44“ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಸೆಳೆಯದ ಹೊರತು, ಯಾವನೂ ನನ್ನ ಬಳಿಗೆ ಬರಲಾರನು, ಮತ್ತು ನಾನು ಅವನನ್ನು ಕಡೆ ದಿನದಲ್ಲಿ ಎಬ್ಬಿಸುವೆನು.
45‘ಅವರೆಲ್ಲರೂ ದೇವರಿಂದಲೇ ಬೋಧಿಸಲ್ಪಡುವರು’ ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದಿದೆ. ತಂದೆಯಿಂದ ಕೇಳಿ ಕಲಿತ ಪ್ರತಿಯೊಬ್ಬನೂ ನನ್ನ ಬಳಿಗೆ ಬರುತ್ತಾರೆ.
46ದೇವರಿಂದ ಬಂದವನೊಬ್ಬನೇ ತಂದೆಯನ್ನು ನೋಡಿದ್ದಾನೆಯೇ ಹೊರತು ಮತ್ಯಾರು ತಂದೆಯನ್ನು ನೋಡಿಲ್ಲ; ಆತನೊಬ್ಬನೇ ತಂದೆಯನ್ನು ನೋಡಿದವನು.
47ನಂಬುವವನು ನಿತ್ಯಜೀವವನ್ನು ಹೊಂದಿದ್ದಾನೆಂದು ನಿಮಗೆ ನಿಜನಿಜವಾಗಿ ಹೇಳುತ್ತೇನೆ.
48ನಾನೇ ಜೀವದ ರೊಟ್ಟಿ
49ನಿಮ್ಮ ಪೂರ್ವಿಕರು ಅಡವಿಯಲ್ಲಿ ಮನ್ನಾ ತಿಂದರೂ ಸತ್ತು ಹೋದರು.
50ಪರಲೋಕದಿಂದ ಇಳಿದು ಬರುವಂಥ ಆ ರೊಟ್ಟಿ, ಎಂಥದೆಂದರೆ ಅದನ್ನು ತಿಂದವನು ಎಂದಿಗೂ ಸಾಯುವುದಿಲ್ಲ.
51ನಾನೇ ಪರಲೋಕದಿಂದ ಇಳಿದು ಬಂದ ಜೀವವುಳ್ಳ ರೊಟ್ಟಿ. ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಸದಾ ಕಾಲವು ಬದುಕುವನು; ಮತ್ತು ನಾನು ಕೊಡುವ ರೊಟ್ಟಿ ನನ್ನ ದೇಹವೇ, ಅದನ್ನು ಲೋಕದ ಜೀವಕ್ಕಾಗಿ ಕೊಡುವೆನು” ಎಂದು ಹೇಳಿದನು.
52ಆಗ ಯೆಹೂದ್ಯರು, “ಈ ಮನುಷ್ಯನು ತನ್ನ ದೇಹವನ್ನು ತಿನ್ನುವುದಕ್ಕೆ ನಮಗೆ ಹೇಗೆ ಕೊಡುತ್ತಾನೇ?” ಎಂದು ತಮ್ಮತಮ್ಮೊಳಗೆ ವಾಗ್ವಾದಮಾಡಲು ಪ್ರಾರಂಭಿಸಿದರು.
53ಅದಕ್ಕೆ ಯೇಸು ಅವರಿಗೆ, “ನಿಮಗೆ ನಿಜ ನಿಜವಾಗಿ ಹೇಳುತ್ತೇನೆ; ನೀವು ಮನುಷ್ಯಕುಮಾರನ ದೇಹವನ್ನು ತಿಂದು ಮತ್ತು ಆತನ ರಕ್ತವನ್ನು ಕುಡಿಯದೆ ಹೋದರೆ, ನಿಮ್ಮಲ್ಲಿ ನಿತ್ಯಜೀವವಿರುವುದಿಲ್ಲ.
54ಯಾರು ನನ್ನ ದೇಹವನ್ನು ತಿಂದು, ನನ್ನ ರಕ್ತವನ್ನು ಕುಡಿಯುವನೋ ಅವನು ನಿತ್ಯ ಜೀವವನ್ನು ಹೊಂದುವನು. ಮತ್ತು ನಾನು ಅವನನ್ನು ಕಡೆ ದಿನದಲ್ಲಿ ಎಬ್ಬಿಸುವೆನು.
55ಏಕೆಂದರೆ ನನ್ನ ದೇಹವೇ ನಿಜವಾದ ಆಹಾರವೂ ಮತ್ತು ನನ್ನ ರಕ್ತವೇ ನಿಜವಾದ ಪಾನವೂ ಆಗಿದೆ.
56ಯಾರು ನನ್ನ ದೇಹವನ್ನು ತಿಂದು, ನನ್ನ ರಕ್ತವನ್ನು ಕುಡಿದಿದ್ದಾನೋ ಅವನು ನನ್ನಲ್ಲಿ ನೆಲೆಸಿರುತ್ತಾನೆ; ನಾನು ಅವನಲ್ಲಿ ನೆಲೆಸಿರುತ್ತೇನೆ.
57ಜೀವವುಳ್ಳ ತಂದೆಯು ನನ್ನನ್ನು ಅಧಿಕಾರದೊಂದಿಗೆ ಕಳುಹಿಸಿಕೊಟ್ಟಿದ್ದಾನೆ. ನಾನು ತಂದೆಯ ನಿಮಿತ್ತವಾಗಿ ಜೀವಿಸುತ್ತೇನೆ, ಅದರಂತೆ ನನ್ನನ್ನು ತಿನ್ನುವವನೂ ನನ್ನ ನಿಮಿತ್ತವಾಗಿಯೇ ಜೀವಿಸುವನು.
58ಪರಲೋಕದಿಂದ ಇಳಿದು ಬಂದ ರೊಟ್ಟಿಯು ಇದೇ, ನಿಮ್ಮ ಪೂರ್ವಿಕರು ಮನ್ನಾವನ್ನು ತಿಂದರೂ ಸತ್ತರು, ಆದರೆ, ಈ ರೊಟ್ಟಿಯನ್ನು ತಿನ್ನುವವನು ಸದಾಕಾಲಕ್ಕೂ ಜೀವಿಸುವನು” ಎಂದು ಹೇಳಿದನು.