆ ಕಟ್ಟಿಕೊಂಡು ಬಂದು, “ಯೆಹೋವನು ಹೀಗೆನ್ನುತ್ತಾನೆ, ಅರಾಮ್ಯರು ನಿರ್ಮೂಲರಾಗುವವರೆಗೂ ಇವುಗಳಿಂದ ನೀನು ಅವರನ್ನು ಇರಿದು ಕೊಂದುಹಾಕುವಿ” ಎಂದನು.
12ಉಳಿದ ಪ್ರವಾದಿಗಳೂ ಇದೇ ತರದ ಮಾತುಗಳನ್ನು ಹೇಳಿ, “ರಾಮೋತ್ ಗಿಲ್ಯಾದಿಗೆ ಹೋಗು ನೀನು ಸಫಲನಾಗಿ ಬರುವಿ. ಯೆಹೋವನು ಅದನ್ನು ಅರಸನ ಕೈಗೆ ಒಪ್ಪಿಸುವನು” ಅಂದರು.
13ಮೀಕಾಯೆಹುವನ್ನು ಕರೆಯುವುದಕ್ಕೆ ಹೋದ ದೂತನು ಅವನಿಗೆ, “ಎಲ್ಲಾ ಪ್ರವಾದಿಗಳೂ ಏಕ ಮನಸ್ಸಿನಿಂದ ಅರಸನಿಗೆ ಶುಭವನ್ನೇ ಮುಂತಿಳಿಸುತ್ತಾರೆ, ದಯವಿಟ್ಟು ನೀನೂ ಅವರಂತೆ ಶುಭವನ್ನೇ ಮುಂತಿಳಿಸು” ಎಂದು ಹೇಳಿದನು.
14ಅದಕ್ಕೆ ಮೀಕಾಯೆಹುವು, “ಯೆಹೋವನಾಣೆ, ಯೆಹೋವನು ಹೇಳುವುದನ್ನೇ ನುಡಿಯುತ್ತೇನೆ” ಎಂದು ಉತ್ತರಕೊಟ್ಟನು.
15ಅವನು ಅರಸನ ಬಳಿಗೆ ಬಂದಾಗ ಅರಸನು, “ನಾವು ರಾಮೋತ್ ಗಿಲ್ಯಾದಿನ ಮೇಲೆ ಯುದ್ಧಕ್ಕಾಗಿ ಹೋಗಬಹುದೋ, ಹೋಗಬಾರದೋ?” ಎಂದು ಕೇಳಲು ಅವನು, “ಹೋಗಬಹುದು, ಸಫಲನಾಗುವಿ, ಯೆಹೋವನು ಪಟ್ಟಣವನ್ನು ಅರಸನ ಕೈಗೆ ಒಪ್ಪಿಸುವನು” ಎಂದು ಹೇಳಿದನು.
16ಆಗ ಅರಸನು, “ಅವನಿಗೆ ಸತ್ಯವನ್ನೇ ತಿಳಿಸಬೇಕೆಂದು ಯೆಹೋವನ ಹೆಸರಿನಲ್ಲಿ ನಿನ್ನಿಂದ ಎಷ್ಟು ಸಾರಿ ಪ್ರಮಾಣ ಮಾಡಿಸಬೇಕು?” ಎಂದನು.
17ಆಗ ಮೀಕಾಯೆಹುವು, “ಇಸ್ರಾಯೇಲರೆಲ್ಲರು ಕುರುಬನಿಲ್ಲದ ಕುರಿಗಳಂತೆ ಬೆಟ್ಟಗಳಲ್ಲಿ ಚದುರಿಹೋದದ್ದನ್ನು ಕಂಡೆನು. ಆಗ ಯೆಹೋವನು, ‘ಇವರು ಒಡೆಯನಿಲ್ಲದವರಾಗಿರುತ್ತಾರೆ, ಸಮಾಧಾನದಿಂದ ತಮ್ಮ ತಮ್ಮ ಮನೆಗಳಿಗೆ ಹೋಗಲಿ’ ಎಂದನು” ಎಂಬುದಾಗಿ ಉತ್ತರಕೊಟ್ಟನು.
18ಆಗ ಇಸ್ರಾಯೇಲರ ಅರಸನು ಯೆಹೋಷಾಫಾಟನಿಗೆ, “ಇವನು ನನಗೆ ಯಾವಾಗಲೂ ಶುಭವನ್ನಲ್ಲ, ಅಶುಭವನ್ನೇ ಮುಂತಿಳಿಸುತ್ತಾನೆಂದು ನಾನು ನಿನಗೆ ಹೇಳಲಿಲ್ಲವೋ?” ಎಂದನು.
19ಅದಕ್ಕೆ ಮೀಕಾಯೆಹುವು “ಅದಿರಲಿ, ಈಗ ಯೆಹೋವನ ವಾಕ್ಯವನ್ನು ಕೇಳು, ಯೆಹೋವನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡದ್ದನ್ನೂ ಪರಲೋಕಸೈನ್ಯಗಳು ಆತನ ಎಡಬಲಗಳಲ್ಲಿ ನಿಂತಿದ್ದನ್ನೂ ಕಂಡೆನು.
20ಯೆಹೋವನು ತನ್ನ ಹತ್ತಿರ ನಿಂತವರನ್ನು, ‘ಅಹಾಬನು ಹತನಾಗಿ ಬೀಳುವಂತೆ ಅವನನ್ನು ರಾಮೋತ್ ಗಿಲ್ಯಾದಿನ ಯುದ್ಧಕ್ಕೆ ಹೋಗಲು ಯಾರು ಪ್ರೇರೇಪಿಸುವಿರಿ’ ಎಂದು ಕೇಳಿದಾಗ ಒಬ್ಬನು ಒಂದು ರೀತಿಯಾಗಿ, ಇನ್ನೊಬ್ಬನು ಇನ್ನೊಂದು ರೀತಿಯಾಗಿ ಉತ್ತರಕೊಟ್ಟರು.
21ಕೊನೆಯಲ್ಲಿ ಒಂದು ಆತ್ಮವು ಯೆಹೋವನ ಮುಂದೆ ಬಂದು ನಿಂತು ಅವನಿಗೆ, ‘ನಾನು ಹೋಗಿ ಅವರನ್ನು ಪ್ರೇರೇಪಿಸುವೆನು’ ಅಂದಿತು.
22‘ಹೇಗೆ ಪ್ರೇರೇಪಿಸುವಿ?’ ಎಂದು ಯೆಹೋವನು ಕೇಳಲು ಅದು, ‘ನಾನು ಅಸತ್ಯವನ್ನಾಡುವ ಆತ್ಮವಾಗಿ ಅವನ ಎಲ್ಲಾ ಪ್ರವಾದಿಗಳಲ್ಲಿ ಸೇರುವೆನು’ ಎಂದು ಉತ್ತರಕೊಟ್ಟಿತು. ಆಗ ಆತನು ಅದಕ್ಕೆ, ‘ಹೋಗಿ ಅದರಂತೆ ಮಾಡು ಅವನನ್ನು ಪ್ರೇರೇಪಿಸಿ ಸಫಲವಾಗುವಿ’ ಅಂದನು.
23ನೋಡು ಯೆಹೋವನು ನಿನ್ನ ವಿಷಯದಲ್ಲಿ ಕೇಡು ನುಡಿದು ನಿನ್ನ ಎಲ್ಲಾ ಪ್ರವಾದಿಗಳಲ್ಲಿ ಅಸತ್ಯವನ್ನಾಡುವ ಆತ್ಮವನ್ನು ಕಳುಹಿಸಿದ್ದಾನೆ” ಎಂದು ಹೇಳಿದನು.
24ಆಗ ಕೆನಾನನ ಮಗನಾದ ಚಿದ್ಕೀಯನು ಮೀಕಾಯೆಹುವಿನ ಬಳಿಗೆ ಹೋಗಿ ಅವನ ಕೆನ್ನೆಗೆ ಒಂದು ಏಟು ಹಾಕಿ, “ಯೆಹೋವನ ಆತ್ಮವು ನನ್ನನ್ನು ಬಿಟ್ಟು ನಿನ್ನೊಂದಿಗೆ ಮಾತನಾಡುವುದಕ್ಕೋಸ್ಕರ ಯಾವ ಮಾರ್ಗವಾಗಿ ಬಂದಿತು?” ಎನ್ನಲು

Read 1 ಅರಸು 221 ಅರಸು 22
Compare 1 ಅರಸು 22:2-241 ಅರಸು 22:2-24