2ಎಲ್ಲವುಗಳು ಎಲ್ಲರಿಗೂ ಒಂದೇ ಬಗೆಯಾಗಿ ಸಂಭವಿಸುವುದು. ನೀತಿವಂತನಿಗೂ ಮತ್ತು ದುಷ್ಟನಿಗೂ, ಒಳ್ಳೆಯವನಿಗೂ ಮತ್ತು ಕೆಟ್ಟವನಿಗೂ, ಶುದ್ಧನಿಗೂ ಮತ್ತು ಅಶುದ್ಧನಿಗೂ, ಯಜ್ಞವನ್ನು ಅರ್ಪಿಸುವವನಿಗೂ ಮತ್ತು ಅರ್ಪಿಸದವನಿಗೂ ಒಂದೇ ಗತಿಯಾಗುವುದು. ಒಳ್ಳೆಯವನು ಹೇಗೋ ಹಾಗೆಯೇ ಪಾಪಿಯೂ ಇರುವನು. ಆಣೆಯಿಡುವವನು ಹೇಗೋ ಹಾಗೆಯೇ ಆಣೆಗೆ ಭಯಪಡುವವನೂ ಇರುವನು.
3ಈ ಲೋಕದಲ್ಲಿ ನಡೆಯುವ ಎಲ್ಲಾ ಸಂಗತಿಗಳಿಗೂ ಕೆಟ್ಟ ಪ್ರತಿಫಲ ಉಂಟು ಮತ್ತು ಎಲ್ಲರಿಗೂ ಒಂದೇ ಗತಿಯಾಗುವುದು. ಇದಲ್ಲದೆ ಮನುಷ್ಯರ ಹೃದಯದಲ್ಲಿ ಕೆಟ್ಟತನವು ತುಂಬಿದೆ. ಅವರು ಬದುಕಿರುವ ತನಕ ಹುಚ್ಚುತನವು ಅವರ ಮನಸ್ಸನ್ನು ಹಿಡಿದಿರುವುದು. ಅನಂತರ ಅವರು ಸಾಯುತ್ತಾರೆ.
4ಜೀವಿತರ ಗುಂಪಿನಲ್ಲಿ ಸೇರಿದವನಿಗೆ ನಿರೀಕ್ಷೆಯುಂಟು. ಸತ್ತ ಸಿಂಹಕ್ಕಿಂತ ಬದುಕಿರುವ ನಾಯಿಯೇ ಲೇಸು.
5ಜೀವಿಸುವವರಿಗೆ ಸಾಯುತ್ತೇವೆಂಬ ತಿಳಿವಳಿಕೆಯು ಉಂಟು. ಸತ್ತವರಿಗೋ ಯಾವ ತಿಳಿವಳಿಕೆಯೂ ಇಲ್ಲ. ಅವರಿಗೆ ಇನ್ನು ಮೇಲೆ ಪ್ರತಿಫಲವು ಇಲ್ಲ. ಅವರ ಜ್ಞಾಪಕವೇ ಇಲ್ಲ.