Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಲೂಕ - ಲೂಕ 22

ಲೂಕ 22:31-62

Help us?
Click on verse(s) to share them!
31“ಸೀಮೋನನೇ, ಸೀಮೋನನೇ, ನೋಡು, ಸೈತಾನನು ನಿನ್ನನ್ನು ಗೋದಿಯಂತೆ ಕೇರಬೇಕೆಂದು ಅಪ್ಪಣೆ ಕೇಳಿಕೊಂಡನು.
32ಆದರೆ ನಿನ್ನ ನಂಬಿಕೆ ಕುಂದಿಹೋಗಬಾರದೆಂದು ನಾನು ನಿನ್ನ ವಿಷಯದಲ್ಲಿ ದೇವರಿಗೆ ವಿಜ್ಞಾಪನೆ ಮಾಡಿಕೊಂಡೆನು. ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ದೃಢಪಡಿಸು” ಎಂದು ಹೇಳಿದನು.
33ಆದರೆ ಅವನು, “ಕರ್ತನೇ, ನಿನ್ನ ಸಂಗಡ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ನಾನು ಸಿದ್ಧನಾಗಿದ್ದೇನೆ” ಅನ್ನಲು,
34ಆತನು, “ಪೇತ್ರನೇ, ನನ್ನ ವಿಷಯದಲ್ಲಿ ಇವನನ್ನು ಅರಿಯೆನೆಂದು ನೀನು ಮೂರು ಸಾರಿ ಹೇಳುವ ತನಕ ಈಹೊತ್ತು ಕೋಳಿ ಕೂಗುವುದಿಲ್ಲವೆಂದು ನಿನಗೆ ಹೇಳುತ್ತೇನೆ” ಅಂದನು.
35ಮತ್ತು ಆತನು, “ನಿಮ್ಮನ್ನು ನಾನು ಹಣ, ಕೈಚೀಲಜೋಡುಗಳಿಲ್ಲದೆ ಕಳುಹಿಸಿದಾಗ ನಿಮಗೆ ಏನಾದರೂ ಕೊರತೆಯಾಯಿತೋ?” ಎಂದು ಕೇಳಲು ಅವರು ಏನೂ ಇಲ್ಲವೆಂದು ಉತ್ತರಕೊಟ್ಟರು.
36ಅದಕ್ಕೆ ಆತನು, “ಈಗಲಾದರೋ ಹಣವಿದ್ದವನು ಅದನ್ನು ತೆಗೆದುಕೊಳ್ಳಲಿ, ಕೈಚೀಲವಿರುವವನು ಅದನ್ನು ತೆಗೆದುಕೊಳ್ಳಲಿ, ಮತ್ತು ಕತ್ತಿಯಿಲ್ಲದವನು ತನ್ನ ಮೇಲಂಗಿಯನ್ನು ಮಾರಿ ಒಂದು ಕತ್ತಿಯನ್ನು ಕೊಂಡುಕೊಳ್ಳಲಿ.
37ಏಕೆಂದರೆ, ‘ಆತನು ಅಪರಾಧಿಗಳಲ್ಲಿ ಒಬ್ಬನಂತೆ ಎಣಿಸಲ್ಪಟ್ಟನು’ ಎಂದು ಬರೆದಿರುವ ಮಾತು ನನ್ನಲ್ಲಿ ನೆರವೇರಬೇಕಾಗಿದೆ ಎಂದು ನಿಮಗೆ ಹೇಳುತ್ತೇನೆ. ನನ್ನ ವಿಷಯದಲ್ಲಿ ಬರೆಯಲ್ಪಟ್ಟಿರುವ ಎಲ್ಲವು ನೆರವೇರಬೇಕು” ಎಂದು ಹೇಳಿದನು.
38ಅವರು, “ಕರ್ತನೇ, ಇಗೋ ಇಲ್ಲಿ ಎರಡು ಕತ್ತಿಗಳಿವೆ” ಅನ್ನಲು, ಆತನು ಅವರಿಗೆ, “ಅಷ್ಟು ಸಾಕು” ಅಂದನು.
39ತರುವಾಯ ಆತನು ಪ್ರತಿದಿನದಂತೆ ಹೊರಟು ಎಣ್ಣೆಮರಗಳ ಗುಡ್ಡಕ್ಕೆ ಹೋದನು. ಶಿಷ್ಯರೂ ಆತನ ಹಿಂದೆ ಹೋದರು.
40ಆತನು ಆ ಕ್ಲುಪ್ತ ಸ್ಥಳಕ್ಕೆ ಬಂದಾಗ ಅವರಿಗೆ, “ನೀವು ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.
41ಆ ಮೇಲೆ ಆತನು ಅವರನ್ನು ಬಿಟ್ಟು ಕಲ್ಲೆಸೆತದಷ್ಟು ದೂರ ಹೋಗಿ, ಮೊಣಕಾಲೂರಿ,
42“ತಂದೆಯೇ, ನಿನಗೆ ಇಷ್ಟವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು. ಹೇಗೂ ನನ್ನ ಚಿತ್ತವಲ್ಲ, ನಿನ್ನ ಚಿತ್ತದಂತೆಯೇ ಆಗಲಿ” ಪ್ರಾರ್ಥಿಸಿದನು.
43ಆಗ ಪರಲೋಕದಿಂದ ಬಂದ ಒಬ್ಬ ದೇವದೂತನು ಆತನಿಗೆ ಕಾಣಿಸಿಕೊಂಡು, ಆತನನ್ನು ಬಲಪಡಿಸಿದನು.
44ಯೇಸು ತೀವ್ರವಾದ ಮನೋವ್ಯಥೆಯುಳ್ಳವನಾಗಿ, ಆಸಕ್ತಿಯಿಂದ ಪ್ರಾರ್ಥಿಸುತ್ತಿರಲಾಗಿ, ಆತನ ಬೆವರು ರಕ್ತದ ಹನಿಗಳೋಪಾದಿಯಲ್ಲಿ ನೆಲಕ್ಕೆ ಬೀಳುತ್ತಿತ್ತು.
45ಆತನು ಪ್ರಾರ್ಥನೆ ಮುಗಿಸಿ ಎದ್ದು ಶಿಷ್ಯರ ಬಳಿಗೆ ಬಂದು, ಅವರು ದುಃಖದಿಂದ ಬಳಲಿಹೋದವರಾಗಿ ನಿದ್ರೆಹತ್ತಿರುವುದನ್ನು ಕಂಡು,
46ಅವರಿಗೆ, “ನೀವು ನಿದ್ರೆಮಾಡುವುದೇನು? ಏಳಿರಿ, ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.
47ಆತನು ಇನ್ನೂ ಮಾತನಾಡುತ್ತಿರುವಾಗಲೇ ಇಗೋ, ಜನರ ಗುಂಪು ಕಾಣಿಸಿತು. ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನೆಂಬುವನು ಆ ಜನರ ಗುಂಪಿನ ಮುಂದೆ ನಡೆಯುತ್ತಾ, ಯೇಸುವಿಗೆ ಮುದ್ದಿಡುವುದಕ್ಕಾಗಿ ಆತನ ಬಳಿಗೆ ಬರಲು,
48ಯೇಸು ಅವನಿಗೆ, “ಯೂದನೇ, ಮುದ್ದಿಟ್ಟು ಮನುಷ್ಯಕುಮಾರನನ್ನು ಹಿಡಿದುಕೊಡುತ್ತೀಯಾ?” ಎಂದು ಕೇಳಿದನು.
49ಆತನ ಸುತ್ತಲಿದ್ದವರು ಘಟನೆಯ ಸೂಕ್ಷ್ಮತೆಯನ್ನು ತಿಳಿದು ತಕ್ಷಣ, “ಕರ್ತನೇ, ನಾವು ಕತ್ತಿಯಿಂದ ಹೊಡೆಯೋಣವೋ?” ಎಂದು ಕೇಳಿದರು.
50ಅಷ್ಟರಲ್ಲಿ ಅವರಲ್ಲಿ ಒಬ್ಬನು ಮಹಾಯಾಜಕನ ಆಳನ್ನು ಕತ್ತಿಯಿಂದ ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿ ಹಾಕಿದನು.
51ಆದರೆ ಯೇಸು, “ಇಷ್ಟಕ್ಕೇ ಬಿಡಿರಿ” ಎಂದು ಹೇಳಿ ಆ ಆಳಿನ ಕಿವಿಯನ್ನು ಮುಟ್ಟಿ ವಾಸಿಮಾಡಿದನು.
52ಬಳಿಕ ಯೇಸು ತನ್ನನ್ನು ಹಿಡಿಯುವುದಕ್ಕೆ ಬಂದ ಮುಖ್ಯಯಾಜಕರಿಗೂ, ದೇವಾಲಯದ ಕಾವಲಿನ ದಳವಾಯಿಗಳಿಗೂ, ಸಭೆಯ ಹಿರಿಯರಿಗೂ, “ದರೋಡೆಗಾರನನ್ನು ಹಿಡಿಯುವುದಕ್ಕೆ ಬಂದಂತೆ ಕತ್ತಿಗಳನ್ನೂ ದೊಣ್ಣೆಗಳನ್ನೂ ತೆಗೆದುಕೊಂಡು ಬಂದಿರುವಿರಾ?
53ನಾನು ಪ್ರತಿದಿನ ದೇವಾಲಯದಲ್ಲಿ ನಿಮ್ಮ ಸಂಗಡ ಇದ್ದಾಗ ನೀವು ನನ್ನ ಮೇಲೆ ಕೈಹಾಕಲಿಲ್ಲ. ಆದರೆ ಇದು ನಿಮ್ಮ ಕಾಲ, ಇದು ಅಂಧಕಾರದ ದೊರೆತನದ ಕಾಲ” ಎಂದು ಹೇಳಿದನು.
54ಅವರು ಆತನನ್ನು ಹಿಡಿದು ಮಹಾಯಾಜಕನ ಮನೆಯೊಳಕ್ಕೆ ಕರೆದುಕೊಂಡು ಹೋದರು. ಪೇತ್ರನು ದೂರದಿಂದ ಅವರನ್ನು ಹಿಂಬಾಲಿಸುತ್ತಿದ್ದನು.
55ಅಂಗಳದ ನಡುವೆ ಅವರು ಬೆಂಕಿ ಹೊತ್ತಿಸಿ ಒಟ್ಟಾಗಿ ಕುಳಿತುಕೊಂಡಿರಲು ಅವರ ನಡುವೆ ಪೇತ್ರನೂ ಕುಳಿತುಕೊಂಡನು.
56ಅವನು ಬೆಳಕಿಗೆ ಮುಖವಾಗಿ ಕುಳಿತಿರುವಾಗ ಒಬ್ಬ ದಾಸಿಯು ಅವನನ್ನು ಕಂಡು, ಅವನನ್ನು ದೃಷ್ಟಿಸಿ ನೋಡಿ, “ಇವನು ಸಹ ಅವನ ಸಂಗಡ ಇದ್ದವನು” ಅಂದಳು.
57ಆದರೆ ಅವನು, “ನಾನು ಅವನನ್ನು ಅರಿಯೆನಮ್ಮಾ” ಎಂದು ಹೇಳಿದನು.
58ಸ್ವಲ್ಪಹೊತ್ತಿನ ಮೇಲೆ ಮತ್ತೊಬ್ಬನು ಬಂದು ಅವನನ್ನು ಕಂಡು, “ನೀನೂ ಸಹ ಅವರಲ್ಲಿ ಒಬ್ಬನು” ಅನ್ನಲು ಪೇತ್ರನು, “ನಾನಲ್ಲಪ್ಪಾ” ಅಂದನು.
59ಹೆಚ್ಚು ಕಡಿಮೆ ಒಂದು ಘಂಟೆ ಹೊತ್ತಿನ ಮೇಲೆ ಇನ್ನೊಬ್ಬನು, “ನಿಶ್ಚಯವಾಗಿ ಇವನು ಸಹ ಅವನ ಸಂಗಡ ಇದ್ದವನು, ಇವನು ಗಲಿಲಾಯದವನಷ್ಟೆ” ಎಂದು ದೃಢವಾಗಿ ಹೇಳಿದನು.
60ಆದರೆ ಪೇತ್ರನು, “ನೀನು ಹೇಳುವುದೇನೋ ನಾನರಿಯೆನಪ್ಪಾ” ಅಂದನು. ಅವನು ಈ ಮಾತನ್ನು ಆಡುತ್ತಿರುವಾಗಲೇ ಕೋಳಿ ಕೂಗಿತು.
61ಕರ್ತನು ಹಿಂತಿರುಗಿಕೊಂಡು ಪೇತ್ರನನ್ನು ದೃಷ್ಟಿಸಿ ನೋಡಿದನು. ಆಗ ಪೇತ್ರನು, “ಈಹೊತ್ತು ಕೋಳಿ ಕೂಗುವುದಕ್ಕಿಂತ ಮುಂಚೆ ಮೂರು ಸಾರಿ ನನ್ನ ವಿಷಯವಾಗಿ ಅವನನ್ನು ಅರಿಯೆನೆಂಬದಾಗಿ ಹೇಳುವಿ” ಎಂದು ಕರ್ತನು ನುಡಿದ ಮಾತನ್ನು ನೆನಪಿಸಿಕೊಂಡು,
62ಹೊರಗೆ ಹೋಗಿ ತುಂಬಾ ವ್ಯಥೆಪಟ್ಟು ಅತ್ತನು.

Read ಲೂಕ 22ಲೂಕ 22
Compare ಲೂಕ 22:31-62ಲೂಕ 22:31-62