Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಇಬ್ರಿ

ಇಬ್ರಿ 12

Help us?
Click on verse(s) to share them!
1ಆದಕಾರಣ ಇಷ್ಟು ಸಾಕ್ಷಿಗಳ ದೊಡ್ಡ ಗುಂಪು ಮೇಘದಂತೆ ನಮ್ಮ ಸುತ್ತಲು ಇರುವುದರಿಂದ ನಮಗೆ ಅಭ್ಯಂತರಪಡಿಸುವ ಎಲ್ಲಾ ಭಾರವನ್ನೂ, ಸುಲಭವಾಗಿ ಮುತ್ತಿಕೊಳ್ಳುವ ಪಾಪವನ್ನು ಸಹ ನಾವು ತೆಗೆದಿಟ್ಟು, ನಂಬಿಕೆಯನ್ನು ಹುಟ್ಟಿಸುವಾತನೂ ಅದನ್ನು ಪರಿಪೂರ್ಣಗೊಳಿಸುವಾತನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸಹನೆಯಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅಪಮಾನವನ್ನು ಅಲಕ್ಷ್ಯಮಾಡಿ, ಶಿಲುಬೆಯ ಮರಣವನ್ನು ಸಹಿಸಿಕೊಂಡು, ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನನಾಗಿದ್ದಾನೆ.
3ನೀವು ಮನಗುಂದಿದವರಾಗಿ ಬೇಸರಗೊಳ್ಳದಂತೆ ಯೇಸುವನ್ನು ಕುರಿತು ಯೋಚಿಸಿರಿ. ಆತನು ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು.
4ನೀವು ಪಾಪಕ್ಕೆ ವಿರೋಧವಾಗಿ ಹೋರಾಡುವುದರಲ್ಲಿ ರಕ್ತವನ್ನು ಸುರಿಸುವಷ್ಟು ಹೋರಾಡಲಿಲ್ಲವಲ್ಲ.
5ಮಕ್ಕಳಿಗೆ ಹೇಳುವಂತೆ ನಿಮಗೆ ಹೇಳಿದ ಎಚ್ಚರಿಕೆಯ ಮಾತುಗಳನ್ನು ಮರೆತುಬಿಟ್ಟಿದ್ದೀರೋ? ಅದೇನೆಂದರೆ, “ನನ್ನ ಮಗನೇ, ಕರ್ತನ ಶಿಕ್ಷೆಯನ್ನು ಕಡೆಗಣಿಸಬೇಡ. ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.”
6ಏಕೆಂದರೆ ಕರ್ತನು ಯಾರನ್ನು ಪ್ರೀತಿಸುತ್ತಾನೋ ಅವರನ್ನು ಶಿಕ್ಷಿಸುತ್ತಾನೆ. ತಾನು ಮಗನಂತೆ ಸ್ವೀಕರಿಸುವ ಪ್ರತಿಯೊಬ್ಬನನ್ನು ದಂಡಿಸುತ್ತಾನೆ ಎಂಬುದಾಗಿದೆ.
7ನಿಮ್ಮ ಶಿಸ್ತಿಗಾಗಿಯೇ, ನಿಮಗೆ ಶಿಕ್ಷೆಯಾಗುತ್ತದೆಂದು ಅದನ್ನು ಸಹಿಸಿಕೊಳ್ಳಿರಿ. ದೇವರು ನಿಮ್ಮನ್ನು ಮಕ್ಕಳೆಂದು ನಡೆಸುತ್ತಾನೆ. ಯಾಕೆಂದರೆ ತಂದೆಯಿಂದ ಶಿಕ್ಷೆ ಹೊಂದದ ಮಗನೆಲ್ಲಿದ್ದಾನೆ?
8ಎಲ್ಲರೂ ಪಾಲುಗಾರರಬೇಕಾದ ಶಿಕ್ಷೆಯು ನಿಮಗುಂಟಾಗದಿದ್ದರೆ ನೀವು ಹಾದರದಿಂದ ಹುಟ್ಟಿದವರೇ ಹೊರತು ಆತನ ಮಕ್ಕಳಲ್ಲ.
9ಇದು ಮಾತ್ರವಲ್ಲದೆ ನಮ್ಮನ್ನು ಶಿಕ್ಷಿಸಿದ ಲೌಕಿಕ ತಂದೆಗಳನ್ನು ನಾವು ಸನ್ಮಾನಿಸಿತ್ತೇವಲ್ಲ. ನಮ್ಮ ಆತ್ಮಗಳಿಗೆ ತಂದೆಯಾಗಿರುವಾತನಿಗೆ ನಾವು ಇನ್ನೂ ಹೆಚ್ಚಾಗಿ ಅಧೀನರಾಗಿ ಜೀವಿಸಬೇಕಲ್ಲವೇ?
10ನಮ್ಮ ಲೌಕಿಕ ತಂದೆಗಳು ಮನಸ್ಸಿಗೆ ಸರಿದೋರಿದಂತೆ ಕೆಲವು ಕಾಲ ಮಾತ್ರ ನಮ್ಮನ್ನು ಶಿಕ್ಷಿಸಿದರು. ಆದರೆ ದೇವರು ತನ್ನ ಪರಿಶುದ್ಧತೆಯಲ್ಲಿ ನಾವು ಪಾಲುಗಾರರಾಗಬೇಕೆಂದು ನಮ್ಮ ಹಿತಕ್ಕಾಗಿಯೇ ಶಿಕ್ಷಿಸುತ್ತಾನೆ.
11ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರವಾಗಿ ತೋರದೆ, ದುಃಖಕರವಾಗಿ ತೋರುತ್ತದೆ. ಆದರೆ ಶಿಸ್ತಿನ ಅಭ್ಯಾಸವನ್ನು ಹೊಂದಿದವರು, ಮುಂದೆ ಸಮಾಧಾನವುಳ್ಳ ನೀತಿಯ ಫಲವನ್ನು ಪಡೆಯುತ್ತಾರೆ.
12ಆದುದ್ದರಿಂದ ಜೋಲುಬಿದ್ದ ಕೈಗಳನ್ನೂ ಮತ್ತು ನಡುಗುವ ಮೊಣಕಾಲುಗಳನ್ನೂ ಬಲಪಡಿಸಿರಿ.
13ನಿಮ್ಮ ಪಾದಗಳಿಗೆ ನೇರವಾದ ದಾರಿಯನ್ನು ಮಾಡಿಕೊಳ್ಳಿರಿ. ಹೀಗೆ ಮಾಡಿದರೆ ಕುಂಟುವ ಕಾಲು ಉಳುಕಿ ಹೋಗದೇ ವಾಸಿಯಾಗುವುದು.
14ಎಲ್ಲರೊಂದಿಗೆ ಸಮಾಧಾನದಿಂದ ಜೀವಿಸಲು ಮತ್ತು ಪರಿಶುದ್ಧರಾಗಿರಲು ಪ್ರಯತ್ನಮಾಡಿರಿ. ಪರಿಶುದ್ಧತೆಯಿಲ್ಲದೆ ಯಾವನೂ ಕರ್ತನನ್ನು ಕಾಣುವುದಿಲ್ಲ.
15ನಿಮ್ಮಲ್ಲಿ ಯಾವನೂ ದೇವರ ಕೃಪೆಯಿಂದ ತಪ್ಪಿ ಹಿಂಜಾರಿ ಹೋಗದಂತೆಯೂ, ಯಾವ ಕಹಿಯಾದ ಬೇರೂ ನಿಮ್ಮಲ್ಲಿ ಚಿಗುರಿ ಅಸಮಾಧಾನವನ್ನು ಹುಟ್ಟಿಸಿ ಅನೇಕರನ್ನು ಮಲಿನಪಡಿಸದಂತೆ ನೋಡಿಕೊಳ್ಳಿರಿ.
16ಯಾವ ಜಾರನಾಗಲಿ, ಏಸಾವನಂಥ ಪ್ರಾಪಂಚಿಕನಾಗಲಿ ನಿಮ್ಮಲ್ಲಿ ಇರದಂತೆ ಜಾಗ್ರತೆ ವಹಿಸಿಕೊಳ್ಳಿರಿ. ಆ ಏಸಾವನು ಒಂದೇ ಒಂದು ಊಟಕ್ಕೋಸ್ಕರ ತನ್ನ ಚೊಚ್ಚಲುತನದ ಹಕ್ಕನ್ನು ಮಾರಿಬಿಟ್ಟನು.
17ಅನಂತರದಲ್ಲಿ ತನ್ನ ತಂದೆಯ ಆಶೀರ್ವಾದವನ್ನು ಬಾಧ್ಯವಾಗಿ ಹೊಂದಬೇಕೆಂದು ಕಣ್ಣೀರು ಸುರಿಸುತ್ತಾ ಬೇಡಿಕೊಂಡರೂ, ಪಶ್ಚಾತ್ತಾಪಕ್ಕೆ ಮಾರ್ಗವಿಲ್ಲದೆ ನಿರಾಕರಿಸಲ್ಪಟ್ಟನೆಂದು ನೀವು ಬಲ್ಲವರಾಗಿದ್ದೀರಿ.
18ನೀವು ಮುಟ್ಟಬಹುದಾದ ಮತ್ತು ಬೆಂಕಿ ಹೊತ್ತಿದಂಥ ಬೆಟ್ಟಕ್ಕೂ, ಕಾರ್ಮೋಡ, ಕಗ್ಗತ್ತಲೆ, ಬಿರುಗಾಳಿ, ತುತ್ತೂರಿಯ ಶಬ್ದ, ಮಾತುಗಳ ಧ್ವನಿ ಎಂಬಿವುಗಳ ಬಳಿಗಲ್ಲ ನೀವು ಬಂದಿರುವುದು. ಆ ಧ್ವನಿಯನ್ನು ಕೇಳಿದವರು ಇನ್ನೆಂದಿಗೂ ಆ ಧ್ವನಿ ತಮ್ಮೊಂದಿಗೆ ಮಾತನಾಡುವುದೇ ಬೇಡವೆಂದು ಕೇಳಿಕೊಂಡರು.
20ಏಕೆಂದರೆ, “ಒಂದು ಮೃಗವಾದರೂ ಬೆಟ್ಟವನ್ನು ಮುಟ್ಟಿದರೆ ಅದನ್ನು ಕಲ್ಲೆಸೆದು ಕೊಲ್ಲಬೇಕೆಂಬ” ವಿಧಿಯನ್ನು ಅವರಿಂದ ತಾಳಲಾಗಲಿಲ್ಲ.

21ಇದಲ್ಲದೆ ಆ ದೃಶ್ಯವು ಅತಿ ಭಯಾನಕವಾಗಿದ್ದದರಿಂದ ಮೋಶೆಯು, “ನಾನು ಹೆದರಿ, ನಡುಗುತ್ತಿದ್ದೇನೆ” ಎಂದು ಹೇಳಿದನು.
22ಆದರೆ ನೀವು ಚೀಯೋನ್ ಪರ್ವತಕ್ಕೂ, ಜೀವಸ್ವರೂಪನಾದ ದೇವರ ಪಟ್ಟಣವಾಗಿರುವ ಪರಲೋಕದ ಯೆರೂಸಲೇಮಿಗೂ, ಉತ್ಸವ ಸಂಘದಲ್ಲಿ ಕೂಡಿರುವ ಕೋಟ್ಯಾನುಕೋಟಿ ದೇವದೂತರ ಬಳಿಗೂ,
23ಪರಲೋಕದಲ್ಲಿ ಹೆಸರು ಬರೆಸಿಕೊಂಡಿರುವ ಚೊಚ್ಚಲ ಮಕ್ಕಳ ಸಭೆಗೂ, ಎಲ್ಲರಿಗೆ ನ್ಯಾಯಾಧಿಪತಿಯಾಗಿರುವ ದೇವರ ಬಳಿಗೂ, ಪರಿಪೂರ್ಣರಾಗಿರುವ ನೀತಿವಂತರ ಆತ್ಮಗಳ ಬಳಿಗೂ,
24ಹೊಸ ಒಡಂಬಡಿಕೆಗೆ ಮಧ್ಯಸ್ಥನಾಗಿರುವ ಯೇಸುವಿನ ಬಳಿಗೂ, ಹೇಬೆಲನ ರಕ್ತಕ್ಕಿಂತ ಉತ್ತಮವಾಗಿ ಮಾತನಾಡುವ ಪ್ರೋಕ್ಷಣ ರಕ್ತದ ಬಳಿಗೂ ಬಂದಿದ್ದೀರಿ.
25ಮಾತನಾಡುತ್ತಿರುವಾತನನ್ನು ನೀವು ಅಸಡ್ಡೆ ಮಾಡದಂತೆ ನೋಡಿಕೊಳ್ಳಿರಿ. ಏಕೆಂದರೆ ಭೂಮಿಯ ಮೇಲೆ ದೈವೋಕ್ತಿಗಳನ್ನಾಡಿದವನನ್ನು ಅಸಡ್ಡೆಮಾಡಿದವರು ದಂಡನೆಗೆ ತಪ್ಪಿಸಿಕೊಳ್ಳಲಾಗದಿದ್ದರೆ, ಪರಲೋಕದಿಂದ ಮಾತನಾಡುವಾತನನ್ನು ಬಿಟ್ಟು ದೂರವಾಗಿ ನಾವು ಹೋದರೆ ದಂಡನೆಯಿಂದ ಹೇಗೆ ತಪ್ಪಿಸಿಕೊಂಡೆವು?
26ಆತನ ಧ್ವನಿಯು ಆಗ ಭೂಮಿಯನ್ನು ಕದಲಿಸಿತು. ಈಗಲಾದರೋ ಆತನು, “ಇನ್ನೊಂದೇ ಸಾರಿ ನಾನು ಭೂಮಿಯನ್ನು ಮಾತ್ರವಲ್ಲದೆ ಪರಲೋಕವನ್ನೂ ಕದಲಿಸುತ್ತೇನೆ” ಎಂದು ವಾಗ್ದಾನಮಾಡಿ ಹೇಳಿದ್ದಾನೆ.
27“ಇನ್ನೊಂದೇ ಸಾರಿ,” ಎಂಬ ಈ ಮಾತನ್ನು ಯೋಚಿಸಿದರೆ, ಕದಲಿಸಿರುವ ವಸ್ತುಗಳು ನಿರ್ಮಿತವಾದವುಗಳಾದ್ದರಿಂದ ತೆಗೆದುಹಾಕಲ್ಪಡುತ್ತವೆಂಬುದು ಸ್ಪಷ್ಟವಾಗುತ್ತದೆ. ಆಗ, ಕದಲಿಸದೇ ಇರುವ ವಸ್ತುಗಳು ಸ್ಥಿರವಾಗಿ ನಿಲ್ಲುವವು.
28ಆದ್ದರಿಂದ ಯಾರೂ ಕದಲಿಸಲಾರದ ರಾಜ್ಯವನ್ನು ಪಡೆದುಕೊಳ್ಳುವವರಾದ ನಾವು ಕೃತಜ್ಞತೆಯುಳ್ಳವರಾಗಿ, ಆತನಿಗೆ ಸಮರ್ಪಕವಾದ ಆರಾಧನೆಯನ್ನು ಭಕ್ತಿಯಿಂದಲೂ ಮತ್ತು ಭಯದಿಂದಲೂ ಮಾಡೋಣ.
29ಏಕೆಂದರೆ ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ.