8ತಿರುಗಿ ಆತನು ಬಗ್ಗಿಕೊಂಡು ಬೆರಳಿನಿಂದ ನೆಲದ ಮೇಲೆ ಬರೆಯುತ್ತಾ ಇದ್ದನು.
9ಅದನ್ನು ಅವರು ಕೇಳಿ ಹಿರಿಯರು ಮೊದಲುಗೊಂಡು ಎಲ್ಲರೂ ಒಬ್ಬೊಬ್ಬರಾಗಿ ಹೊರಟು ಹೋದರು; ಆಗ ಯೇಸು ಒಬ್ಬನೇ ಉಳಿದನು. ಆ ಸ್ತ್ರೀಯು ಅಲ್ಲಿಯೇ ನಿಂತಿದ್ದಳು.
10ಯೇಸು ನೆಟ್ಟಗೆ ಕುಳಿತುಕೊಂಡು ಆಕೆಗೆ, “ಸ್ತ್ರೀಯೇ, ಅವರು ಎಲ್ಲಿಗೆ ಹೋದರು? ನಿನ್ನನ್ನು ಖಂಡಿಸುವುದಕ್ಕೆ ಯಾರೂ ಉಳಿಯಲಿಲ್ಲವೋ?” ಎಂದನು.
11ಅದಕ್ಕೆ ಆಕೆಯು “ಕರ್ತನೇ, ಯಾರೂ ಶಿಕ್ಷೆ ವಿಧಿಸಲಿಲ್ಲ” ಎಂದಳು. ಯೇಸು ಆಕೆಗೆ “ನಾನೂ ಸಹ ನಿನ್ನನ್ನು ಶಿಕ್ಷೆ ವಿಧಿಸುವುದಿಲ್ಲ, ಹೋಗು, ಇನ್ನು ಮುಂದೆ ಪಾಪಮಾಡಬೇಡ” ಎಂದು ಹೇಳಿದನು.
12ಯೇಸು ಪುನಃ ಜನರೊಂದಿಗೆ ಮಾತನಾಡುತ್ತಾ, “ನಾನೇ ಲೋಕದ ಬೆಳಕಾಗಿದ್ದೇನೆ. ನನ್ನನ್ನು ಹಿಂಬಾಲಿಸುವವನು ಎಂದಿಗೂ ಕತ್ತಲೆಯಲ್ಲಿ ನಡೆಯುವುದಿಲ್ಲ, ಆದರೆ ಅವನು ಜೀವದ ಬೆಳಕನ್ನು ಹೊಂದಿರುವನು” ಎಂದು ಹೇಳಿದನು.
13ಫರಿಸಾಯರು ಆತನಿಗೆ “ನಿನ್ನ ವಿಷಯವಾಗಿ ನೀನೇ ಸಾಕ್ಷಿ ಹೇಳುತ್ತಿರುವೆ, ನಿನ್ನ ಸಾಕ್ಷಿಯು ನಿಜವಲ್ಲ” ಎಂದು ಹೇಳಲು
14ಯೇಸು ಅವರಿಗೆ “ನನ್ನ ವಿಷಯವಾಗಿ ನಾನು ಸಾಕ್ಷಿನೀಡಿದರೂ, ನನ್ನ ಸಾಕ್ಷಿ ಸತ್ಯವಾದದ್ದು. ನಾನು ಎಲ್ಲಿಂದ ಬಂದೆ ಮತ್ತು ಎಲ್ಲಿಗೆ ಹೋಗುತ್ತೇನೆ ಎಂದು ನನಗೆ ತಿಳಿದಿದೆ, ಆದರೆ ನಾನು ಎಲ್ಲಿಂದ ಬಂದೆನೋ ಇಲ್ಲವೆ ಎಲ್ಲಿಗೆ ಹೋಗುತ್ತೇನೋ ಎಂಬುದು ನಿಮಗೆ ತಿಳಿಯದು.
15ನೀವು ಶಾರೀರಿಕ ರೀತಿಯಲ್ಲಿ ತೀರ್ಪು ಮಾಡುತ್ತೀರಿ, ನಾನು ಯಾರಿಗೂ ತೀರ್ಪು ಮಾಡುವುದಿಲ್ಲ.
16ನಾನು ತೀರ್ಪು ಮಾಡಿದರೂ ನನ್ನ ತೀರ್ಪು ಸತ್ಯವಾದದ್ದೇ. ಏಕೆಂದರೆ ನಾನು ಒಬ್ಬಂಟಿಗನಲ್ಲ, ನನ್ನನ್ನು ಕಳುಹಿಸಿಕೊಟ್ಟ ನನ್ನ ತಂದೆಯೂ ನನ್ನ ಜೊತೆಯಲ್ಲಿ ಇದ್ದಾನೆ.
17ಇಬ್ಬರ ಸಾಕ್ಷಿಯು ಸತ್ಯವಾದದ್ದು ಎಂದು ನಿಮ್ಮ ಧರ್ಮಶಾಸ್ತ್ರದಲ್ಲಿಯೇ ಬರೆದಿದೆ.
18ನನ್ನ ವಿಷಯವಾಗಿ ಸಾಕ್ಷಿ ನೀಡುವವನು ನಾನೇ ಮತ್ತು ನನ್ನನ್ನು ಕಳುಹಿಸಿದ ತಂದೆಯೂ ನನ್ನ ವಿಷಯವಾಗಿ ಸಾಕ್ಷಿ ನೀಡುತ್ತಾನೆ” ಎಂದನು.
19ಅವರು, “ನಿನ್ನ ತಂದೆ ಎಲ್ಲಿದ್ದಾನೆ?” ಎಂದರು. ಅದಕ್ಕೆ ಯೇಸು, “ನೀವು ನನ್ನನ್ನೂ ತಿಳಿದಿಲ್ಲ ಹಾಗೂ ನನ್ನ ತಂದೆಯನ್ನೂ ತಿಳಿದಿಲ್ಲ. ನೀವು ನನ್ನನ್ನು ತಿಳಿದಿದ್ದರೆ ನನ್ನ ತಂದೆಯನ್ನೂ ಸಹ ತಿಳಿದಿರುವಿರಿ” ಎಂದು ಉತ್ತರ ಕೊಟ್ಟನು.
20ಯೇಸು ದೇವಾಲಯದ ಕಾಣಿಕೆಯ ಪೆಟ್ಟಿಗೆಗಳು ಇರುವ ಸ್ಥಳದಲ್ಲಿ ಬೋಧನೆ ಮಾಡುತ್ತಿರುವಾಗ ಈ ಮಾತುಗಳನ್ನು ಹೇಳಿದನು. ಆದರೆ ಆತನ ಸಮಯ ಇನ್ನೂ ಬಾರದೆ ಇದ್ದ ಕಾರಣ ಯಾರೂ ಆತನನ್ನು ಬಂಧಿಸಲಿಲ್ಲ.
21ಯೇಸು ತಿರುಗಿ ಅವರಿಗೆ, “ನಾನು ಹೋಗುತ್ತೇನೆ, ನೀವು ನನ್ನನ್ನು ಹುಡುಕುವಿರಿ ಮತ್ತು ನೀವು ನಿಮ್ಮ ಪಾಪದಲ್ಲೇ ಸಾಯುವಿರಿ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ” ಎಂದನು.
22ಅದಕ್ಕೆ ಯೆಹೂದ್ಯರು, “ನಾವು ಹೋಗುವಲ್ಲಿಗೆ ನೀವು ಬರಲಾರಿರೆಂದು ಹೇಳುತ್ತಾನಲ್ಲಾ? ಇವನು ತನ್ನನ್ನು ತಾನೇ ಕೊಂದುಕೊಳ್ಳಬೇಕೆಂದಿದ್ದಾನೋ?” ಎಂದು ಮಾತನಾಡಿಕೊಂಡರು.
23ಆತನು ಅವರಿಗೆ, “ನೀವು ಕೆಳಗಿನವರು; ನಾನು ಮೇಲಿನಿಂದ ಬಂದವನು. ನೀವು ಈ ಲೋಕದವರು; ನಾನು ಈ ಲೋಕದವನಲ್ಲ.
24ಆದುದರಿಂದ ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರೆಂದು ನಿಮಗೆ ನಾನು ಹೇಳಿದೆನು. ನೀವುನನ್ನನ್ನು ಯಾರೆಂದು ನಂಬದೆ ಹೋದರೆ ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ” ಎಂದು ಹೇಳಿದನು.
25ಆಗ ಅವರು ಆತನಿಗೆ, “ನೀನು ಯಾರು?” ಎನ್ನಲೂ, ಯೇಸು ಅವರಿಗೆ, “ಮೊದಲಿನಿಂದಲೇನಾನು ನಿಮಗೆ ಹೇಳಿದಂಥದ್ದೇ.
26ನಿಮ್ಮ ವಿಷಯವಾಗಿ ಮಾತನಾಡುವುದಕ್ಕೂ, ನಿಮ್ಮ ಮೇಲೆ ತೀರ್ಪು ಮಾಡುವುದಕ್ಕೂ ಅನೇಕ ಸಂಗತಿಗಳು ನನಗುಂಟು. ಆದರೆ ನನ್ನನ್ನು ಕಳುಹಿಸಿ ಕೊಟ್ಟಾತನು ಸತ್ಯವಂತನು. ಆತನಿಂದ ನಾನು ಕೇಳಿದವುಗಳನ್ನೇ ಲೋಕಕ್ಕೆ ಹೇಳುತ್ತೇನೆ” ಎಂದನು.
27ಆತನು ತಂದೆಯ ಕುರಿತಾಗಿ ಅವರೊಂದಿಗೆ ಮಾತನಾಡಿದನೆಂದು ಅವರು ಗ್ರಹಿಸಲಿಲ್ಲ.
28ಹೀಗಿರಲಾಗಿ ಯೇಸು ಅವರಿಗೆ, “ನೀವು ಮನುಷ್ಯಕುಮಾರನನ್ನು ಮೇಲಕ್ಕೆತ್ತಿದಾಗ, ನಾನೇ ಆತನೆಂದೂ, ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನೆಂದು ನೀವು ತಿಳಿದುಕೊಳ್ಳುವಿರಿ. ಆದರೆ ನನ್ನ ತಂದೆಯು ನನಗೆ ಬೋಧಿಸಿದ ಸಂಗತಿಗಳನ್ನೇ ಮಾತನಾಡುತ್ತೇನೆ.
29ನನ್ನನ್ನು ಕಳುಹಿಸಿಕೊಟ್ಟಾತನು ನನ್ನ ಸಂಗಡ ಇದ್ದಾನೆ. ನಾನು ಆತನಿಗೆ ಮೆಚ್ಚಿಕೆಯಾದದ್ದನ್ನು ಯಾವಾಗಲೂ ಮಾಡುವುದರಿಂದ, ಆತನು ನನ್ನನ್ನು ಒಬ್ಬಂಟಿಗನಾಗಿ ಬಿಡುವುದಿಲ್ಲ” ಎಂದನು.
30ಆತನು ಈ ಮಾತುಗಳನ್ನು ಹೇಳುತ್ತಿದ್ದಾಗಲೇ ಅನೇಕರು ಆತನಲ್ಲಿ ನಂಬಿಕೆಯಿಟ್ಟರು.
31ಆಗ ಯೇಸು ತನ್ನನ್ನು ನಂಬಿದ ಯೆಹೂದ್ಯರಿಗೆ, “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡಿರುವುದಾದರೆ, ನಿಜವಾಗಿಯೂ ನೀವು ನನ್ನ ಶಿಷ್ಯರಾಗಿರುವಿರಿ.
32ಇದಲ್ಲದೆ ನೀವು ಸತ್ಯವನ್ನು ತಿಳಿದುಕೊಳ್ಳುವಿರಿ ಮತ್ತು ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವುದು” ಎಂದು ಹೇಳಿದನು.
33ಅದಕ್ಕವರು ಆತನಿಗೆ, “ನಾವು ಅಬ್ರಹಾಮನ ಸಂತಾನದವರು ಮತ್ತು ನಾವು ಎಂದೂ ಯಾರಿಗೂ ದಾಸರಾಗಿಲ್ಲ, ನಿಮಗೆ ಬಿಡುಗಡೆಯಾಗುವುದೆಂದು ನೀನು ಹೇಳುವುದಾದರೂ ಹೇಗೆ?” ಎಂದು ಪ್ರಶ್ನಿಸಿದರು.
34ಅದಕ್ಕೆ ಯೇಸು, “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಪಾಪ ಮಾಡುವವರೆಲ್ಲರು ಪಾಪಕ್ಕೆ ದಾಸರಾಗಿದ್ದಾರೆ.
35ದಾಸನು ಮನೆಯಲ್ಲಿ ಶಾಶ್ವತವಾಗಿ ಇರುವುದಿಲ್ಲ, ಆದರೆ ಮಗನು ಶಾಶ್ವತವಾಗಿ ಇರುತ್ತಾನೆ.