Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಎಫೆ

ಎಫೆ 5

Help us?
Click on verse(s) to share them!
1ಆದುದರಿಂದ ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ.
2ಕ್ರಿಸ್ತನು ನಮ್ಮನ್ನು ಪ್ರೀತಿಸಿ ನಮ್ಮೆಲ್ಲರಿಗೋಸ್ಕರ ತನ್ನನ್ನೇ ದೇವರಿಗೆ ಸುವಾಸನೆಯಾದ ಕಾಣಿಕೆಯಾಗಿಯೂ, ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.
3ಜಾರತ್ವ ಮತ್ತು ಯಾವ ವಿಧವಾದ ಅಶುದ್ಧತ್ವ ಅಥವಾ ದ್ರವ್ಯಾಶೆ ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು, ಇವುಗಳಿಗೆ ದೂರವಾಗಿರುವುದೇ ದೇವಜನರಿಗೆ ಯೋಗ್ಯವಾದದ್ದು.
4ಹೊಲಸು ಮಾತು, ಹುಚ್ಚು ಮಾತು, ಕುಚೋದ್ಯ ಇವು ಬೇಡ. ಇವು ಅಯುಕ್ತವಾಗಿವೆ. ಆದರೆ ಇವುಗಳಿಗೆ ಪ್ರತಿಯಾಗಿ ದೇವರಿಗೆ ಕೃತಜ್ಞತಾಸ್ತುತಿಮಾಡಿರಿ.
5ಜಾರನಿಗಾಗಲಿ, ದುರಾಚಾರಿಗಾಗಲಿ, ವಿಗ್ರಹಾರಾಧಕನಾಗಿರುವ ಲೋಭಿಗಾಗಲಿ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯತೆ ಇಲ್ಲವೆಂದು ನಿಮಗೆ ನಿಶ್ಚಯವಾಗಿ ತಿಳಿದಿರಲಿ.
6ಹುರುಳಿಲ್ಲದ ಮಾತುಗಳಿಂದ ಯಾರು ನಿಮ್ಮನ್ನು ವಂಚಿಸದಿರಲಿ, ಇಂಥ ಕೃತ್ಯಗಳ ನಿಮಿತ್ತ ದೇವರ ಕೋಪವು ಆತನಿಗೆ ಅವಿಧೇಯರಾಗಿರುವವರ ಮೇಲೆ ಬರುತ್ತದೆ.
7ಆದುದರಿಂದ ನೀವು ಅವರೊಂದಿಗೆ ಪಾಲುಗಾರರಾಗಿರಬೇಡಿರಿ.
8ಏಕೆಂದರೆ ನೀವು ಹಿಂದಿನ ಕಾಲದಲ್ಲಿ ಕತ್ತಲೆಯಾಗಿದ್ದಿರಿ, ಆದರೆ ಈಗ ನೀವು ಕರ್ತನಲ್ಲಿದ್ದು ಬೆಳಕಾಗಿದ್ದೀರಿ. ಬೆಳಕಿನವರಂತೆ ನಡೆದುಕೊಳ್ಳಿರಿ.
9ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಾಣಿಸಿಕೊಳ್ಳುತ್ತದೆ.
10ಕರ್ತನಿಗೆ ಮೆಚ್ಚಿಕೆಯಾದದ್ದು ಏನೆಂಬುದನ್ನು ಪರಿಶೋಧಿಸಿ ತಿಳಿದುಕೊಳ್ಳಿರಿ.
11ನಿಷ್ಪ್ರಯೋಜಕವಾದ ಕತ್ತಲೆಯ ಕೃತ್ಯಗಳಲ್ಲಿ ಪಾಲುಗಾರರಾಗಿರದೆ ಅವುಗಳನ್ನು ಬಯಲಿಗೆಳೆದು ಖಂಡಿಸಿರಿ.
12ಆ ಜನರು ರಹಸ್ಯವಾಗಿ ನಡಿಸುವ ಕೆಲಸಗಳನ್ನು ಕುರಿತು ಹೇಳುವುದಕ್ಕೂ ಅವಮಾನಕರವಾಗಿದೆ.
13ಬೆಳಕಿನಿಂದ ಎಲ್ಲಾ ಕೃತ್ಯಗಳ ನಿಜಗುಣ ಬಹಿರಂಗವಾಗುತ್ತದೆ. ಯಾಕೆಂದರೆ ಎಲ್ಲಾವನ್ನೂ ಬಹಿರಂಗಪಡಿಸುವಂಥದ್ದು ಬೆಳಕೇ.
14ಆದ್ದರಿಂದ, “ನಿದ್ರೆ ಮಾಡುವವನೇ, ಎಚ್ಚರವಾಗು! ಸತ್ತವರನ್ನು ಬಿಟ್ಟು ಏಳು! ಆಗ ಕ್ರಿಸ್ತನು ನಿನ್ನಲ್ಲಿ ಪ್ರಕಾಶಿಸುವನು” ಎಂದು ಹೇಳಿಯದೆಯಲ್ಲಾ.
15ಆದಕಾರಣ ನೀವು ನಡೆದುಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಅಜ್ಞಾನಿಗಳಾಗಿರದೆ ಜ್ಞಾನವಂತರಾಗಿರಿ.
16ಈ ದಿನಗಳು ಕೆಡುಕಿನಿಂದ ಕೂಡಿದವುಗಳಾಗಿರುವುದ್ದರಿಂದ ಕಾಲವನ್ನು ಸದುಪಯೋಗಪಡಿಸಿಕೊಳ್ಳಿರಿ.
17ಮತ್ತು ಬುದ್ಧಿಹೀನರಾಗಿ ನಡೆಯದೆ ಕರ್ತನ ಚಿತ್ತವೇನೆಂಬುದನ್ನು ತಿಳಿದುಕೊಳ್ಳಿರಿ.
18ಮದ್ಯಪಾನ ಮಾಡಿ ಮತ್ತರಾಗಬೇಡಿರಿ. ಅದರಿಂದ ಪಟಿಂಗತನವು ಹುಟ್ಟುತ್ತದೆ. ಆದರೆ ಪವಿತ್ರಾತ್ಮಭರಿತರಾಗಿದ್ದು,

19ಕೀರ್ತನೆಗಳಿಂದಲೂ, ಸ್ತುತಿಪದಗಳಿಂದಲೂ, ಆತ್ಮೀಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ ನಿಮ್ಮ ಹೃದಯಗಳಲ್ಲಿ ಕರ್ತನನ್ನು ಹಾಡಿ ಕೊಂಡಾಡಿರಿ.
20ಯಾವಾಗಲೂ ಎಲ್ಲಾ ಕಾರ್ಯಗಳಿಗಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ತಂದೆಯಾದ ದೇವರಿಗೆ ಸ್ತೋತ್ರವನ್ನು ಮಾಡಿರಿ.
21ಕ್ರಿಸ್ತನಿಗೆ ಭಯಪಡುವವರಾಗಿದ್ದು, ಒಬ್ಬರಿಗೊಬ್ಬರು ವಿನಯವುಳ್ಳವರಾಗಿ ನಡೆದುಕೊಳ್ಳಿರಿ.
22ಸತಿಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ.
23ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ. ಕ್ರಿಸ್ತನು ತಾನೇ ಸಭೆಯೆಂಬ ದೇಹಕ್ಕೆ ರಕ್ಷಕನಾಗಿದ್ದಾನೆ.
24ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರೀಯರು ತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿರಬೇಕು.
25ಪತಿಯರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ.
26ಆತನು ಅದನ್ನು ಪಾವನಗೊಳಿಸುವುದಕ್ಕಾಗಿ ತನ್ನನ್ನು ತಾನೇ ಒಪ್ಪಿಸಿಕೊಟ್ಟನು.
27ಅದನ್ನು ಕಳಂಕ ಸುಕ್ಕು ಮುಂತಾದದ್ದೊಂದೂ ಇಲ್ಲದಂತೆ ಪರಿಶುದ್ಧವೂ, ನಿರ್ದೋಷವೂ, ಮಹಿಮೆಯುಳ್ಳದ್ದೂ ಆಗಿರುವ ಸಭೆಯನ್ನಾಗಿ ತನ್ನೆದುರಿನಲ್ಲಿ ನಿಲ್ಲಿಸಿಕೊಳ್ಳಬೇಕೆಂದು ವಾಕ್ಯೋಪದೇಶ ಸಹಿತವಾದ ಜಲಸ್ನಾನವನ್ನು ಮಾಡಿಸಿ ಶುದ್ಧಿಮಾಡಿದನು.
28ಹಾಗೆಯೇ ಗಂಡದಿರು ಸಹ ತಮ್ಮ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ.
29ಯಾರೂ ಎಂದೂ ಸ್ವಂತ ಶರೀರವನ್ನು ಹಗೆಮಾಡಿದ್ದಿಲ್ಲವಲ್ಲ, ಎಲ್ಲರೂ ತಮ್ಮ ಶರೀರಗಳನ್ನು ಪೋಷಿಸಿ ಪಾಲನೆ ಮಾಡುತ್ತಾರಷ್ಟೇ.
30ಸಭೆಯೆಂಬ ದೇಹಕ್ಕೆ ನಾವು ಅಂಗಗಳಾಗಿದ್ದೇವೆ ಸಭೆಯೆಂಬ ಈ ದೇಹವನ್ನು ಕ್ರಿಸ್ತನು ಹಾಗೆಯೇ ಪೋಷಿಸಿ ಪಾಲನೆ ಮಾಡುತ್ತಾ ಬಂದಿದ್ದಾನೆ.
31“ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು, ಅವರಿಬ್ಬರೂ ಒಂದೇ ಶರೀರವಾಗಿರುವರು.” ಎಂದು ಬರೆದದೆಯಲ್ಲಾ.
32ನಾನು ಕ್ರಿಸ್ತನಿಗೂ ಸಭೆಗೂ ಇರುವ ಸಂಬಂಧವನ್ನು ಕುರಿತು ಮಾತನಾಡುತ್ತಿದ್ದೇನೆ, ಇದುವರೆಗೆ ಗುಪ್ತವಾಗಿದ್ದ ಈ ಮರ್ಮವು ಬಹು ಗಂಭೀರವಾದದ್ದು.
33ಆದರೆ ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು. ಪ್ರತಿ ಹೆಂಡತಿಯೂ ತನ್ನ ಗಂಡನಿಗೆ ಗೌರವದಿಂದ ನಡೆದುಕೊಳ್ಳಬೇಕು.