9ಪ್ರಿಯಳೇ, ವಧುವೇ, ನನ್ನ ಹೃದಯವನ್ನು ಅಪಹರಿಸಿರುವೆ ನಿನ್ನ ಒಂದು ಕುಡಿನೋಟದಿಂದ; ನನ್ನ ಹೃದಯವನ್ನು ವಶಮಾಡಿಕೊಂಡಿರುವೆ ನಿನ್ನ ಕಂಠಹಾರದ ಒಂದು ರತ್ನದಿಂದ.
10ಪ್ರಿಯಳೇ, ವಧುವೇ, ನಿನ್ನ ಪ್ರೀತಿ ಅದೆಷ್ಟೋ ರಮ್ಯ! ನಿನ್ನ ಪ್ರೇಮ ದ್ರಾಕ್ಷಾರಸಕ್ಕಿಂತ ಎಷ್ಟೋ ಉತ್ತಮ! ನಿನ್ನ ತೈಲದ ಪರಿಮಳ ಸಕಲಸುಗಂಧ ದ್ರವ್ಯಗಳಿಗಿಂತ ಎಷ್ಟೋ ಮನೋಹರ!
11ವಧುವೇ, ನಿನ್ನ ತುಟಿಗಳು ಜೇನುಗರೆಯುತ್ತವೆ; ಜೇನೂ ಮತ್ತು ಹಾಲೂ ನಿನ್ನ ನಾಲಿಗೆಯ ಅಡಿಯಲ್ಲಿವೆ, ನಿನ್ನ ಉಡುಪುಗಳು ಲೆಬನೋನಿನ ಸುಗಂಧ ಸೂಸುತ್ತಿದೆ.
12ನನ್ನ ಪ್ರಿಯಳು, ನನ್ನ ಮದಲಗಿತ್ತಿಯು, ಸುಭದ್ರವಾದ ಉದ್ಯಾನ, ಬೇಲಿಯೊಳಗೆ ಮುಚ್ಚಿ ಮುದ್ರಿಸಿದ ಚಿಲುಮೆ.
13ನಿನ್ನ ಉದ್ಯಾನದಲ್ಲಿವೆ ದಾಳಿಂಬೆಯಂತಹ ಉತ್ತಮ ವೃಕ್ಷಗಳು, ಜಟಮಾಂಸಿ ಮತ್ತು ಗೋರಂಟೆಗಳು,
14ಜಟಮಾಂಸಿ, ಕುಂಕುಮ, ಬಜೆ, ಲವಂಗಚಕ್ಕೆ, ಸಮಸ್ತ ವಿಧವಾದ ಸಾಂಬ್ರಾಣಿ ಗಿಡಗಳು, ರಕ್ತಬೋಳ, ಅಗುರು, ಸಕಲ ಮುಖ್ಯ ಸುಗಂಧದ್ರವ್ಯ ಇವುಗಳೇ ಚಿಗುರುತ್ತವೆ.
15ಉದ್ಯಾನಗಳಿಗೆ ಹಾದು ಹೋಗುವ ಬುಗ್ಗೆ, ಉಕ್ಕುತ್ತಿರುವ ಬಾವಿ, ಲೆಬನೋನಿನಿಂದ ಹರಿಯುವ ಕಾಲುವೆ ನಿನ್ನಲ್ಲಿವೆ.
16ಉತ್ತರದ ಗಾಳಿಯೇ ಏಳು, ದಕ್ಷಿಣದ ಗಾಳಿಯೇ ಬೀಸು! ನನ್ನ ತೋಟದ ಸುಗಂಧಗಳು ಹರಡುವ ಹಾಗೆ ಅದರ ಮೇಲೆ ಸುಳಿದಾಡು. ಎನ್ನಿನಿಯನು ತನ್ನ ತೋಟದೊಳಗೆ ಸೇರಿ ತನ್ನ ಉತ್ತಮ ಫಲಗಳನ್ನು ತಾನೇ ಭುಜಿಸಲಿ.