Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಪ್ರಕ

ಪ್ರಕ 8

Help us?
Click on verse(s) to share them!
1ಆತನು ಏಳನೆಯ ಮುದ್ರೆಯನ್ನು ಒಡೆದಾಗ ಸುಮಾರು ಅರ್ಧಗಂಟೆ ಕಾಲ ಪರಲೋಕದಲ್ಲಿ ನಿಶ್ಯಬ್ದವಾಯಿತು.
2ಆಗ ದೇವರ ಸನ್ನಿಧಿಯಲ್ಲಿ ನಿಂತಿರುವ ಏಳು ದೇವದೂತರನ್ನು ಕಂಡೆನು. ಅವರಿಗೆ ಏಳು ತುತ್ತೂರಿಗಳು ಕೊಡಲ್ಪಟ್ಟವು.
3ಅನಂತರ ಮತ್ತೊಬ್ಬ ದೇವದೂತನು ಬಂದನು, ಅವನು ಚಿನ್ನದ ಧೂಪಾರತಿ ಹಿಡಿದುಕೊಂಡು ಯಜ್ಞವೇದಿಯ ಬಳಿಯಲ್ಲಿ ನಿಂತನು. ಸಿಂಹಾಸನದ ಮುಂದಣ ಚಿನ್ನದ ಧೂಪವೇದಿಯ ಮೇಲೆ ಪರಿಶುದ್ಧ ಜನರೆಲ್ಲರ ಪ್ರಾರ್ಥನೆಗಳೊಂದಿಗೆ ಸಮರ್ಪಿಸುವುದಕ್ಕಾಗಿ ಅವನಿಗೆ ಬಹಳ ಧೂಪವು ಕೊಡಲ್ಪಟ್ಟಿತು.
4ಆಗ ಧೂಪದ ಹೊಗೆಯು ದೇವದೂತನ ಕೈಯಿಂದ ಹೊರಟು ದೇವಜನರ ಪ್ರಾರ್ಥನೆಗಳೊಂದಿಗೆ ಸೇರಿ ದೇವರ ಸನ್ನಿಧಿಗೆ ಏರಿಹೋಯಿತು.
5ತರುವಾಯ ಆ ದೇವದೂತನು ಧೂಪಾರತಿಯನ್ನು ತೆಗೆದುಕೊಂಡು ಯಜ್ಞವೇದಿಯ ಬೆಂಕಿಯಿಂದ ಅದನ್ನು ತುಂಬಿಸಿ ಭೂಮಿಯ ಮೇಲೆ ಎಸೆದನು. ಆಗ ಗರ್ಜಿಸುವ ಗುಡುಗು, ಮಹಾಶಬ್ದಗಳು, ಮಿಂಚು, ಭೂಕಂಪವು ಉಂಟಾದವು.
6ಏಳು ತುತ್ತೂರಿಗಳನ್ನು ಹಿಡಿದಿರುವ ಏಳು ಮಂದಿ ದೇವದೂತರು ತುತ್ತೂರಿಗಳನ್ನು ಊದಲು ಸಿದ್ಧರಾದರು.
7ಮೊದಲನೆಯ ದೇವದೂತನು ತನ್ನ ತುತ್ತೂರಿಯನ್ನೂದಲು ರಕ್ತ ಮಿಶ್ರಿತವಾದ ಆಲಿಕಲ್ಲಿನ ಮಳೆಯೂ ಬೆಂಕಿಯೂ ಭೂಮಿಯ ಮೇಲೆ ಸುರಿಯಿತು. ಭೂಮಿಯ ಮೂರರಲ್ಲಿ ಒಂದು ಭಾಗವು ಸುಟ್ಟು ಹೋಯಿತು. ಮರಗಳಲ್ಲಿ ಮೂರರಲ್ಲೊಂದು ಭಾಗ ಸುಟ್ಟು ಹೋದವು. ಹಸಿರು ಹುಲ್ಲೆಲ್ಲಾ ಸುಟ್ಟು ಹೋಯಿತು.
8ಎರಡನೆಯ ದೇವದೂತನು ತನ್ನ ತುತ್ತೂರಿಯನ್ನು ಊದಿದನು. ಆಗ ಬೆಂಕಿಯಿಂದ ಉರಿಯುತ್ತಿರುವ ದೊಡ್ಡ ಬೆಟ್ಟವೋ ಎಂಬಂತಿರುವ ವಸ್ತುವನ್ನು ಸಮುದ್ರಕ್ಕೆ ಎಸೆಯಲಾಯಿತು. ಆಗ ಸಮುದ್ರದೊಳಗೆ ಮೂರರಲ್ಲಿ ಒಂದು ಭಾಗ ರಕ್ತವಾಯಿತು.
9ಸಮುದ್ರದ ಜೀವಿಗಳಲ್ಲಿ ಮೂರರಲ್ಲಿ ಒಂದು ಭಾಗವು ಸತ್ತವು ಮತ್ತು ಹಡಗುಗಳಲ್ಲಿ ಮೂರರಲ್ಲಿ ಒಂದು ಭಾಗವು ನಾಶವಾದವು.
10ಮೂರನೆಯ ದೇವದೂತನು ತನ್ನ ತುತ್ತೂರಿಯನ್ನು ಊದಿದನು. ಆಗ ಪಂಜಿನಂತೆ ಉರಿಯುವ ಒಂದು ದೊಡ್ಡ ನಕ್ಷತ್ರವು ಆಕಾಶದಿಂದ ನದಿಗಳ ಹಾಗೂ ನೀರಿನ ಬುಗ್ಗೆಗಳ ಮೂರರಲ್ಲಿ ಒಂದು ಭಾಗದ ಮೇಲೆ ಬಿದ್ದಿತು.
11ಆ ನಕ್ಷತ್ರದ ಹೆಸರು ಮಾಚಿಪತ್ರೆ. ನೀರಿನ ಮೂರರಲ್ಲಿ ಒಂದು ಭಾಗ ಮಾಚಿಪತ್ರೆಯಂತೆ ವಿಷವಾಯಿತು ಮತ್ತು ಆ ನೀರು ಕಹಿಯಾದ್ದರಿಂದ ಅನೇಕರು ಸತ್ತುಹೋದರು.
12ನಾಲ್ಕನೆಯ ದೇವದೂತನು ತನ್ನ ತುತ್ತೂರಿಯನ್ನು ಊದಿದನು, ಆಗ ಸೂರ್ಯನ ಮೂರರಲ್ಲಿ ಒಂದು ಭಾಗಕ್ಕೆ ತೊಂದರೆಯುಂಟಾಗಿ ಕತ್ತಲಾಯಿತು. ಅದೇ ಪ್ರಕಾರ ಚಂದ್ರನಲ್ಲಿ ಮತ್ತು ನಕ್ಷತ್ರಗಳಲ್ಲಿ ಮೂರರಲ್ಲಿ ಒಂದು ಭಾಗಕ್ಕೆ ತೊಂದರೆಯುಂಟಾಗಿ ಕತ್ತಲಾಗಿ ಹೋಯಿತು. ಇದರಿಂದ ಹಗಲಿನಲ್ಲಿ ಮೂರರಲ್ಲಿ ಒಂದು ಭಾಗವು ಪ್ರಕಾಶವಿಲ್ಲದೆ ಕತ್ತಲಾಗಿ, ರಾತ್ರಿಯ ಹಾಗೆಯೇ ಆಯಿತು.
13ಆ ಮೇಲೆ ನಾನು ನೋಡಲಾಗಿ ಇಗೋ ಒಂದು ಹದ್ದು ಆಕಾಶದ ಮಧ್ಯದಲ್ಲಿ ಹಾರಾಡುತ್ತಿತ್ತು, ಅದರ ಕೂಗು ನನಗೆ ಕೇಳಿಸಿತು. ಅದು, “ಇನ್ನು ಉಳಿದ ಮೂವರು ದೇವದೂತರು ತುತ್ತೂರಿಯನ್ನು ಊದುವಾಗ ಭೂನಿವಾಸಿಗಳಿಗೆ ಕೇಡು, ಕೇಡು, ಕೇಡು” ಎಂದು ಮಹಾಶಬ್ದದಿಂದ ಕೂಗುವುದನ್ನು ಕೇಳಿಸಿಕೊಂಡೆನು.