1ದೇವರಿಗೂ ಕರ್ತನಾದ ಯೇಸು ಕ್ರಿಸ್ತನಿಗೂ ದಾಸನಾಗಿರುವ ಯಾಕೋಬನು ಅನ್ಯದೇಶಗಳಲ್ಲಿ ಚದುರಿರುವ ಇಸ್ರಾಯೇಲ್ಯರ ಹನ್ನೆರಡು ಗೋತ್ರದವರಿಗೂ ಬರೆಯುವುದೇನೆಂದರೆ, “ನಿಮಗೆ ಶುಭವಾಗಲಿ.”
2ನನ್ನ ಸಹೋದರರೇ, ನೀವು ನಾನಾವಿಧವಾದ ಕಷ್ಟಗಳನ್ನು ಅನುಭವಿಸುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ತಿಳಿಯಿರಿ.
3ಏಕೆಂದರೆ ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ನಿಮಗೆ ತಾಳ್ಮೆಯನ್ನುಂಟು ಮಾಡುತ್ತದೆಂದು ನೀವು ತಿಳಿಯಿರಿ.
4ಆ ತಾಳ್ಮೆಯು ಸಂಪೂರ್ಣವಾಗಿ ನಿಮ್ಮಲ್ಲಿ ಫಲಿಸಲಿ, ಆಗ ನೀವು ಸರ್ವಸುಗುಣಸಂಪನ್ನರೂ, ಪರಿಪೂರ್ಣರೂ, ಯಾವುದಕ್ಕೂ ಕಡಿಮೆಯಿಲ್ಲದವರೂ ಆಗುವಿರಿ.
5ನಿಮ್ಮಲ್ಲಿ ಯಾರಿಗಾದರು ಜ್ಞಾನದ ಕೊರತೆಯಿರುವುದಾದರೆ ಅವರು ದೇವರನ್ನು ಬೇಡಿಕೊಳ್ಳಲಿ, ಅದು ಅವರಿಗೆ ದೊರಕುವುದು. ಯಾಕೆಂದರೆ ದೇವರು ಹಂಗಿಸದೆ ಎಲ್ಲರಿಗೂ ಉದಾರವಾಗಿ ಕೊಡುವಾತನಾಗಿದ್ದಾನೆ.
6ಆದರೆ ದೇವರ ಬಳಿ ಬೇಡುವವನು ಸ್ವಲ್ಪವೂ ಸಂದೇಹಪಡದೆ ನಂಬಿಕೆಯಿಂದ ಬೇಡಿಕೊಳ್ಳಲಿ. ಸಂದೇಹಪಡುವವನು ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ಅಲೆಯಂತೆ ಅತ್ತಿತ್ತ ಅಲೆಯುತ್ತಿರುತ್ತಾನೆ.
7ಇಂಥವನು ತಾನು ಕರ್ತನಿಂದ ಬೇಡಿಕೊಂಡಿದ್ದೆಲ್ಲವನ್ನು ಹೊಂದುವೆನೆಂದು ಭಾವಿಸದೆ ಇರಲಿ.