8“ದೇವರ ವಾಕ್ಯವು ನಿನ್ನ ಸಮೀಪದಲ್ಲಿಯೇ ಇದೆ; ಅದು ನಿನ್ನ ಬಾಯಲ್ಲಿಯೂ, ನಿನ್ನ ಹೃದಯದಲ್ಲಿಯೂ ಇದೆ.” ಆ ವಾಕ್ಯವು ನಾವು ಸಾರುವ ನಂಬಿಕೆಯ ವಿಷಯವಾದ ವಾಕ್ಯವೇ.
9ಅದೇನೆಂದರೆ ನೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆಮಾಡಿಕೊಂಡು ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬಿದರೆ ನಿನಗೆ ರಕ್ಷಣೆಯಾಗುವುದು ಎಂಬುದೇ.
10ಹೃದಯದಿಂದ ನಂಬುವುದರ ಮೂಲಕ ನೀತಿಯು ದೊರಕುತ್ತದೆ. ಬಾಯಿಂದ ಅರಿಕೆಮಾಡುವುದರ ಮೂಲಕ ರಕ್ಷಣೆಯಾಗುತ್ತದೆ.
11“ಆತನ ಮೇಲೆ ನಂಬಿಕೆಯಿಡುವ ಒಬ್ಬನಾದರೂ ಆಶಾಭಂಗಪಡುವುದಿಲ್ಲವೆಂದು” ಧರ್ಮಶಾಸ್ತ್ರವು ಹೇಳುತ್ತದೆ.
12ಈ ವಿಷಯದಲ್ಲಿ ಯೆಹೂದ್ಯರಿಗೂ ಅಥವಾ ಗ್ರೀಕನಿಗೂ ಹೆಚ್ಚು ಕಡಿಮೆ ಏನೂ ಇಲ್ಲ. ಎಲ್ಲರಿಗೂ ಒಬ್ಬನೇ ಕರ್ತನು; ಆತನು ತನ್ನ ನಾಮವನ್ನು ಹೇಳಿಕೊಳ್ಳುವವರಿಗೆ ಹೇರಳವಾಗಿ ಕೊಡುವುದಕ್ಕೆ ಶಕ್ತನಾಗಿದ್ದಾನೆ.
13ಆದ್ದರಿಂದ ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೂ ರಕ್ಷಣೆಯಾಗುವುದೆಂದು ಬರೆದಿದೆ.
14ಆದರೆ ಅವರು ನಂಬದೆ ಇರುವುದರಿಂದ ಆತನ ನಾಮವನ್ನು ಹೇಳಿಕೊಳ್ಳುವುದಾದರೂ ಹೇಗೆ? ಮತ್ತು ಆತನ ಸುದ್ದಿಯನ್ನು ಕೇಳದಿರುವಲ್ಲಿ ಆತನನ್ನು ನಂಬುವುದಾದರೂ ಹೇಗೆ? ಪ್ರಚಾರಪಡಿಸುವವನಿಲ್ಲದೆ ಕೇಳುವುದಾದರೂ ಹೇಗೆ? ಸುವಾರ್ತೆಸಾರುವವರನ್ನು ಕಳುಹಿಸದೆ ಸಾರುವುದು ಹೇಗೆ?
15ಇದಕ್ಕೆ ಸರಿಯಾಗಿ “ಶುಭದ ಸುವಾರ್ತೆಯನ್ನು ಸಾರುವವರ ಪಾದಗಳು ಎಷ್ಟೋ ಮನೋಹರವಾಗಿವೆ” ಎಂದು ಬರೆದಿದೆ.
16ಆದರೂ ಆ ಶುಭವರ್ತಮಾನಕ್ಕೆ ಎಲ್ಲರೂ ಕಿವಿಗೊಡಲಿಲ್ಲ. ಈ ವಿಷಯದಲ್ಲಿ ಯೆಶಾಯನು, “ಕರ್ತನೇ, ನಾವು ಸಾರಿದ ಸುವಾರ್ತೆಯನ್ನು ಯಾರು ನಂಬಿದರು?” ಎಂದು ನುಡಿಯುತ್ತಾನೆ.
17ಆದಕಾರಣ ಸಾರಿದ ಸುವಾರ್ತೆಯನ್ನು ಕೇಳುವುದರಿಂದ ನಂಬಿಕೆಯು ಹುಟ್ಟುತ್ತದೆ, ಕೇಳಿಸಿಕೊಳ್ಳುವುದು ಕ್ರಿಸ್ತನ ವಾಕ್ಯವಾಗಿದೆ.